- ಗಾಯತ್ರಿ ಸಿದ್ದೇಶ್ವರ್ ಅನುಭವಿ, ತಿಳಿವಳಿಕೆ ವ್ಯಕ್ತಿತ್ವದ ಗಟ್ಟಿಗಿತ್ತಿ । ಬಿಜೆಪಿಗೆ ಜೆಡಿಎಸ್ ಆನೆಬಲ ತಂದಿದೆ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಗ್ಯಾರಂಟಿಗಳ ಗಾಳಿಯಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಕೇವಲ ಕೆಲ ಸಮುದಾಯಗಳ ಓಲೈಕೆಯಲ್ಲೇ ತೊಡಗಿದೆ. ಓಲೈಕೆಯಿಂದ, ಗ್ಯಾರಂಟಿಗಳಿಂದ ರಾಜ್ಯವನ್ನಾಳಲು ಸಾಧ್ಯವಿಲ್ಲ. ಅಭಿವೃದ್ಧಿಯನ್ನೇ ಮರೆತ ಕಾಂಗ್ರೆಸ್ ಸರ್ಕಾರದಲ್ಲಿ ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆ ಎಂದು ಹರಿಹರದ ಮಾಜಿ ಶಾಸಕ, ಜೆಡಿಎಸ್ ನಾಯಕ ಎಚ್.ಎಸ್. ಶಿವಶಂಕರ ವಾಗ್ದಾಳಿ ನಡೆಸಿದರು.ನಗರದ ಬಿಜೆಪಿ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದೆ. 2 ಬಜೆಟ್ ಮಂಡಿಸಿದರೂ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಬಿಡಿಗಾಸನ್ನೂ ನೀಡಿಲ್ಲ. ವಾಸ್ತವ ಹೀಗಿರುವಾಗ ಕಾಂಗ್ರೆಸ್ಸಿನವರು ಯಾವ ಮುಖ ಹೊತ್ತು ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ತಳಹಂತದಿಂದಲೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪ್ರಚಾರ ಕೈಗೊಂಡಿದ್ದಾರೆ. ಗಾಯತ್ರಿ ಅವರದ್ದು ಹಿರಿಯ ಅನುಭವ, ದೊಡ್ಡ ತಿಳಿವಳಿಕೆಯ ವ್ಯಕ್ತಿತ್ವ. ಎಲ್ಲರೊಟ್ಟಿಗೂ ಕೆಲಸ ಮಾಡಿದ್ದಾರೆ. ಎಲ್ಲಕ್ಕಿಂತ ಗಟ್ಟಿಗಿತ್ತಿ ಗಾಯತ್ರಿ ಸಿದ್ದೇಶ್ವರರವರು. ಹರಿಹರ ಕ್ಷೇತ್ರದಿಂದಲೇ ಕನಿಷ್ಠ 1.25 ಲಕ್ಷ ಮತಗಳ ಲೀಡ್ ಒದಗಿಸುವ ಗುರಿ ನಮ್ಮದು ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಹರಿಹರ ಶಾಸಕ ಬಿ.ಪಿ.ಹರೀಶ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಉಭಯ ಪಕ್ಷಗಳ ಮುಖಂಡರಾದ ಎಸ್.ಎಂ. ವೀರೇಶ ಹನಗವಾಡಿ, ಬಿ.ರಾಜಶೇಖರ, ಕಡತಿ ಅಂಜಿನಪ್ಪ, ಜೆ.ಅಮಾನುಲ್ಲಾ ಖಾನ್, ಗಣೇಶ ಟಿ. ದಾಸಕರಿಯಪ್ಪ, ಪರಮೇಶ್ವರ ಗೌಡ, ಕಡತಿ ಅಂಜಿನಪ್ಪ, ಕಡ್ಲೇಬಾಳು ಧನಂಜಯ, ಎ.ವೈ. ಪ್ರಕಾಶ, ಬಿ.ಎಸ್. ಜಗದೀಶ, ಅನಿಲಕುಮಾರ ನಾಯ್ಕ, ಅಣ್ಣೇಶ ಐರಣಿ, ಟಿ.ಅಸ್ಗರ್, ಬಾತಿ ಶಂಕರ, ಎಸ್.ಓಂಕಾರಪ್ಪ, ವಕೀಲ ಯೋಗೇಶ, ದೊಗ್ಗಳ್ಳಿ ವೀರೇಶ ಇತರರು ಇದ್ದರು.
ಬಾಕ್ಸ್
ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಬಿಜೆಪಿ ಲೋಕಸಭಾ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜೆಡಿಎಸ್ ರಾಷ್ಟ್ರೀಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆದೇಶದಂತೆ ದಾವಣಗೆರೆ ಸೇರಿದಂತೆ ರಾಜ್ಯವ್ಯಾಪಿ ಉಭಯ ಪಕ್ಷಗಳು ಹೊಂದಾಣಿಕೆಯಿಂದ ಮೈತ್ರಿಕೂಟದ ಗೆಲುವಿಗೆ ಶ್ರಮಿಸಲಿವೆ ಎಂದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶದ ರಕ್ಷಣೆ, ಅಭಿವೃದ್ಧಿಗೆ ಶ್ರಮಿಸಲೆಂದು ದೇವೇಗೌಡರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸೀಟು ಹಂಚಿಕೆ ವೇಳೆ ಒಂದಿಷ್ಟು ಗೊಂದಲ ಇದ್ದವು. ಮೂರು ಕ್ಷೇತ್ರದ ವಿಚಾರಕ್ಕೆ ಗೊಂದಲ, ಕೆಲ ನಾಯಕರಲ್ಲಿ ವ್ಯತ್ಯಾಸ ಉಂಟಾಗಿತ್ತು. ಈಗ ಎಲ್ಲ ಬಗೆ ಹರಿದಿದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದಾಗಿ ದೇಶಕ್ಕೆ ಕೆಲಸ ಮಾಡಲಿದ್ದೇವೆ. ಒಂದೇ ವೇದಿಕೆಯಲ್ಲಿ ಸಮನ್ವಯ ಸಾಧಿಸಲು ಒಪ್ಪಿಗೆ ನೀಡಿ, ಬಿಜೆಪಿ-ಜೆಡಿಎಸ್ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲು ಸಂದೇಶ ನೀಡಿದ್ದಾರೆ ಎಂದು ಹೇಳಿದರು.
- - --3ಕೆಡಿವಿಜಿ4:
ದಾವಣಗೆರೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿದರು.