ಬಳ್ಳಾರಿ : ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ಗುರುವಾರ ರಾತ್ರಿ ನಡೆದ ಬ್ಯಾನರ್ ಗಲಾಟೆ ಪೂರ್ವ ನಿಯೋಜಿತ ಸಂಚಾಗಿತ್ತೆ ಎಂಬ ಅನುಮಾನಗಳು ಬಲವಾಗಿ ಕಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ನಡೆಸಲು ಮೊದಲೇ ಪ್ಲ್ಯಾನ್ ಮಾಡಲಾಗಿತ್ತಾ? ಎಂಬ ಅನುಮಾನ ಮೂಡಿದೆ. ಈ ಅನುಮಾನಕ್ಕೆ ಸಾಕ್ಷ್ಯ ಎಂಬಂತೆ ವಿಡಿಯೋವೊಂದು ಬಯಲಾಗಿದ್ದು, ಜನಾರ್ದನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಲು ಕಿಡಿಗೇಡಿಗಳು ಖಾಲಿ ಬಾಟಲ್, ಪೆಟ್ರೋಲ್ ಬಾಂಬ್‌ಗಳನ್ನು ಆಟೋದಲ್ಲಿ ತುಂಬಿಕೊಂಡು ಬಂದಿರೋದು ವಿಡಿಯೋದಲ್ಲಿ ಗೋಚರವಾಗಿದೆ.
ಬ್ಯಾನರ್ ಗಲಾಟೆ ವೇಳೆ ಬಾಟಲ್ ತುಂಬಿದ ಆಟೋರಿಕ್ಷಾದಲ್ಲಿ ಬಂದ ಯುವಕರನ್ನು ಪೊಲೀಸರು ತಡೆಯುತ್ತಿರುವುದು, ಯುವಕರನ್ನು ತಡೆಯೊಡ್ಡಿದ ವೇಳೆ ನೆಲಕ್ಕೆ ಬಿದ್ದ ಬಾಟಲ್‌ಗಳನ್ನು ಅಲ್ಲಿದ್ದ ಯುವಕರು ಪಡೆದು ದಾಳಿಗೆ ಮುಂದಾಗಿರುವುದು ಗಲಾಟೆ ಸ್ಥಳದಲ್ಲಿನ ಸಿಸಿಟಿವಿಯ ದೃಶ್ಯಾವಳಿಗಳ ಪರಿಶೀಲನೆ ವೇಳೆ ಕಂಡು ಬಂದಿದೆ. ಇದೆಲ್ಲವೂ ಈ ಗಲಾಟೆಗೆ ಪೂರ್ವ ಸಿದ್ಧತೆಯಾಗಿತ್ತೇ ಎಂಬ ಅನುಮಾನ ಮೂಡಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಬಳ್ಳಾರಿಯಲ್ಲಿ ಭಾನುವಾರ ಮಾತನಾಡಿದ ಕೇಂದ್ರ ಸಚಿವ ಸೋಮಣ್ಣ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಜನಾರ್ದನ ರೆಡ್ಡಿಯವರ ಕೊಲೆಗೆ ಸಂಚು ನಡೆದಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಕೊಲೆಗೆ ಸಂಚು ನಡೆದಿದೆ ಎಂದು ಸ್ವತಃ ಜನಾರ್ದನ ರೆಡ್ಡಿ ಆರೋಪಿಸಿದ್ದು, ಈ ಸಂಬಂಧ ಝಡ್ ಪ್ಲಸ್ ಭದ್ರತೆಗೆ ಮನವಿ ಮಾಡಿದ್ದಾರೆ.ಬ್ಯಾನರ್ ಗಲಾಟೇಲ್ಲಿ ಗೃಹ ಸಚಿವರು ರಬ್ಬರ್ ಸ್ಟ್ಯಾಂಪ್:
ಬ್ಯಾನರ್ ಗಲಾಟೆ ವೇಳೆ ಮಾಜಿ ಸಚಿವ ಶ್ರೀರಾಮುಲು ಭಗವಂತನ ರೂಪದಲ್ಲಿ ಬಂದು ಜನಾರ್ದನ ರೆಡ್ಡಿ ಅವರನ್ನು ಕಾಪಾಡಿದ್ದಾರೆ. ಇಲ್ಲದಿದ್ದರೆ ರೆಡ್ಡಿ ಅವರ ಕುಟುಂಬದ ಪರಿಸ್ಥಿತಿ ಏನಾಗುತ್ತಿತ್ತು? ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿರಿಸಿಕೊಂಡೇ ದಾಳಿ ನಡೆಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ರಾಜ್ಯದ ಆಡಳಿತ ಸತ್ತು ಹೋಗಿದ್ದು, ಗೃಹ ಸಚಿವರು ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ. ಬ್ಯಾನರ್ ಗಲಾಟೆಯಲ್ಲಿ ಎಸ್ಪಿ ಅವರನ್ನು ಬಲಿ ಕೊಡಲಾಗಿದೆ. ಇದು ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಕೆಲಸ. ರಾಜ್ಯ ಸರ್ಕಾರ ಸೂಕ್ತ ತನಿಖೆ ಕೈಗೊಳ್ಳದಿದ್ದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲಿದೆ. ಈ ಕುರಿತು ಕೇಂದ್ರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಬ್ಯಾನರ್ ಗಲಾಟೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ರೆಡ್ಡಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ರೆಡ್ಡಿ ಅವರಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡದಿದ್ದಲ್ಲಿ ಕೇಂದ್ರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿ ಝಡ್ ಶ್ರೇಣಿಯ ಭದ್ರತೆ ಕೊಡಿಸಲಾಗುವುದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಕೇರಳದಲ್ಲಿದೆ. ಸದ್ಯ ಸಿದ್ದರಾಮಯ್ಯ ಗಾಳಿಪಟ್ಟವಿದ್ದಂತೆ. ಯಾವಾಗ ಅವರ ಬಾಲ ಕಿತ್ತುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶದಿಂದ ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬ್ಯಾನರ್ ಗಲಾಟೆಯಿಂದ ಶ್ರೀರಾಮುಲು, ಜನಾರ್ದನ ರೆಡ್ಡಿ ಒಂದಾಗಿದ್ದಾರೆ. ಬಳ್ಳಾರಿಯಲ್ಲಿ ನಡೆದ ಘಟನೆಯಿಂದಾಗಿ ವೀಳ್ಯೆದೆಲೆ ಕೊಟ್ಟು ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಒಂದು ಮಾಡಿದಂತಾಗಿದೆ ಎಂದರು.
ನನ್ನ ಹತ್ಯೆಗೆ ಭರತ್ ಸಂಚು ಸ್ಪಷ್ಟ: ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಸಾವು ಸಂಭವಿಸಿರುವುದು ಗುರುಚರಣ್ ಸಿಂಗ್ ಎಂಬ ಖಾಸಗಿ ಗನ್‌ಮ್ಯಾನ್‌ನ ಬಂದೂಕಿನಿಂದ ಎಂಬುದು ಗೊತ್ತಾಗಿದೆ. ಈ ವಿಷಯವನ್ನು ಹೆಚ್ಚುವರಿ ಎಸ್ಪಿ ರವಿಕುಮಾರ್ ಅವರೇ ನನಗೆ ಖಚಿತಪಡಿಸಿದ್ದಾರೆ. ಗುರುಚರಣ್ ಸಿಂಗ್, ಶಾಸಕ ಭರತ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್ ಎಂಬುದು ಗೊತ್ತಾಗಿದೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿ, ಭರತ್ ರೆಡ್ಡಿಯವರು ಕಾರ್ಯಕ್ರಮಕ್ಕೆ ತೆರಳುವಾಗ ಇದೇ ಗನ್‌ಮ್ಯಾನ್ ಜತೆಗಿರುವುದು ಅನೇಕ ವೀಡಿಯೋಗಳಲ್ಲಿ ಕಂಡು ಬಂದಿದೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಿದ್ಧತೆಗಾಗಿ ಶಾಸಕ ಭರತ್ ರೆಡ್ಡಿ ಅವರ ಪತ್ನಿ ಎಸ್ಪಿ ವೃತ್ತಕ್ಕೆ ಬಂದಿದ್ದ ವೇಳೆ ಕಾರಿನಿಂದ ಇಳಿಯುವಾಗ ಜತೆಗೆ ಭರತ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್ ಗುರುಚರಣ್ ಸಿಂಗ್ ಇದ್ದರು.
