ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ)ದಿಂದ ಬಿಡದಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ (ಸಮಗ್ರ ಉಪನಗರ) ಯೋಜನೆ ಕುರಿತು ಪರ ವಿರೋಧಗಳ ಚರ್ಚೆ ಶುರುವಾಗಿ ರಾಜಕೀಯ ಸಂಘರ್ಷಕ್ಕೂ ಎಡೆ ಮಾಡಿಕೊಟ್ಟಿದೆ.ಪ್ರಾಧಿಕಾರ ಟೌನ್‌ಶಿಪ್ ಗಾಗಿ ಅಧಿಸೂಚನೆ ಹೊರಡಿಸಿ, ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿ ರೈತರೊಂದಿಗೆ ಕೈ ಜೋಡಿಸಿದೆ. ಈ ಮೊದಲು ಇದರ ವಿರುದ್ಧ ಧ್ವನಿ ಎತ್ತಿದ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಗ್ರಾಮವಾರು ಜನಾಭಿಪ್ರಾಯ ನಡೆ ಹೆಸರಿನಲ್ಲಿ ರೈತರ ಅಭಿಪ್ರಾಯ ಸಂಗ್ರಹಿಸಿದ್ದರು.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಅನೇಕರನ್ನು ಹೋರಾಟಕ್ಕೆ ಕರೆತರುವುದಾಗಿ ಎ.ಮಂಜುನಾಥ್ ಘೋಷಿಸಿದ್ದರು. ಅದರಂತೆ ಮೊದಲ ಹೆಜ್ಜೆಯಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಮಾಡಿಕೊಳ್ಳುತ್ತಿರುವ ರೈತರ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕೆಂದು ಒತ್ತಾಯಿಸಿದ್ದಾರೆ.ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಟೌನ್ ಶಿಪ್ ಯೋಜನೆ ಜಾರಿಗೆ ತರಲು ಪಣತೊಟ್ಟು ನಿಂತಿದ್ದಾರೆ. ಟೌನ್‌ಶಿಪ್ ನಿರ್ಮಾಣದಿಂದ ರಾಮನಗರ ಜಿಲ್ಲೆ ಸಂಪೂರ್ಣ ಅಭಿವೃದ್ಧಿ ಹೊಂದಲಿದೆ. ಅಷ್ಟಕ್ಕೂ ಇದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆ ರೂಪುಗೊಂಡಿತ್ತು. ಇಲ್ಲಿನ ಭೂಮಿ ರೆಡ್ ಝೋನ್ ವ್ಯಾಪ್ತಿಗೆ ಸೇರಿದ್ದವು. ರೈತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಿದ್ದಾರೆ.
ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿಕೂಟ ಪಕ್ಷಗಳಿಗೆ ಟೌನ್ ಶಿಪ್ ಯೋಜನೆ ಪ್ರತಿಷ್ಠೆಯ ಪ್ರಶ್ನೆಯ ಜೊತೆಗೆ ರಾಜಕೀಯ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿದೆ.ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ರದಲ್ಲೇನಿದೆ?
ರಾಮನಗರ ತಾಲೂಕು ಬಿಡದಿ ಹೋಬಳಿಯ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್ ಶಿಪ್ ನಿರ್ಮಾಣ ಮಾಡಲು ಸರ್ಕಾರ ರೈತರ ಜಮೀನುಗಳ ಸ್ವಾಧೀನ ಪಡಿಸುತ್ತಿರುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಸಂಸದ ಡಾ.ಮಂಜುನಾಥ್ , ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.ರಾಮನಗರ ತಾಲೂಕು ಬಿಡದಿ ಹೋಬಳಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ 24 ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿನ ಸುಮಾರು 10,000 ಎಕರೆ ಪ್ರದೇಶದಲ್ಲಿ ಸರ್ಕಾರವು ಗ್ರೇಟರ್ ಬೆಂಗಳೂರು ಟೌನ್ ಶಿಫ್ ನಿರ್ಮಾಣ ಮಾಡಲು ತೀರ್ಮಾನಿಸಿದ್ದು ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದರ ವಿರುದ್ಧ ಸ್ಥಳೀಯ ರೈತರು ಹೋರಾಡುತ್ತಿರುವ ವಿಚಾರವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಈ ಪ್ರದೇಶದಲ್ಲಿ ಬಹುಪಾಲು ಕಡು ಬಡವ ರೈತರಿದ್ದು ಜೀವನ ನಿರ್ವಹಣೆಗಾಗಿ ಹೈನುಗಾರಿಕೆ. ರೇಷ್ಮೆ, ತೋಟಗಾರಿಕೆ, ಕೃಷಿಯನ್ನು ಅವಲಂಬಿಸಿರುತ್ತಾರೆ ಹಾಗೂ ಈ ಭಾಗದಲ್ಲಿ ಲಕ್ಷಾಂತರ ಮರ-ಗಿಡಗಳನ್ನು ಬೆಳೆಸಲಾಗಿದೆ. ಈ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವುದರಿಂದ ಸಾವಿರಾರು ಮಂದಿ ನಿರುದ್ಯೋಗಿಗಳಾಗುವುದರ ಜೊತೆಗೆ ಪರಿಸರ ಹಾಳಾಗುತ್ತದೆ. ಅಲ್ಲದೆ ಈ ಪ್ರದೇಶವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಂದಿ ಕೊಂಡಿರುವುದರಿಂದ ಪರಿಸರ ಸಂರಕ್ಷಣೆ ಹಾಗೂ ಸಮಾಜದ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಈ ಪ್ರದೇಶವನ್ನು ಹಸಿರು ವಲಯವನ್ನಾಗಿ ಘೋಷಣೆ ಮಾಡುವುದು ಸೂಕ್ತವಾಗಿರುತ್ತದೆ. ಆದುದರಿಂದ, ಸರ್ಕಾರವು ಸದರಿ ಭೂ-ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಸಂಸದರು ಒತ್ತಾಯಿಸಿದ್ದಾರೆ.ಮಾಜಿ ಪಿಎಂ ದೇವೇಗೌಡರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ
ರಾಮನಗರ ತಾಲೂಕು ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರುಗಳಲ್ಲಿರುವ ಸುಮಾರು 10 ಸಾವಿರ ಎಕರೆ ಜಮೀನನ್ನು ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ವರದಿಯಾಗಿದೆ.
ರಾಮನಗರ ಜಿಲ್ಲೆಯ ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕೈಗಾರಿಕಾಭಿವೃದ್ಧಿಗಾಗಿ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಸ್ಥಾಪಿಸಿದೆ. ರಾಮನಗರ ಜಿಲ್ಲೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂದಂತೆ ಇದ್ದು, ಇದ್ದು ಹಲವಾರು ಉದ್ಯಮಗಳು ಖಾಸಗಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಉಳಿದಂತೆ ಇರುವ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಕೃಷಿಗಾಗಿ ಅವಲಂಬಿತರಾಗಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಮತ್ತು ಜಮೀನಿನ ಸುತ್ತ ಲಕ್ಷಾಂತರ ಮರ-ಗಿಡಗಳನ್ನು ಬೆಳೆಸಿದ್ದಾರೆ. ಇಂತಹ ಪ್ರದೇಶವನ್ನು ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ ಎಂದಿದ್ದಾರೆ.ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ದಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಗಳಾಗಿ ಬೀದಿಪಾಲಾಗುತ್ತಾರೆ. ಈ ಬಡ ರೈತರ ಜೀವನೋಪಾಯಕ್ಕೆ ಕೃಷಿ ಭೂಮಿಯೇ ಆಧಾರವಾಗಿದೆ. ಇದಲ್ಲದೆ, ಕರ್ನಾಟಕ ಹೌಸಿಂಗ್ ಬೋರ್ಡ್ ಹಾಗೂ ಇತರೆ ಸರ್ಕಾರಿ ಪ್ರಾಧಿಕಾರಗಳು ರಾಮನಗರ ಜಿಲ್ಲೆಯ ಬಿಡದಿ ಸುತ್ತ-ಮುತ್ತಲು ಹಲವಾರು ವಸತಿ ಯೋಜನೆಗಳನ್ನು ರೂಪಿಸಿ, ರೈತರ ಜಮೀನ್ನು ಸ್ವಾಧೀನಪಡಿಸಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ.
ಅದ್ದರಿಂದ, ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಟೌನ್‌ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಬಡ ರೈತರ ಹಿತದೃಷ್ಠಿಯಿಂದ ಕೈಬಿಡಬೇಕೆಂದು ದೇವೇಗೌಡರು ಒತ್ತಾಯಿಸಿದ್ದಾರೆ.