ಯಲಗೋಡಮನೆ ತೋಟದಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷ

KannadaprabhaNewsNetwork |  
Published : Oct 09, 2025, 02:01 AM IST
ಕಾಳಿಂಗ ಸರ್ಪವನ್ನು ಹಿಡಿದ ಉರಗ ಪ್ರೇಮಿ ಪ್ರಶಾಂತ್ ಹುಲೇಕಲ್  | Kannada Prabha

ಸಾರಾಂಶ

ತಾಲೂಕಿನ ಯಲಗೋಡಮನೆ ಗ್ರಾಮದಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಉರಗ ಪ್ರೇಮಿ ಪ್ರಶಾಂತ್ ಹುಲೇಕಲ್ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಶಿರಸಿ:

ತಾಲೂಕಿನ ಯಲಗೋಡಮನೆ ಗ್ರಾಮದಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಉರಗ ಪ್ರೇಮಿ ಪ್ರಶಾಂತ್ ಹುಲೇಕಲ್ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಗ್ರಾಮದ ಶ್ರೀಧರ್ ಹೆಗಡೆ ಹಾಗೂ ಅಣ್ಣಪ್ಪ ಹೆಗಡೆಯವರಿಗೆ ಸೇರಿದ್ದ ಅಡಿಕೆ ತೋಟದ ಕಾಲುವೆಯಲ್ಲಿ ಬುಧವಾರ ಮಧ್ಯಾಹ್ನ ಕೆಲಸಕ್ಕೆ ತೆರಳಿದವರಿಗೆ ಕಂಡಿತು. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದರು. ಅಮ್ಮೆನಳ್ಳಿಯ ಅರಣ್ಯ ಇಲಾಖೆ ಕಚೇರಿಯಿಂದ ಆಗಮಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳು ಪರಿಶೀಲಿಸಿ ಅದು ಸ್ಥಳದಿಂದ ತೆರಳುತ್ತದೆ, ಆತಂಕ ಬೇಡ ಎಂದು ಹೇಳಿ ತೆರಳಿದರು.

ಆದರೆ ಒಬ್ಬ ಸಿಬ್ಬಂದಿ ಸ್ಥಳದಲ್ಲೇ ಇದ್ದ ಸಂದರ್ಭ ಊರವರ ಕರೆಯ ಮೇರೆಗೆ ಆಗಮಿಸಿದ ಉರಗ ಪ್ರೇಮಿ ಪ್ರಶಾಂತ್ ಹುಲೇಕಲ್ ಹಾವು ಹಿಡಿಯಲು ಮುಂದಾದರು. ಆದರೆ ಅವರನ್ನು ತಡೆದ ಅರಣ್ಯ ಸಿಬ್ಬಂದಿ, ಇಲಾಖೆಯ ಉನ್ನತ ಅಧಿಕಾರಿಗಳು ಆಗಮಿಸುತ್ತಿದ್ದು, ಅವರು ಬಂದ ನಂತರವೇ ಹಿಡಿಯುವಂತೆ ತಾಕೀತು ಮಾಡಿದರು. ಒಂದೆರಡು ಗಂಟೆ ಕಾದ ಬಳಿಕವೂ ಅಧಿಕಾರಿಗಳು ಆಗಮಿಸದಿದ್ದಾಗ, ಪ್ರಶಾಂತ್ ಹಾವು ಹಿಡಿಯಲು ಮುಂದಾದರು. ಹಾವಿನಿಂದ ಕಡಿತ ಇಲ್ಲವೇ ಬೇರೆ ತೆರನಾದ ಅಪಾಯವಾದರೆ ಅದಕ್ಕೆ ತಾವೇ ಹೊಣೆ, ಅರಣ್ಯ ಇಲಾಖೆಗೆ ಸಂಬಂಧವಿಲ್ಲ ಎನ್ನುವ ಭರವಸೆಯ ವೀಡಿಯೊವನ್ನು ಚಿತ್ರೀಕರಿಸಿದ ಬಳಿಕ ಹಾವು ಹಿಡಿಯಲು ಅವಕಾಶ ಮಾಡಿಕೊಡಲಾಯಿತು.