ಭರತ್ ರೆಡ್ಡಿ ನಗರದಲ್ಲಿ ಓಡಾಡುವಾಗ ಸರ್ಕಾರಿ ಗನ್‌ಮ್ಯಾನ್ ಅಲ್ಲದೆ, ಇದೇ ಗನ್‌ಮ್ಯಾನ್ ಜತೆ ಓಡಾಡುತ್ತಿರುವುದು ಅನೇಕ ವಿಡಿಯೋಗಳಲ್ಲಿ ವೀಕ್ಷಿಸಿದ್ದೇವೆ. ಭರತ್ ರೆಡ್ಡಿಯವರು ಸರ್ಕಾರಿ ಜತೆಗೆ ಖಾಸಗಿ ಗನ್‌ಮ್ಯಾನ್‌ಗಳನ್ನು ಹೊಂದಿದ್ದರು ಎಂಬುದು ಇದರಿಂದ ಸ್ಪಷ್ಟವಾಗಿದೆ. ತಮ್ಮ ಕುಟುಂಬ ರಕ್ಷಣೆಗೆ ಹೊಂದಿರುವ ಖಾಸಗಿ ಗನ್‌ಮ್ಯಾನ್‌ಗಳನ್ನು ಸತೀಶ್ ರೆಡ್ಡಿ ಜತೆಗೆ ಕಳುಸಿಕೊಟ್ಟಿರುವ ಶಾಸಕ ಭರತ್ ರೆಡ್ಡಿ ಅವರು ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದರು.
ಘಟನೆಗೆ ಸಂಬಂಧಿಸಿ ನಾಲ್ವರು ಗನ್‌ಮ್ಯಾನ್‌ಗಳನ್ನು ವಿಚಾರಣೆ ಮಾಡಿದ್ದೇವೆ. ಸತೀಶ್ ರೆಡ್ಡಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದರು.
ಬ್ಯಾನರ್ ಗಲಾಟೆಯ ಗುಂಪು ಘರ್ಷಣೆ ವೇಳೆ ನನ್ನ ಮನೆಗೆ ಮೂರು ಗುಂಡುಗಳು ಬಿದ್ದಿವೆ. ಅವು ನಮ್ಮ ಬಳಿಯೇ ಇವೆ. ಪೊಲೀಸರು ಈವರೆಗೂ ಈ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿಲ್ಲ ಎಂದು ಅವರು ತಿಳಿಸಿದರು.
