ಯಲ್ಲಾಪುರ: ತಮ್ಮ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭಿಸುವಂತೆ ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಗುಡಂದೂರು ಸಿದ್ದಿವಾಡಾದ ನಿವಾಸಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅದಕ್ಕೂ ಮುನ್ನ ಗ್ರಾಮಸ್ಥರು ಪಟ್ಟಣದ ಬಸ್ ನಿಲ್ದಾಣದಿಂದ ಬಿಇಒ ಕಚೇರಿ ವರೆಗೆ ಮೆರವಣಿಗೆಯಲ್ಲಿ ಬಂದರು.ಊರಿನಲ್ಲಿ ಶಾಲೆ ಇಲ್ಲದ ಕಾರಣ ಪುಟ್ಟ ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕಿದೆ. ದಿನನಿತ್ಯ ೩೧ ಮಕ್ಕಳು ೩ ಕಿಮೀ ನಡೆದುಕೊಂಡು ದೂರದ ಬೈಲಂದೂರು ಶಾಲೆಗೆ ಹೋಗಬೇಕಾಗಿದೆ. ಕಾಡಿನ ದಾರಿ ಅಪಾಯಕಾರಿಯಾಗಿದ್ದು, ಪ್ರಾಣಿಗಳ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸಮಸ್ಯೆಯಾಗಿದೆ. ಕಾರಣ ಊರಿನಲ್ಲಿಯೇ ಶಾಲೆ ಆರಂಭಿಸಿ, ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಗೆ ಸರ್ಕಾರ ಸ್ಪಂದಿಸಿ ಶಾಲೆ ಮಂಜೂರು ಮಾಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.ಬುಡಕಟ್ಟು ಸಿದ್ದಿ ಜನಾಂಗದ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರೀಫ್‌ಸಾಬ್ ಮೋದಿನಸಾಬ್ ಮುಜಾವರ, ಗ್ರಾಪಂ ಸದಸ್ಯ ರಸೂಲ್ ಸಾಬ್ ಅಬ್ದುಲ್ ಸಾಬ್ ಮುಜಾವರ, ಪ್ರಮುಖರಾದ ಮುಕಬುಲ್ ಮುಜಾವರ, ಹಸನ್ ಸಾಬ ಮುಜಾವರ, ನೂರಸಾಬ್ ಮುಜಾವರ, ಮಹಮ್ಮದ್ ಸಾಬ್ ಮುಜಾವರ, ದಸ್ತಗಿರಿಸಾಬ್ ಮೆರವಾಲೆ ಹಾಗೂ ಗ್ರಾಮದ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಹಿಳೆಯರು ಭಾಗವಹಿಸಿದ್ದರು.
ಗುಡಂದೂರು: ಕಿರವತ್ತಿ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಗುಡಂದೂರು ಸರಿಸುಮಾರು ೩೫ ಮನೆಗಳಿರುವ ಪುಟ್ಟ ಊರು. ಪರಿಶಿಷ್ಟ ವರ್ಗಕ್ಕೆ ಸೇರಿದ ಮುಸ್ಲಿಂ ಸಿದ್ದಿಗಳೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅಂದಾಜು ೧೫೦ ಜನಸಂಖ್ಯೆ ಹೊಂದಿರುವ ಈ ಊರಿನಲ್ಲಿ ಸದ್ಯ ೩೧ ಮಕ್ಕಳು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾರೆ.ಕಳೆದ ಕೆಲವು ವರ್ಷಗಳಿಂದಲೂ ಶಾಲೆ ಬೇಕೆಂಬ ಬೇಡಿಕೆಯನ್ನು ಗ್ರಾಮಸ್ಥರು ಸಲ್ಲಿಸುತ್ತಿದ್ದರೂ, ಇದುವರೆಗೂ ಊರಿಗೆ ಶಾಲೆಯ ಭಾಗ್ಯ ಒದಗಿಬಂದಿಲ್ಲ.
ಸಮೀಪದ ಬೈಲಂದೂರು ಶಾಲೆಗೆ ೧.೫ ಕಿ.ಮೀ. ಅಂತರ ಎಂದು ಜಿಪಿಎಸ್‌ನಲ್ಲಿ ತೋರಿಸುವುದು ಹೌದಾದರೂ ಅದು ಕಾಡಿನ ದಾರಿ. ವಾಸ್ತವದಲ್ಲಿ ಬೈಲಂದೂರು ಶಾಲೆಗೆ ಹೋಗಬೇಕೆಂದರೆ ಪುಟ್ಟ ಮಕ್ಕಳು ೩ ಕಿ.ಮೀ. ನಡೆಯಬೇಕಿದೆ.ಕಿರವತ್ತಿಯ ಅನೇಕ ಕಡೆಗಳಲ್ಲಿ ೧೦-೧೨ ಮಕ್ಕಳಿಗೆ ಶಾಲೆ ಇದೆ. ಸಂಪರ್ಕ ಚೆನ್ನಾಗಿರುವ ಅನೇಕ ಕಡೆ ಹತ್ತಿರವೇ ಶಾಲೆ ಮಂಜೂರು ಮಾಡಲಾಗಿದೆ. ಆದರೆ ಗುಡಂದೂರಿನಲ್ಲಿ ೩೧ ಮಕ್ಕಳಿದ್ದರೂ, ಬಸ್ ಸಂಪರ್ಕದ ಸಮಸ್ಯೆ ಇದ್ದರೂ ಏಕೆ ಶಾಲೆಯನ್ನು ಮಂಜೂರು ಮಾಡುತ್ತಿಲ್ಲವೆಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಶಾಲೆಗೆ ನಾವೇ ಕಟ್ಟಡ ನಿರ್ಮಿಸಿಕೊಡುತ್ತೇವೆ: ಬಿಸಿಯೂಟ ಕೊಡದಿದ್ದರೆ ನಮ್ಮ ಮಕ್ಕಳಿಗೆ ನಾವೇ ಊಟ ನೀಡುತ್ತೇವೆ, ಕನಿಷ್ಠ ಓರ್ವ ಶಿಕ್ಷಕರನ್ನು ಒದಗಿಸಿ. ಅಪಾಯದ ಕಾಡುದಾರಿಯಲ್ಲಿ ಮಕ್ಕಳನ್ನು ಬೈಲಂದೂರು ಶಾಲೆಗೆ ಯಾವ ಕಾರಣಕ್ಕೂ ಕಳಿಸುವುದಿಲ್ಲ ಎಂಬ ಒಕ್ಕೊರಲಿನ ಆಗ್ರಹ ಗ್ರಾಮಸ್ಥರದ್ದಾಗಿದೆ. ಗ್ರಾಮಕ್ಕೆ ಈ ಹಿಂದೆ ಮಂಜೂರಾಗಿದ್ದ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿಬಂದಿದೆ.