ಹಾನಗಲ್ಲನಲ್ಲಿ ಗಮನ ಸೆಳೆದ ಟಗರಿನ ಕಾಳಗ

KannadaprabhaNewsNetwork | Published : Mar 6, 2025 12:31 AM

ಸಾರಾಂಶ

ಸುಮಾರು 50ಕ್ಕೂ ಹೆಚ್ಚು ಟಗರುಗಳು ಸ್ಪರ್ಧೆಯದಲ್ಲಿ ನೋಡುಗರಿಗೆ ರಸದೌತಣ ಉಣಬಡಿಸಿದವು.

ಹಾನಗಲ್ಲ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕ ಶ್ರೀನಿವಾಸ ಮಾನೆ ಗೆಳೆಯರ ಬಳಗದ ಆಶ್ರಯದಲ್ಲಿ ಬೆಳ್ಳೋಡಿ ಕಾಳಿ ಟಗರಿನ ನೆನಪಿನಲ್ಲಿ ಆಯೋಜಿಸಿದ್ದ ಟಗರಿನ ಕಾಳಗ ಕ್ರೀಡಾಭಿಮಾನಿಗಳಿಗೆ ಸಂತಸ ನೀಡಿತು.

ಸಾರ್ವಜನಿಕರು ಟಗರಿನ ಕಾಳಗದ ಸೊಬಗು ಕಣ್ತುಂಬಿಕೊಂಡರು. ಕೊಬ್ಬಿದ ಎರಡು ಟಗರುಗಳು ನಾಲ್ಕೈದು ಹೆಜ್ಜೆ ಹಿಂದೆ ಸರಿದು ವಾಪಸ್ ಎದುರು ದೌಡಾಯಿಸಿ ಜೋರಾಗಿ ತಲೆಯಿಂದ ಡಿಚ್ಚಿ ಹೊಡೆಯುವ ದೃಶ್ಯ ಬಲು ರೋಚಕವಾಗಿತ್ತು. ನೋಡುಗರು ಕೇಕೆ, ಶಿಳ್ಳೆ ಹೊಡೆದು ಹುರಿದುಂಬಿಸಿದರು.

ಸುಮಾರು 50ಕ್ಕೂ ಹೆಚ್ಚು ಟಗರುಗಳು ಸ್ಪರ್ಧೆಯದಲ್ಲಿ ನೋಡುಗರಿಗೆ ರಸದೌತಣ ಉಣಬಡಿಸಿದವು. ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲು ಹೀಗೆ ಟಗರುಗಳನ್ನು ವಿಂಗಡಿಸಿ ಸ್ಪರ್ಧೆಗೆ ಬಿಡಲಾಗುತ್ತಿತ್ತು. ಟಗರುಗಳ ಪರಸ್ಪರ ಸೆಣಸಾಟ ರೋಮಾಂಚನ ಸೃಷ್ಟಿಸಿತು.

ಇದಕ್ಕೂ ಮೊದಲು ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜಣ್ಣ ನೀಲಗುಂದ ಕಾಳಗ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದ ಆದರ್ಶ ಶೆಟ್ಟಿ, ಮಹೇಶ ಪವಾಡಿ, ರಾಜಕುಮಾರ ಶಿರಪಂತಿ, ಈರಣ್ಣ ಬೈಲವಾಳ, ಸಾಹಿತಿ ಮಾರುತಿ ಶಿಡ್ಲಾಪೂರ, ಉಮೇಶ ದೊಡ್ಡಮನಿ, ಶಿವು ಭದ್ರಾವತಿ, ಮಾಲತೇಶ ಕಾಳೇರ, ಶಿವು ತಳವಾರ, ಲಿಂಗರಾಜ ಮಡಿವಾಳರ, ಷಣ್ಮುಖ ಕುಂದೂರ, ಸಂಜು ಬ್ಯಾಡಗಿ, ಶಿವು ಆಲದಕಟ್ಟಿ, ಸುರೇಶ ನಿಂಗೋಜಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.ಹಲಗೆ ಬಾರಿಸುವ ವಿಚಾರಕ್ಕೆ ಹಲ್ಲೆ: ದೂರು, ಪ್ರತಿ ದೂರು- 9 ಬಂಧನ

ರಾಣಿಬೆನ್ನೂರು: ಹಲಗೆ ಬಾರಿಸುತ್ತ ನಿಂತಿದ್ದ ಯುವಕರ ಮೇಲೆ ಅನ್ಯಕೋಮಿನ ಯುವಕರ ಗುಂಪೊಂದು ಬ್ಲೇಡ್‌ನಿಂದ ಹಲ್ಲೆ ಮಾಡಿರುವ ಘಟನೆ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ಪ್ರತಿದೂರು ದಾಖಲಾಗಿದೆ.ಇಲ್ಲಿಯ ಮಾರುತಿ ನಗರದ ನಿವಾಸಿ ಕಿರಣ ನಾಗಪ್ಪ ಲಮಾಣಿ ಹಾಗೂ ಶಿವಣ್ಣ ಮಾರ್ತಾಂಡಪ್ಪ ಅಂಗಡಿ ಹಲ್ಲೆಗೀಡಾದವರು.

ಮಾರುತಿ ನಗರದಲ್ಲಿ ಹಲಗೆ ಬಾರಿಸುತ್ತ ನಿಂತಿದ್ದಾಗ ನಾವು ಹೇಳಿದಂತೆ ಹಲಗೆ ಬಾರಿಸಬೇಕು ಎಂದು ಅನ್ಯಕೋಮಿನ ಯುವಕರು ಒತ್ತಾಯಿಸಿದರು. ಆ ರೀತಿ ನಮಗೆ ಬರುವುದಿಲ್ಲ ಎಂದು ಹೇಳಿದ್ದಕ್ಕೆ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಶಾಬಜಾ ದಾದಾಪೀರ ಹರಪನಹಳ್ಳಿ, ಮಹ್ಮದಮಿಯಾನ ಜಾಪರವುಲ್ಲಾ ಬಾವಿಕಟ್ಟಿ, ಮಹ್ಮ ದಶಫರವುಲ್ಲಾ ಮೈದೂರ, ಮಹ್ಮದಮುಜಿಲಾ ಶರೀಫವುಲ್ಲಾ ಪೀರಜಾದೆ, ಇರ್ಫಾನಹುಸೇನ ಅಮ್ಮಿನಬಾವಿ, ಜೀಶನ ಮೊಹಿದ್ದೀನ್ ಮುಲ್ಲಾ ವಿರುದ್ಧ ಜಾತಿನಿಂದನೆ ಹಾಗೂ ಮಾರಣಾಂತಿಕ ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಪ್ರತಿ ದೂರು ನೀಡಿರುವ ಜೀಶನ ಮುಲ್ಲಾ, ಮಸೀದಿ ಬಳಿ ಹಲಗೆ ಬಾರಿಸಬೇಡಿ ಮುಂದೆ ಹೋಗಿ ಎಂದು ಹೇಳಿದ್ದಕ್ಕೆ ಕಿರಣ ಲಮಾಣಿ, ಗಣೇಶ ನ್ಯಾಮತಿ, ಶಿವಣ್ಣ ಅಂಗಡಿ, ಭರತ ಕೂಲೇರ, ಪ್ರಶಾಂತ ಕೂಲೇರ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು 9 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

Share this article