ಮಾರುತಿ ಶಿಡ್ಲಾಪೂರ
ಅಣಬೆ ಬೇಸಾಯದಲ್ಲಿ ನಿವೃತ್ತ ಸೈನಿಕರೊಬ್ಬರು ಸೈ ಎನಿಸಿಕೊಂಡಿದ್ದಾರೆ. ನಿವೃತ್ತಿಯಲ್ಲಿ ಜನರಿಗೆ ಒಳ್ಳೆಯ ಪೋಷಕಾಂಶದ ಅಣಬೆ ತರಕಾರಿ ನೀಡುವ ಬಯಕೆ. ಜನರ ಆರೋಗ್ಯ ಕಾಪಾಡುವ ಮಹದಾಸೆ, ಪರಿಶ್ರಮದಿಂದ ಕೃಷಿಯಲ್ಲಿ ದುಡಿದರೆ ಭೂಮಿತಾಯಿ ಕೈ ಹಿಡಿಯುತ್ತಾಳೆ ಎಂಬ ಅಚಲ ವಿಶ್ವಾಸ ಅವರದು.
ತಾಲೂಕಿನ ಹಸನಾಬಾದಿ ಗ್ರಾಮದ ಸಂತೋಷ ಆರೇರ ಸೈನಿಕ ಸೇವೆ ಪೂರೈಸಿ ಈಗ ಕೃಷಿಯಲಿ, ಅದರಲ್ಲೂ ಅಣಬೆ ಕೃಷಿಯಲ್ಲಿ ತೊಡಗಿದ್ದಾರೆ. ಸೇನೆಯಿಂದ ಮರಳಿದ ಮೇಲೆ ಕೃಷಿಯನ್ನೇ ತಮ್ಮ ಕಸುಬನ್ನಾಗಿ ಆರಿಸಿಕೊಂಡು ಅಣಬೆ, ಭತ್ತ, ಕಾಕಡಾ ಮಲ್ಲಿಗೆ, ತರಕಾರಿ ಬೆಳೆಯುತ್ತಾರೆ. ಇದೆಲ್ಲದಕ್ಕೂ ಮಡದಿ ಸುಜಾತಾ, ಪದವೀಧರ ಸಹೋದರ ಸಚಿನ್ ಹೆಗಲಾಗಿದ್ದಾರೆ.ಒಳ್ಳೆಯ ಬೆಳೆ ಬೆಲೆ:
ಇದನ್ನು ದೂರದ ಪಟ್ಟಣಗಳಿಗೆ ಕಳಿಸುವ ಬದಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳ ಸಂತೆಯಲ್ಲಿ ಹಾಗೂ ಮುಂಡಗೋಡ ಸಾಲು ಸಂತೆಯಲ್ಲಿ ಕೂತು ಮಾರುತ್ತಾರೆ. ನ್ಯೂಟ್ರಿಶಿಯಸ್ ಆಹಾರದ ಬಗೆಗೆ ಅರಿವಿದ್ದವರು ಹುಡುಕಿಕೊಂಡು ಬಂದು ಖರೀದಿಸುತ್ತಾರೆ. ಇದರ ಮಹತ್ವ ಜನರಿಗೆ ಅರಿವಾದರೆ ಇದು ದೊಡ್ಡ ಉದ್ಯಮವೇ ಆಗಬಲ್ಲದು.
ಸಣ್ಣ ಕೃಷಿ ಉದ್ಯಮ:ತಾಲೂಕಿನ ವಾಯುಗುಣಕ್ಕೆ ಕೇವಲ ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾತ್ರ ಬೆಳೆಯಲು ಸಾಧ್ಯ. ಬೇಸಿಗೆಯ ತಾಪಕ್ಕೆ ಇದು ಬೆಳೆಯಲ್ಲ. ಇದನ್ನು ವಿಶೇಷವಾಗಿ ಮಹಿಳೆಯರು ಮನೆಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಬೆಳೆದರೂ ಮನೆಯ ಖರ್ಚನ್ನು ಇದರ ಲಾಭದಲ್ಲಿ ನಿಭಾಯಿಸಬಹುದು. ಇದು ಕಷ್ಟವಿಲ್ಲದ ಸಣ್ಣ ಕೃಷಿ ಉದ್ಯಮ.ನ್ಯೂಟ್ರಿಷಿಯನ್ ಫುಡ್ :ಈ ಅಣಬೆ ಒಂದು ತರಕಾರಿ ಆಹಾರವಾಗಿ ಬಳಸುವಲ್ಲಿ ಜಾಗೃತಿ ಮೂಡಿಸಬೇಕು. ಇದು ಶುದ್ಧ ಸಸ್ಯಹಾರಿ ಎಂಬುದನ್ನು ಮನವರಿಕೆ ಮಾಡಬೇಕು. ವಿಟ್ಯಾಮಿನ್ ಡಿ ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ. ಬಿಪಿ, ಸಕ್ಕರೆ ಕಾಯಿಲೆ, ಬೊಜ್ಜು ನಿಯಂತ್ರಣಕ್ಕೆ ಒಳ್ಳೆಯ ಆಹಾರ. ತರಕಾರಿಯಂತೆ, ಸಾಂಬಾರ ಮಾಡಿ ಇದನ್ನು ಊಟಕ್ಕೆ ಬಳಸಬಹುದು. ಇದನ್ನು ಒಣಗಿಸಿ ಕೂಡ ಮಾರಬಹುದು. ಬಿಸ್ಕಿಟ್, ಹಪ್ಪಳ, ಉಪ್ಪಿಕಾಯಿ, ಚಕ್ಕಲಿ ಮಾಡಬಹುದು.