ಹಾವೇರಿ: ಮನುಷ್ಯನ ಬದುಕು ಕೇವಲ ಲೌಕಿಕ ಸಂಪತ್ತಿನ ಭಾಗವಾಗದೆ, ಆಧ್ಯಾತ್ಮ ಜ್ಞಾನ ಸಂಪತ್ತಿನ ಮೂಲಕ ಶೃಂಗಾರಗೊಳ್ಳಬೇಕು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
`ನೀರಿಂಗೆ ನೈದಿಲೆಯ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ, ನಾರಿಗೆ ಗುಣವೆ ಶೃಂಗಾರ, ಗಗನಕ್ಕೆ ಚಂದ್ರಮನೆ ಶೃಂಗಾರ, ನಮ್ಮ ಕೂಡಲಸಂಗನ ಶರಣರಿಗೆ ನೂಸಲ ವಿಭೂತಿ ಶೃಂಗಾರ'''''''' ಎಂಬ ಶರಣರ ವಚನದ ಆಶಯವನ್ನು ವಿವರಿಸಿದ ಅವರು, ಶ್ರಾವಣ ಮಾಸವು ಸದಾಚಾರ, ಸದ್ಗುಣಗಳನ್ನು ಆಲಿಸಿ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುವ ಅವಯಾಗಿದೆ ಎಂದರು.
ಭಾರತವು ಬಹು ಸಂಸ್ಕೃತಿಗಳ ದೇಶವಾಗಿದ್ದು, ವಿವಿಧ ಧರ್ಮ, ಜಾತಿ, ಮತ ಹಾಗೂ ಪಂಥಗಳ ಜನರು ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಈ ಸಹಬಾಳ್ವೆಯಲ್ಲಿ ಭಕ್ತಿ ಪಂಥದ ಕೊಡುಗೆ ಮಹತ್ವದ್ದಾಗಿದೆ. ಪ್ರಾಚೀನ ಕರ್ನಾಟಕದಲ್ಲಿ ಬೌದ್ಧ, ಜೈನ, ಹಿಂದೂ, ಸಿಖ್, ಲಿಂಗಾಯತ, ಶೈವ, ವೈಷ್ಣವ ಸೇರಿದಂತೆ ವಿವಿಧ ಪರಂಪರೆಗಳ ಆರಾಧಕರು ಭಕ್ತಿ-ಶ್ರದ್ಧೆಯೊಂದಿಗೆ ನೀತಿ ಪ್ರಸಾರ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.ದಾಸರ ಕೀರ್ತನೆಗಳು, ಜಾನಪದ ಹಾಗೂ ತತ್ವಪದಗಳು ಲೋಕನೀತಿಯನ್ನು ಬೋಧಿಸಿವೆ. ವಚನ ಸಾಹಿತ್ಯವು ಸಾಮಾನ್ಯ ಜನರ ಆಡುಭಾಷೆಯಾದ ಕನ್ನಡದಲ್ಲಿ ಅಂದಿನ ಸಾಮಾಜಿಕ ತಲ್ಲಣಗಳಿಗೆ ಪರಿಹಾರದ ರೂಪದಲ್ಲಿ ಮೂಡಿಬಂದಿದ್ದರಿಂದ ಅದು ಜನಮಾನಸದಲ್ಲಿ ಆಳವಾಗಿ ನೆಲೆನಿಂತಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಸಿ. ಸಿದ್ದನಗೌಡರ ಮಾತನಾಡಿ, ಶ್ರೀ ಮಠವು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದೆ ಎಂದರು.