ಕುಮಟಾ: ಜ್ಞಾನ, ಕೌಶಲ್ಯ, ಆರೋಗ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡ ವ್ಯಕ್ತಿ ಜೀವನದಲ್ಲೆಂದೂ ಸೋಲಲಾರ. ಅವಕಾಶಗಳನ್ನೆಂದೂ ಕೈಬಿಡಬಾರದು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು, ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಎನ್.ಆರ್. ಗಜು ಹೇಳಿದರು.
ಶಾಲಾ ಹಸ್ತಪತ್ರಿಕೆ ’ಅಭಿಜಾತ’ವನ್ನು ಅನಾವರಣಗೊಳಿಸಿದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರತ್ನಾಕರ ನಾಯ್ಕ, ಶಿಸ್ತಿನಿಂದ ವ್ಯಾಸಂಗ ಮಾಡಿ ದೃಢತೆಯಿಂದ ಪರೀಕ್ಷೆಗಳನ್ನು ಎದುರಿಸುವ ಮೂಲಕ ಸದಾ ಪ್ರಗತಿಪಥದಲ್ಲಿ ವಿದ್ಯಾರ್ಥಿಗಳು ಸಾಗಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಯಾವತ್ತೂ ನೆರವಾಗುತ್ತೇನೆ. ಬಾಡ ಜನತಾ ವಿದ್ಯಾಲಯ ನಮ್ಮ ಹೆಮ್ಮೆ ಎಂದರು.
ವಕೀಲೆ ಮಮತಾ ಆರ್. ನಾಯ್ಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್.ಎಸ್. ಭಟ್ ಲೋಕೇಶ್ವರ, ವಿದ್ವಾನ್ ಡಾ. ಗೋಪಾಲಕೃಷ್ಣ ಹೆಗಡೆ, ಎಚ್.ಎಸ್. ಹಳ್ಳೇರ, ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಬ್ರಾಯ ಜಿ. ನಾಯ್ಕ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸುಮುಖ ಆಚಾರಿ, ಮಾನ್ಯ ನಾಯ್ಕ ಇದ್ದರು.ವಾಲಿಬಾಲ್ ಕ್ರೀಡಾಪಟು ಯತೀಶ ನಾಯ್ಕ, ಓಟಗಾರ್ತಿ ಜಯಾ ಗೌಡ, ಬಿಸಿಯೂಟದ ಸಿಬ್ಬಂದಿ ಜಯಾ ಭಟ್ಟ ಅವರನ್ನು ಸನ್ಮಾನಿಸಲಾಯಿತು.