ಆಹಾರ ಸಿಗದೇ, ನೀರನ್ನು ಅರಸಿ ಬಂದಿದ್ದ ಕಾಳಿಂಗ ಸರ್ಪ ಸುಸ್ತಾಗಿತ್ತು. ಅಲ್ಲದೇ ಬಾಲದ ತುದಿಯಲ್ಲಿ ಸಣ್ಣ ಗಾಯ ಕೂಡ ಆಗಿತ್ತು. ಸುಮಾರು 10ರಿಂದ 12 ಅಡಿ ಉದ್ದವಿದ್ದ ಹಾವನ್ನು ಹಿಡಿದು, ಚೀಲದಲ್ಲಿ ತುಂಬಿಸಿದ ಪ್ರಶಾಂತ್ ಅದನ್ನು ಸುರಕ್ಷಿತವಾಗಿಯೇ ಅರಣ್ಯ ಇಲಾಖೆಗೆ ಸಿಬ್ಬಂದಿಗೆ ಹಸ್ತಾಂತರಿಸಿದರು. ಇಲಾಖೆಯ ಅಧಿಕಾರಿಗಳು ಬಳಿಕ ಆಗಮಿಸಿ ಅವರ ಜೀಪಲ್ಲಿ ಹಾವನ್ನು ತೆಗೆದುಕೊಂಡು ಹೋಗಿದ್ದು, ದಟ್ಟಾರಣ್ಯದಲ್ಲಿ ಸುರಕ್ಷಿತವಾಗಿ ಬಿಡುವ ಭರವಸೆ ನೀಡಿದ್ದಾರೆ.

ಬಂದಿದ್ದೇ ಅಚ್ಚರಿ:

ಶಿರಸಿಯ ಸುತ್ತಮುತ್ತ ಹತ್ತಿಪ್ಪತ್ತು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ವಿಧದಲ್ಲೂ ಕಾಳಿಂಗಸರ್ಪದ ಓಡಾಟದ ಸ್ಥಳ ಇಲ್ಲ. ಇವು ಮತ್ತಿಘಟ್ಟಾ ಅರಣ್ಯ ಪ್ರದೇಶ, ದೇವಿಮನೆ ಘಾಟ್ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಣುತ್ತವೆ. ಇಷ್ಟು ದೂರ ಅವು ಆಹಾರ ಬಯಸಿ ಬರಲು ಸಾಧ್ಯವಿಲ್ಲ. ನಿಜಕ್ಕೂ ಇದು ಅಚ್ಚರಿದಾಯಕ. 10-12 ವರ್ಷ ಪ್ರಾಯದ ಈ ಹಾವು ಅಸ್ವಸ್ಥವಾಗಿದೆ. ಬಳಲಿದೆ ಕೂಡ. ಇದಕ್ಕೆ ಆಹಾರ ಸಿಕ್ಕಿಲ್ಲ. ಆಹಾರ ಇಲ್ಲದಿದ್ದರೂ ಕೆಲ ತಿಂಗಳು ಬದುಕುತ್ತವೆ. ನೀರಿಲ್ಲದೇ ಇರಲಾರವು. ಇದರಿಂದ ನೀರನ್ನು ಅರಸಿ ಬಂದಿರುವ ಈ ಹಾವು, ಯಾರೋ ಇತ್ತೀಚೆಗೆ ಈ ಪ್ರದೇಶದಲ್ಲಿ ತಪ್ಪಾಗಿ ಬಿಟ್ಟು ಹೋದ ಪರಿಣಾಮ ಬಂದಿರಬೇಕು. ಇದನ್ನು ಆಹಾರ ಸಿಗುವ ಸ್ಥಳದಲ್ಲಿ ಬಿಡಬೇಕು ಎಂದು ಉರಗ ಪ್ರೇಮಿ ಪ್ರಶಾಂತ್ ಹುಲೇಕಲ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