ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಕುಟುಂಬ ಸಲಹುತ್ತಾ ದೇಶಕ್ಕಾಗಿ ಪ್ರಾಣ ಮುಡುಪಾಗಿಟ್ಟ ಪೊಲೀಸ್

KannadaprabhaNewsNetwork | Updated : Oct 22 2024, 11:22 AM IST

ಸಾರಾಂಶ

ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಕುಟುಂಬ ಸಲಹುತ್ತಾ ದೇಶಕ್ಕಾಗಿ ಪ್ರಾಣ ಮುಡುಪಾಗಿಟ್ಟವರು ಪೊಲೀಸರು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಹೇಳಿದರು.

  ಬಾಗಲಕೋಟೆ : ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಕುಟುಂಬ ಸಲಹುತ್ತಾ ದೇಶಕ್ಕಾಗಿ ಪ್ರಾಣ ಮುಡುಪಾಗಿಟ್ಟವರು ಪೊಲೀಸರು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ನವನಗರದ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಧೀಶನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ವರ್ಷದಲ್ಲಿ ಕೋಲಾರದಲ್ಲಿ ಪೊಲೀಸ್ ಹುತಾತ್ಮ ದಿನದ ಅತಿಥಿಯಾಗಿ ಭಾಗವಹಿಸುತ್ತಿರುವ ಎರಡು ದಿನಗಳ ಹಿಂದೆ ಕಳ್ಳನೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸಪೆಕ್ಟರ್‌ ದಾರಿಯಲ್ಲಿ ಹುತಾತ್ಮವಾಗಿರುವುದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯಾಗಿದೆ ಎಂದರು.

ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ವೇಳೆ ನಿಧನ ಹೊಂದಿದಾಗ ಕುಟುಂಬಕ್ಕೆ ಆಧಾರವಾಗಿರುವವರು ಕಳೆದುಕೊಂಡ ಕುಟುಂಬಗಳು ಇಂದು ಕಣ್ಣೀರು ಇಡುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮನ ಕಲಕುವಂತಾಗಿದೆ. ಪೊಲೀಸರ ಜೊತೆ ನಾವೇಲ್ಲ ಇದ್ದೆವೆ ಎಂಬ ದೈರ್ಯ ಕುಟುಂಬದವರಿಗೆ ಕೊಡುವುದು ಅವಶ್ಯವೆಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ ಮಾತನಾಡಿ, 1959ರಲ್ಲಿ ಲಡಾಕ್‌ನ ಎತ್ತರ ಭಾಗದಲ್ಲಿ ಚೀನಿ ಪೊಲೀಸರು ಮೋಸದಿಂದ ಭಾರತೀಯ 10 ಜನ ಪೊಲೀಸರನ್ನು ಬಲಿ ತೆಗೆದುಕೊಂಡ ದಿನವನ್ನು ಪೊಲೀಸ್ ಹುತಾತ್ಮರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಹುತಾತ್ಮರಾದ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಎಎಒ, ಡಿಪಿಒ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಮೃತಪಟ್ಟ ದಿ.ಎನ್.ವಿ.ಬೇವಿನಕಟ್ಟಿ ಅವರ ಕುಟುಂಬಕ್ಕೆ ಪೊಲೀಸ್ ಪ್ಯಾಕೇಜ್‌ ಅಡಿಯಲ್ಲಿ ಬ್ಯಾಂಕ್ ಆಪ್ ಬರೋಡಾದವರು ಮೃತರ ಪತ್ನಿ ಪೂಜಾ ನೀಲೇಶ ಬೇವಿನಕಟ್ಟಿಗೆ ₹10 ಲಕ್ಷ ಚೆಕ್ ವಿತರಿಸಲಾಯಿತು. ವಿವಿಧ ಗಣ್ಯಮಾನ್ಯರು, ಹುತಾತ್ಮರಾದ ಪೊಲೀಸ್‌ ಕುಟುಂಬ ಸದಸ್ಯರು. ರೈತರು, ಪತ್ರಕರ್ತರು ಮತ್ತು ಅಧಿಕಾರಿಗಳು ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಪರೇಡ್‌ ಕಮಾಂಡರ್ ಶಿವಾನಂದ ಜೇವರ್ಗಿ ನಾಯಕತ್ವದಲ್ಲಿ ಪರೇಡ್ ಮೂಲಕ ಗೌರವ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ತಂಡವು ಅತ್ಯಂತ್ಯ ಸುಮಧುರವಾಗಿ ವಾದ್ಯಗಳನ್ನು ನುಡಿಸಿತು. ಈ ಸಂದರ್ಭದಲ್ಲಿ 2ನೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article