ಕನ್ನಡಪ್ರಭ ವಾರ್ತೆ ತ್ಯಾಗರ್ತಿಶುದ್ಧ ಮನಸ್ಸಿನಿಂದ ಕೂಡಿದರೆ ಮಾತ್ರಾ ಸಮಾಜದ ಏಳಿಗೆ ಸಾಧ್ಯ. ಈ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಜನಸ್ಪಂದನೆ ದೊರಕಿರುವುದೇ ಸಾಕ್ಷಿ ಎಂದು ಮಾಜಿ ಸಚಿವರೂ ಹಾಗೂ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಾದ ಕಾಗೊಡು ತಿಮ್ಮಪ್ಪ ಹೇಳಿದರು.
ಸಾಗರ ತಾಲೂಕಿನ ಕಲ್ಕೊಪ್ಪ ಕಾಲೇಜು ಆವರಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬರೂರು - ಕಲ್ಕೊಪ್ಪ ಮತ್ತು ಹಳೇ ವಿದ್ಯಾರ್ಥಿಗಳ ಸಹಯೋಗದಲ್ಲಿ ಶನಿವಾರ ಬೆಳ್ಳಿಹಬ್ಬ, ಗುರುವಂದನಾ ಹಾಗೂ ಸ್ನೇಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಜನಾಂಗದ ಏಳಿಗೆಯನ್ನು ಕಂಡು ಜೀವನವು ಸಂತೋಷ ಗೊಂಡಿದೆ. ಇಚ್ಛೆ ಹಾಗೂ ಸಂಸ್ಕಾರದಿಂದ ಹಳೇ ವಿದ್ಯಾರ್ಥಿಗಳು ವಿದ್ಯೆ ಕಲಿತ ಕಾಲೇಜು ಹಾಗೂ ಶಾಲೆಗಳನ್ನು ನೆನಪಿಸಿಕೊಂಡಿರುವುದು ಸಂತೋಷದ ಸಂಗತಿ ಎಂದರು.ಈ ಗ್ರಾಮದಲ್ಲಿ ಕಾಲೇಜು ಪ್ರಾರಂಭಿಸುವಾಗ ಹಲವಾರು ಸಾಧಕ ಬಾಧಕಗಳನ್ನು ಚರ್ಚಿಸಿ ಈ ಗ್ರಾಮದ ಸುತ್ತಮುತ್ತಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾಲೇಜನ್ನು ಪ್ರಾರಂಭಿಸ ಲಾಯಿತು. ಇಂದಿಗೆ 30 ವರ್ಷ ತುಂಬಿದ್ದು, ಇನ್ನೂ ಹೆಚ್ಚಿನ ಮಕ್ಕಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗೇರಲೆಂದು ಆಶಿಸುತ್ತೇನೆ ಎಂದು ಭಾವುಕರಾದರು.ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಲಿಸಿದ ಗುರು, ಸಾಕಿದ ಪೋಷಕರನ್ನು ಎಂದೂ ಮರೆಯದೇ ಭಾರತೀಯರು ಶಿಕ್ಷಣದ ಕ್ರಾಂತಿಯೊಂದಿಗೆ ಭಾರತ ದೇಶ ವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಹಳೇ ವಿದ್ಯಾರ್ಥಿಗಳು ಸಹಕಾರ ನೀಡಿದರೆ ಎಂತಹ ಶಾಲೆ, ಕಾಲೇಜುಗಳನ್ನಾದರೂ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಸಾಧ್ಯ. ಕೇವಲ ಸ್ವಾರ್ಥಕ್ಕಾಗಿ ಉನ್ನತ ಸ್ಥಾನಕ್ಕೇರದೆ ಪ್ರತಿಯೊಬ್ಬರಿಗೂ ಸಹಕಾರಿಯಾಗುವಂತಹ ವಿಧ್ಯಾಮಂದಿರಗಳಿಗೆ ಸಹಕಾರ ನೀಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.‘ಹನಿ ಹನಿಗೂಡಿದರೆ ಹಳ್ಳ ತೆನೆ ತೆನೆಗೂಡಿದರೆ ಬಳ್ಳ’ ಎಂಬಂತೆ ಪ್ರತಿಯೊಬ್ಬರೂ ಕೈಜೋಡಿಸಿದರೆ ಸಾಧನೆ ಮಾಡಲು ಸಾಧ್ಯ. ಅಭಿವೃದ್ಧಿ ಎಂಬುದು ಕೇವಲ ಶಾಸಕರಿಗೆ ಮಾತ್ರಾ ಸೀಮಿತವಾಗದೇ ಪ್ರತಿಯೊಬ್ಬರೂ ನಮ್ಮ ಊರು, ನಮ್ಮ ಶಾಲೆ ಎಂಬ ಮನೋಭಾವನೆ ಬೆಳಸಿಕೊಳ್ಳಬೇಕು. ಬೆಳ್ಳಿ ಹಬ್ಬ, ಸುವರ್ಣಮಹೋತ್ಸವ, ವಜ್ರಮಹೋತ್ಸವ ಗಳನ್ನು ಆಚರಿಸುವುದರೊಂದಿಗೆ ಹಳೇ ವಿದ್ಯಾರ್ಥಿಗಳು, ಶಿಕ್ಷಕರು, ಸಹಕರಿಸಿದ ಪೋಷಕರನ್ನು ಗೌರವಿಸುವುದರಿಂದ ಜನರಲ್ಲಿ ಅರಿವು ಮೂಡಿ ಶಾಲೆಯ ಅಭಿವೃದ್ಧಿಗೆ ಒತ್ತು ನೀಡುತ್ತಾರೆ ಎಂದು ಹೇಳಿದರು.
ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ ಉಪನ್ಯಾಸಕರು, ಶಾಲೆಯ ಕಟ್ಟಡ ನಿರ್ಮಾಣಕ್ಕೆ ಸ್ಥಳ ಕಲ್ಪಿಸಿದ ದಾನಿಗಳು, ಕಾಲೇಜು ಪ್ರಾರಂಭದ ಮೊದಲ ವರ್ಷದ ನೊಂದಾಯಿತ ವಿಧ್ಯಾರ್ಥಿಗಳು, ಹಾಗೂ ಪೋಷಕರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆಯ ವಿಧ್ಯಾರ್ಥಿ ಹಾಗೂ ಬರೂರು ಗ್ರಾಮಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅನ್ನಪೂರ್ಣ ಪುಟ್ಟಪ್ಪ, ಶಿವಮೊಗ್ಗ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಪ್ರಾಂಶುಪಾಲ ಪ್ರೇಮಲತಾ, ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶಿವಕುಮಾರ್, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿನಯ್‍ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.