‘ಝಡ್ ಪ್ಲಸ್’ ಭದ್ರತೆಗೆ ಕೋರಿ ಜನಾರ್ದನ ಪತ್ರ:
ಕಳೆದ ಗುರುವಾರ ರಾತ್ರಿ ತಮ್ಮ ನಿವಾಸದ ಮೇಲೆ ನಡೆದ ದಾಳಿ ಕೇವಲ ರಾಜಕೀಯ ಸಂಘರ್ಷವಲ್ಲ, ಬದಲಾಗಿ ತಮ್ಮನ್ನು ಮುಗಿಸಲು ನಡೆದ ‘ಪೂರ್ವನಿಯೋಜಿತ ಹತ್ಯೆಯ ಸಂಚು’ ಎಂದು ಆರೋಪಿಸಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ, ತಮಗೆ ಝಡ್ ಪ್ಲಸ್ ಭದ್ರತೆ ಒದಗಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಗೃಹ ಸಚಿವ ಪರಮೇಶ್ವರ್, ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ತಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ತಮ್ಮ ಮೇಲೆ ದಾಳಿಯಾಗಿದೆ. ತಮಗೆ ಜೀವ ಬೆದರಿಕೆ ಇದೆ. ಹೀಗಾಗಿ, ರಕ್ಷಣೆ ಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ರೆಡ್ಡಿ ಯುಎಸ್ ಸೆಕ್ಯುರಿಟಿ ತರಿಸಲಿ ಬಿಡಿ : ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಝೆಡ್ ಪ್ಲಸ್ ಸೆಕ್ಯುರಿಟಿಯಾದರೂ ಕೇಳಲಿ, ಇರಾನ್, ಅಮೆರಿಕದಿಂದಾದರೂ ಸೆಕ್ಯುರಿಟಿ ತರಿಸಿಕೊಳ್ಳಲಿ. ಬೇಡ ಅಂದವರು ಯಾರು? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೇಕಿದ್ದರೆ ಅವರ ಪಕ್ಷದ ನೂರು ಮಂದಿ ಕೇಡರ್‌ಗಳನ್ನು ತಯಾರಿ ಮಾಡಿಕೊಳ್ಳಲಿ ಎಂದರು.
ಬಳ್ಳಾರಿ ಗಲಭೆ ಪರಿಶೀಲನೆಗೆ ಕೆಪಿಸಿಸಿ ನಿಯೋಗದ ಕುರಿತ ಪ್ರಶ್ನೆಗೆ, ಬಳ್ಳಾರಿ ಗಲಭೆ ಬಗ್ಗೆ ಪಕ್ಷದ ನಿಯೋಗದಿಂದ ಎಚ್.ಎಂ.ರೇವಣ್ಣ ಒಳ್ಳೆಯ ಮಾಹಿತಿ ಪಡೆದುಕೊಂಡು ಬಂದಿದ್ದಾರೆ. ಅಧಿಕೃತ ಹಾಗೂ ಅನಧಿಕೃತ ಎರಡೂ ಮಾಹಿತಿಗಳನ್ನು ನನಗೆ ನೀಡಿದ್ದಾರೆ ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಹೇಳಿದರು.
ಎಲ್ಲಾ ಕಡೆಯೂ ಪ್ರತಿಮೆಗಳನ್ನು ಇಡುತ್ತಾರೆ. ಅದಕ್ಕೆ ಯಾಕೆ ಅಸೂಯೆ ಪಡಬೇಕು? ವಾಲ್ಮೀಕಿ ಮಹರ್ಷಿಯವರು ಒಂದು ಸಮುದಾಯಕ್ಕೆ ಸೇರಿದವರೇ? ಅವರು ಎಲ್ಲಾ ಸಮುದಾಯದ ಆಸ್ತಿ. ಅವರು ಬರೆದ ರಾಮಯಣವನ್ನು ಎಲ್ಲರೂ ಓದುವುದಿಲ್ಲವೇ? ಹೀಗಿರುವಾಗ ಅವರ ಬ್ಯಾನರ್ ಹಾಕಲು ಜನಾರ್ದನ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದರು.
ಪ್ರಕರಣವನ್ನು ಸಿಐಡಿ ಅಥವಾ ಎಸ್ಐಟಿಗೆ ನೀಡುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ, ಇದರ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಗುಂಡು ಸತೀಶ್ ರೆಡ್ಡಿ ಅವರ ಗನ್ ಮ್ಯಾನ್‌ನದು ಎನ್ನುವ ವರದಿ ಬಗ್ಗೆ ಕೇಳಿದಾಗ, ಯಾರದ್ದೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ವರದಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.