ಹುಬ್ಬಳ್ಳಿ:
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹಿಂದೆ ಅಂಬೇಡ್ಕರ್ ಅವರಿಗೆ ಘನಘೋರ ಅಪಮಾನ ಮಾಡಿದೆ. ಸಂವಿಧಾನ ಶಿಲ್ಪಿಯ ಮನೆ ಸ್ಮಾರಕ ಮಾಡಲಿಲ್ಲ. ಅವರನ್ನು ಸಂಸತ್ತಿಗೆ ಬಾರದಂತೆ ನೋಡಿಕೊಂಡಿತು. ಅಂತ್ಯಕ್ರಿಯೆಗೂ ಜಾಗ ನೀಡಲಿಲ್ಲ. ಇಷ್ಟೆಲ್ಲ ಅಪಮಾನ ಮಾಡಿದ್ದ ಕಾಂಗ್ರೆಸ್ ಈಗ ಅಂಬೇಡ್ಕರ್ ಅವರಿಗೆ ಕ್ಷಮೆ ಕೇಳುತ್ತಿದೆಯೆ? ಎಂದು ಪ್ರಶ್ನಿಸಿದರು.
ಹೆದರುವ ಪ್ರಶ್ನೆಯೇ ಇಲ್ಲ:ಕಾಂಗ್ರೆಸ್ ಸಮಾವೇಶಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಮೊದಲು ದೇಶದಲ್ಲಿ ಅವರ ಪರಿಸ್ಥಿತಿ ಏನಿದೆ ಎಂಬುದು ಅರಿತುಕೊಳ್ಳಲಿ. ಯಾವುದೇ ರೀತಿಯ ಸ್ಪಷ್ಟವಾದ ನಿಲುವು ಇಲ್ಲದ ಕಾಂಗ್ರೆಸ್ ಬಸ್ ನಿಲ್ದಾಣದಲ್ಲಿನ ಬಸ್‌ನಂತಾಗಿದೆ ಎಂದು ಕುಟುಕಿದರು.
ರಾಹುಲ್ ಮನಸ್ಥಿತಿ ಬದಲಿಸಿ:
ಕೇಂದ್ರ ಸರ್ಕಾರವು ದೇಶದ ಜನರಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿದೆಯೇ ಹೊರತು ಯಾವುದೇ ರಾಜ್ಯಗಳಿಂದ ಅಕ್ಕಿ ನೀಡುತ್ತಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಪ್ರತಿ ಕುಟುಂಬಕ್ಕೂ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಹೇಳಿದ್ದರು. ಆದರೆ, 5 ಕೆಜಿ ಅಕ್ಕಿಯನ್ನು ಸಹ ನೀಡಲು ಆಗುತ್ತಿಲ್ಲ. ಹಿಂದೆ ಎಫ್‌ಸಿಐನಲ್ಲಿ ಅಕ್ಕಿ ಸಂಗ್ರಹವಿರದ ವೇಳೆ ಎಫ್‌ಸಿಐ ದರದಲ್ಲಿ ಅಕ್ಕಿ ನೀಡಿದರೆ ಖರೀದಿಸಲು ಸಿದ್ಧ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ, ಈಗ ಅದರ ಕುರಿತು ಮಾತೇ ಎತ್ತುತ್ತಿಲ್ಲ. ನಮ್ಮ ಬಳಿ ಈಗ ರಾಜ್ಯಕ್ಕೆ ಆಗುವಷ್ಟು ಅಕ್ಕಿ ಸಂಗ್ರಹವಿದೆ. ಅಲ್ಲದೇ ಹಿಂದೆ ಪ್ರತಿ ಕೆಜಿಗೆ ₹28 ಬೆಲೆಯಲ್ಲಿ ಅಕ್ಕಿ ನೀಡಲಾಗುತ್ತಿತ್ತು. ಆದರೆ, ಈಗ ₹22.50 ನೀಡಲಾಗುತ್ತಿದೆ. ಆದರೆ, ರಾಜ್ಯದಿಂದ ಈ ವರೆಗೂ ಅಕ್ಕಿ ಖರೀದಿಸುವ ಯಾವುದೇ ಬೇಡಿಕೆ ನಮಗೆ ಬಂದಿಲ್ಲ. ನಮ್ಮ ಬಳಿ ಅಕ್ಕಿ ಸಂಗ್ರಹವಿರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯಂಕರವಾಗಿ ಮಾತನಾಡಿದ್ದರು. ಈಗ ರಾಜ್ಯದ ಜನರಿಗೆ ಅಕ್ಕಿ ನೀಡುವ ಮನಸ್ಸಿದ್ದರೆ ರಾಜ್ಯ ಸರ್ಕಾರ ಅಕ್ಕಿ ಖರೀದಿಸಿ ನೀಡಲಿ ಎಂದು ಜೋಶಿ ಸವಾಲು ಹಾಕಿದರು.