ಶ್ರಾವಣದ ಭಕ್ತಿ ಇಮ್ಮಡಿಸಿದ ಬೆಂಗಳೂರಿನ ಪುಷ್ಪಗಳ ರಾಶಿ!

KannadaprabhaNewsNetwork |  
Published : Sep 02, 2024, 02:10 AM IST
ಪೋಟೋ ಇದೆ. | Kannada Prabha

ಸಾರಾಂಶ

ಶ್ರಾವಣದ ವರಮಹಾಲಕ್ಷ್ಮಿ ಹಬ್ಬ, ನಾಗರಪಂಚಮಿ ಮುಗಿದಿದ್ದರೂ ಅಮಾವಾಸ್ಯೆ ಹಾಗೂ ಮುಂಬರುವ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹೂವುಗಳ ಮಾರಾಟಗಾರರು ಹೆಚ್ಚಿನ ಲಾಭ ಪಡೆಯುತ್ತಾ ಖುಷಿ ಖುಷಿಯಾಗಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಈ ಬಾರಿ ಪುಷ್ಪ ಕೃಷಿಗೆ ತೀವ್ರ ಹೊಡೆತ ಬಿದ್ದಿದ್ದು, ಸೆ. 2ರಂದು ಶ್ರಾವಣ ಕೊನೆ ಸೋಮವಾರ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಪುಷ್ಪಗಳ ದರ ದುಪ್ಪಟ್ಟಾಗಿದೆ. ಬೆಂಗಳೂರಿನಿಂದ ಇಲ್ಲಿಗೆ ಸೇವಂತಿಗೆ ಸೇರಿದಂತೆ ನಾನಾ ಹೂವುಗಳು ಬರುತ್ತಿದ್ದು, ಉತ್ತರ ಕರ್ನಾಟಕದ ದೇಗುಲಗಳಲ್ಲಿ ಭಕ್ತಿ ಇಮ್ಮಡಿಸಿವೆ.

ಶ್ರಾವಣದ ವರಮಹಾಲಕ್ಷ್ಮಿ ಹಬ್ಬ, ನಾಗರಪಂಚಮಿ ಮುಗಿದಿದ್ದರೂ ಅಮಾವಾಸ್ಯೆ ಹಾಗೂ ಮುಂಬರುವ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹೂವುಗಳ ಮಾರಾಟಗಾರರು ಹೆಚ್ಚಿನ ಲಾಭ ಪಡೆಯುತ್ತಾ ಖುಷಿ ಖುಷಿಯಾಗಿದ್ದಾರೆ.

ಹುಬ್ಬಳ್ಳಿಯ ದುರ್ಗದ ಬೈಲ್, ಜನತಾ ಬಜಾರ್‌, ಕೇಶ್ವಾಪುರ, ಹಳೆ ಹುಬ್ಬಳ್ಳಿ ಹೀಗೆ ವಿವಿಧೆಡೆ ಸೇವಂತಿ ಮಾಲೆ ₹40ರಿಂದ 50, ಮಲ್ಲಿಗೆ ಹೂವು ಮೊಳಕ್ಕೆ ₹50ರ ವರೆಗೂ ಮಾರಾಟವಾಗಿದೆ. ಆದರೆ ಸುಗಂಧಿ ಮಾಲೆ ದರ ಹೆಚ್ಚಾಗಿದ್ದು, ₹150 ವರೆಗೂ ಮಾರಾಟವಾಗಿದೆ. ಸೇವಂತಿ ಬಿಡಿ ಬಿಡಿ ಹೂವು ಮಾರುವವರು ₹20ಕ್ಕೆ 20 ಹೂವು ಇಲ್ಲವೇ ಅದಕ್ಕೂ ಕಡಿಮೆ ಕೊಟ್ಟು ಹೆಚ್ಚು ಲಾಭ ಮಾಡಿಕೊಂಡಿದ್ದಾರೆ.

ಗದಗ ತಾಲೂಕಿನ ಕಣವಿ, ಹೊಸೂರು, ಲಕ್ಕುಂಡಿ ಸೇರಿದಂತೆ ಮುಂಡರಗಿ ತಾಲೂಕಿನ ಹಳ್ಳಿಗಳಿಂದ ಹುಬ್ಬಳ್ಳಿಯ ಎಪಿಎಂಸಿಯಲ್ಲಿರುವ ಹೂವಿನ ಮಾರುಕಟ್ಟೆಗೆ ಪ್ರತಿದಿನ ಬೆಳಗ್ಗೆ ಹೂವುಗಳು ಬರುತ್ತವೆ. ಈ ಬಾರಿ ಮಳೆಯಿಂದ ಪುಷ್ಪ ಕೃಷಿಗೆ ತೀವ್ರ ಹೊಡೆತ ಬಿದ್ದಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಇಲ್ಲಿ ಹೂವಿನ ವ್ಯಾಪಾರಸ್ಥರು ಬೆಂಗಳೂರಿನಿಂದ ಸೇವಂತಿಗೆ, ಬಟನ್‌ ಗುಲಾಬಿ ಹೂವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸುತ್ತಿದ್ದಾರೆ.

ಬೆಂಗಳೂರಿನಿಂದ ಹುಬ್ಬಳ್ಳಿ ಮಾರುಕಟ್ಟೆಗೆ ಭಾನುವಾರು 12 ಗಾಡಿಗಳಲ್ಲಿ ಸೇವಂತಿಗೆ ಹೂವು ಬಂದಿದೆ. ಒಂದೊಂದು ಗಾಡಿಗಳಲ್ಲಿ 150ರಿಂದ 200 ಟ್ರೇ ವರೆಗೂ ಹೂವುಗಳು ಬಂದಿದ್ದು, ಒಂದೊಂದು ಟ್ರೇದಲ್ಲಿ 8 ಕಿಲೋ ಹೂವು ಬಂದಿದೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಹೂವುಗಳನ್ನು ಖರೀದಿಸಿದ್ದು, ಒಂದೊಂದು ಟ್ರೇಗೆ ₹1 ಸಾವಿರದಿಂದ ₹15 ವರೆಗೂ ಹೂವುಗಳ ಮಾರಾಟವಾಗಿವೆ.

