ಕನ್ನಡ ಪ್ರಭ ವಾರ್ತೆ ಮುಧೋಳ
ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಸ್ನಾತಕ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ಗುರುವಾರ ಕಾಲೇಜಿನ ಸಭಾಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮೇಲಿನ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳು ದೇಶದ ಬಜೆಟ್ ಸಿದ್ಧತೆ, ಮಂಡನೆ ಮತ್ತು ಒಪ್ಪಿಗೆ ಕುರಿತು ಅರಿವು ಮೂಡಿಸುವುದು, ಭಾವಿ ಅಮೃತ ಕಾಲದಲ್ಲಿರುವ ಸರ್ಕಾರದ ನೀತಿ, ಯೋಜನೆಗಳ ಕುರಿತು ತಿಳಿವಳಿಕೆ ನೀಡಿ, ನಾಲ್ಕು ವರ್ಗಗಳಾದ ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಅಭಿವೃದ್ಧಿ ನಾಲ್ಕು ಆಧಾರ ಸ್ತಂಭಗಳಾಗಿದ್ದು, ತಮ್ಮದೆ ಆದ ಪಾತ್ರ ಹೊಂದಿರುವುದರ ಕುರಿತು ವಿವರಿಸಿದರು.
ಪ್ರಾಚಾರ್ಯ ಪ್ರೊ.ಮಲ್ಲಣ್ಣ ವ್ಹಿ. ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಜೆಟ್ ಮೇಲೆ ಚರ್ಚೆ ಸ್ಪರ್ಧೆಯಲ್ಲಿ ಬೇರೆ ಬೇರೆ ಕಾಲೇಜುಗಳಿಂದ 21 ತಂಡಗಳು ಆಗಮಿಸಿ ಬಜೆಟ್ ಚರ್ಚೆಯಲ್ಲಿ ಭಾಗವಹಿಸಿರುವುದಕ್ಕೆ ಕಾಲೇಜು ವತಿಯಿಂದ ಅಭಿನಂದಿಸುವುದಾಗಿ ಹೇಳಿದ ಅವರು, ಬಹುಮಾನ ಯಾರಿಗೆ ಬರಲಿ ಅದು ಮುಖ್ಯವಲ್ಲ, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾದದು ಕಾರಣ ಇಂತಹ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಬೇಕೆಂದರು.ಐಕ್ಯೂಎಸಿ ಸಂಯೋಜಕಿ ಪ್ರೊ.ಶಾರದಾ ಎಸ್. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಧೀರಜಕುಮಾರ ಭೂಥಡಾ, ಪ್ರೊ.ಕೆ.ಕೆ. ಕಿತ್ತೂರ, ಪ್ರೊ.ಎಸ್.ಕೆ. ಮುರಗೋಡ, ಪ್ರೊ.ಎ.ಆರ್. ಕಡೂರ, ಡಾ.ಲೋಕೇಶ ರಾಠೋಡ, ಡಾ.ಎಂ.ಎನ್. ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಬಜೆಟ್ ಮೇಲೆ ಚರ್ಚೆ ಸ್ಪರ್ಧೆಯಲ್ಲಿ ಬಾಗಲಕೋಟೆ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಪರೇಶ ಗುಂಡೇಚಾ, ಸೋಮನಾಥ ಭಟ್ಟಡ್, ಮುಧೋಳ ಬಿಜಿಎಂಐಬಿ ಎಂಬಿಎ ಮಹಾವಿದ್ಯಾಲಯದ ಟ್ವಿಂಕಲ್ ಪಟೇಲ್, ಶಶಿಕಾಂತ ಕೊಪ್ಪ ಹಾಗೂ ಬಾಗಲಕೋಟೆ ವಿದ್ಯಾಗಿರಿಯ ಬಸವೇಶ್ವರ ಮಹಾವಿದ್ಯಾಲಯದ ಕಾವೇರಿ ಕುಲಕರ್ಣಿ, ರುಚಿತಾ ಚವಡಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಪ್ರೊ.ಸುಷ್ಮಿತಾ ಮುರಗೋಡ ನಿರೂಪಿಸಿದರು. ಡಾ.ಧೀರಜಕುಮಾರ ಭೂಥಡಾ ವಂದಿಸಿದರು. ಅಂಜುಬಾ ಮತ್ತು ಸೀಮಾ ಪ್ರಾರ್ಥಿಸಿದರು. ಕಾಲೇಜಿನ ಬೋಧಕರು ಉಪಸ್ಥಿತರಿದ್ದರು.