ಬೆಂಗಳೂರಿನ ಹೊಸೂರು, ಅತ್ತಿಬೇಲಿ ಸೇರಿದಂತೆ ಆನೇಕಲ್‌, ಚಿಕ್ಕಬಳ್ಳಾಪುರದಿಂದ ಇಲ್ಲಿಗೆ ಹೂವು ಬರುತ್ತಿವೆ ಎನ್ನುತ್ತಾರೆ ವ್ಯಾಪಾರಸ್ಥರು.

ಸ್ಥಳೀಯವಾಗಿ ಚೆಂಡು ಹೂವು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಭಾನುವಾರ ಬೆಲೆ ಸ್ವಲ್ಪ ಚೇತರಿಕೆ ಕಂಡಿದ್ದು, ಕಿಲೋಗೆ ₹40ರಿಂದ ₹60ಕ್ಕೆ ಮಾರಾಟವಾಗಿದೆ.

ಲಕ್ಕುಂಡಿ ಮಲ್ಲಿಗೆ ಪರಿಮಳ:

ತನ್ನ ನೈಸರ್ಗಿಕ ಸುವಾಸನೆಯಿಂದಾಗಿ ಲಕ್ಕುಂಡಿಯ ಮಲ್ಲಿಗೆ ಪರಿಮಳ ಉತ್ತರ ಕರ್ನಾಟದಲ್ಲಿಯೇ ಹೆಸರು ವಾಸಿಯಾಗಿದೆ. ಭಾನುವಾರ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಗುಚ್ಛವೊಂದಕ್ಕೆ ₹200 ವರೆಗೂ ಮಾರಾಟವಾಗಿದೆ. ಅದೇ ತಳಿಯ ಕಾಕಡಾ ಗುಚ್ಛಕ್ಕೆ ₹250 ವರೆಗೂ ಮಾರಾಟವಾಗಿದೆ. ಹೂವು ಖರೀದಿಗೆ ಬಂದವರೆಲ್ಲ ಲಕ್ಕುಂಡಿ ಮಲ್ಲಿಗೆ ಕೊಂಡುಕೊಳ್ಳಲು ಚೌಕಾಸಿ ಮಾಡುತ್ತಿರುವುದು ಕಂಡು ಬಂತು.ಗದಗ ತಾಲೂಕಿನ ಹಳ್ಳಿ ಲಕ್ಕುಂಡಿಯಲ್ಲಿ 500ಕ್ಕೂ ಅಧಿಕ ಹೂವು ಮಾರಾಟಗಾರರು ಇದ್ದಾರೆ. ಸ್ಥಳೀಯವಾಗಿ ಅ‍ವರು ಹೂವುಗಳನ್ನು ಕಿಲೋ ಲೆಕ್ಕದಲ್ಲಿ ಖರೀದಿಸಿ ಮಾಲೆ ತಯಾರಿಸಿ ಮಾರಾಟಕ್ಕೆ ತರುತ್ತಾರೆ. ಗದಗದಿಂದ ರೈಲು ಮೂಲಕ ಬಾಗಲಕೋಟೆ, ವಿಜಯಪುರ, ಆಲಮಟ್ಟಿ ಹೀಗೆ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಹೂವುಗಳನ್ನು ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ ಅಲ್ಲಿಯ ಬೆಳೆಗಾರರು.

ಮಳೆಯಿಂದಾಗಿ ಈ ಬಾರಿ ಸ್ಥಳೀಯ ಸೇವಂತಿಗೆ ಸೇರಿದಂತೆ ಪುಷ್ಪಕೃಷಿಗೆ ಹೊಡೆತ ಬಿದ್ದಿದ್ದು, ಬೆಂಗಳೂರಿನಿಂದ ದಿನಾಲೂ 8ರಿಂದ 10 ಗಾಡಿಗಳಲ್ಲಿ ಸೇವಂತಿ ಸೇರಿದಂತೆ ಇತರ ಹೂವುಗಳು ಬರುತ್ತಿವೆ. ನಮ್ಮ ಬೇಡಿಕೆಯಂತೆ ನಾವು ಖರೀದಿಸಿ ಚಿಲ್ಲರೆ ಮಾರಾಟಗಾರರಿಗೆ ಕೊಡುತ್ತೇವೆ ಎಂದು ವ್ಯಾಪಾರಸ್ಥ ಐ.ಎಚ್‌. ಮೊರಬ ಹೇಳಿದರು.

ಪ್ರತಿದಿನ ಕನಿಷ್ಠ 15ರಿಂದ 20 ರೈತರು ಹುಬ್ಬಳ್ಳಿ ಮಾರುಕಟ್ಟೆಗೆ ಬರುತ್ತಾರೆ. ಅಲ್ಲಿಂದ ಚೆಂಡು ಹೂವು, ಸೇವಂತಿ, ಮಲ್ಲಿಗೆ ಹೂವು ತರುತ್ತಿದ್ದು, ಲಕ್ಕುಂಡಿ ಮಲ್ಲಿಗೆ ಈಗಲೂ ಇಲ್ಲಿಯ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ ಎಂದು ಲಕ್ಕುಂಡಿ ಹೂವಿನ ವ್ಯಾಪಾರಿ ಷಡಕ್ಷರಯ್ಯ ಚೌತಿಮಠ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!