ಜೀವನ ಪರ್ಯಂತ ಉಳಿಯಲಿದೆ ಶಾಸ್ತ್ರೋಕ್ತ ವಿವಾಹ: ವೇದ ವ್ಯಾಸಾಚಾರ್ ಶ್ರೀಷಾನಂದ

KannadaprabhaNewsNetwork | Published : May 17, 2025 2:03 AM
Follow Us

ಸಾರಾಂಶ

ಹೊರನಾಡು, ವಿವಾಹದ ಮಹತ್ವ ಏನು ಎಂದು ತಿಳಿದುಕೊಳ್ಳುವುದಕ್ಕೆ ವೇದಿಕೆ ಅತ್ಯಗತ್ಯವಾಗಿದೆ. ಶಾಸ್ತ್ರೋಕ್ತವಾಗಿ ನಡೆಯುವ ವಿವಾಹ ಜೀವನ ಪರ್ಯಂತ ಉಳಿಯುವಂತಹದು ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವೇದ ವ್ಯಾಸಾಚಾರ್ ಶ್ರೀಷಾನಂದ ಹೇಳಿದರು.

ಶ್ರೀ ಕ್ಷೇತ್ರ ಹೊರನಾಡಿನ ಲಲಿತಾ ಕಲಾ ಮಂಟಪದಲ್ಲಿ ಉಚಿತ ಸಾಮೂಹಿಕ ವಿವಾಹ,

ಕನ್ನಡಪ್ರಭಾ ವಾರ್ತೆ ಹೊರನಾಡು

ವಿವಾಹದ ಮಹತ್ವ ಏನು ಎಂದು ತಿಳಿದುಕೊಳ್ಳುವುದಕ್ಕೆ ವೇದಿಕೆ ಅತ್ಯಗತ್ಯವಾಗಿದೆ. ಶಾಸ್ತ್ರೋಕ್ತವಾಗಿ ನಡೆಯುವ ವಿವಾಹ ಜೀವನ ಪರ್ಯಂತ ಉಳಿಯುವಂತಹದು ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವೇದ ವ್ಯಾಸಾಚಾರ್ ಶ್ರೀಷಾನಂದ ಹೇಳಿದರು.

ಶ್ರೀ ಕ್ಷೇತ್ರ ಹೊರನಾಡಿನ ಲಲಿತಾ ಕಲಾ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆ ಸಪ್ತಪದಿ ಯೋಜನೆಯಡಿ 32 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ದೇವಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆಯೋ ಆಲ್ಲಿ ಗಂಗೆಯಾದಿಯಾಗಿ ಎಲ್ಲಾ ಪುಣ್ಯ ನದಿಗಳು ಸಮಾಗಮವಾಗಿವೆ. ಹಿಂದೂ ಧರ್ಮದ ಪರಿಕಲ್ಪನೆಯೇ ಬೇರೆ, ಬೇರೆ ಧರ್ಮ ದಲ್ಲಿರುವ ಪರಿಕಲ್ಪನೆಯೇ ಬೇರೆ. ವಿವಾಹ ಎಂಬುವುದು ಮಕ್ಕಳಾಟವಾಗಬಾರದು. ಒಂದು ಹೆಣ್ಣಿಗೆ ಒಂದು ಗಂಡು ಅದು ಪ್ರಕೃತಿ ನಿಯಮ ಎಂದರು.

ಸಾಮೂಹಿಕ ವಿವಾಹ ಶ್ರೀ ಕ್ಷೇತ್ರದಲ್ಲಿ ನಡೆದಿರುವುದರೊಂದಿಗೆ ಇಲ್ಲಿಯವರೆಗೂ ಸುಖಿ ಸಂಸಾರ ನಡೆಸುತ್ತಿರುವುದೇ ಒಂದು ಜ್ವಲಂತ ಉದಾಹರಣೆಯಾಗಿದೆ. ವಿವಾಹ ಎನ್ನುವುದು ಹೊಸ ಜೀವನದ ಪ್ರಾರಂಭ, ಗಂಡನ ಜವಾಬ್ದಾರಿ ಬಹಳ ಮುಖ್ಯ, ತನ್ನ ಬಂಧು ಬಳಗವನ್ನು ಬಿಟ್ಟು ನಿಮ್ಮ ಮನೆಗೆ ಬಂದಿರುತ್ತಾರೆ ಎಂದ ಅವರು, ಈ ಮನೆಯ ತಂದೆ ತಾಯಿಯನ್ನು ನಿಮ್ಮ ತಂದೆ ತಾಯಿಯಂತೆ ಕಾಣಿರಿ ಎಂದು ವಧುವಿಗೆ ಕಿವಿಮಾತು ಹೇಳಿ ನೂತನ ವಧು ವರರಿಗೆ ಶುಭ ಹಾರೈಸಿದರು.

ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಗೃಹಸ್ಥಾಶ್ರಮ ಮನುಷ್ಯನ ಜೀವನದ ಪ್ರಮುಖ ಘಟ್ಟವಾಗಿದೆ. ವಿವಾಹದ ಗಂಡುಹೆಣ್ಣು ಬದುಕನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವಂತಹ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡು ಬರುತ್ತಿದೆ. ಮದುವೆಯಾದ ನಂತರ ಮನೆ ಯಲ್ಲಿ ದುಂದು ವೆಚ್ಚ ಮಾಡದೇ ಆರ್ಥಿಕ ಹೊರೆ ಮಾಡಿಕೊಳ್ಳದೆ ಸಂಸಾರದಲ್ಲಿ ಹೊರೆಯಾಗಬಾರದು ಎಂದು ವಧು ವರರಿಗೆ ಕಿವಿಮಾತು ಹೇಳಿದರು.

ಜಿ.ಬಿ.ಗಿರಿಜಾಶಂಕರ್ ಜೋಷಿ, ಶ್ರೀ ಕ್ಷೇತ್ರದಲ್ಲಿ 1954 ರಲ್ಲೇ ಅಂದಿನ ಧರ್ಮಕರ್ತ ವೆಂಟಸುಬ್ಬಾ ಜೋಯಿಸ್ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಬಿಸಿಊಟ ಪ್ರಾರಂಭಿಸಿದ್ದು ಕರ್ನಾಟಕ ಇತಿಹಾಸದಲ್ಲೇ ಪ್ರಥಮವಾಗಿದೆ. ನಂತರ 1991 ರಿಂದ 7ನೇ ಧರ್ಮಕರ್ತರಾಗಿ ಅಧಿಕಾರ ಸ್ವಿಕರಿಸಿದ ಜಿ.ಭೀಮೇಶ್ವರ ಜೋಷಿ ಅವರು ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು, 1991-92 ರಲ್ಲಿ ಪ್ರಾರಂಭವಾದ ಸಪ್ತಪದಿ ಯೋಜನೆಯಡಿ ಈವರೆಗೆ 1011 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ, ಮಹಿಳಾಭಿವೃದ್ಧಿ ಯೋಜನೆ, ಆನಂದ ಜ್ಯೋತಿ, ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ₹20 ಕೋಟಿ ಗಳನ್ನು ವಿನಿಯೋಗಿಸುವ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಭಕ್ತರಿಂದ ಬಂದಂತಹ ದೇಣಿಗೆಯನ್ನು ಜನಾಭಿವೃದ್ದಿಗೆ ಬಳಸಲಾಗಿದೆ ಎಂದು ಹೇಳಿದರು.

ವೇ.ಬ್ರ.ಶ್ರೀ ಉದಯಶಂಕರ ಶರ್ಮ ಪೌರೋಹಿತ್ಯದಲ್ಲಿ 11 ಜೋಡಿಗಳು ಸತಿಪತಿಗಳಾಗಿ ಸಪ್ತಪದಿ ತುಳಿದರು.

ವೇದಿಕೆಯಲ್ಲಿ ರಾಜಲಕ್ಷ್ಮೀ ಬಿ. ಜೋಷಿ, ರಾಮನಾರಾಯಣ್ ಜೋಷಿ, ರಾಜಗೋಪಾಲ್ ಜೋಷಿ, ಡಾ.ಕೆಳದಿ ವೆಂಕಟ ಜೋಯಿಸ್ , ನ್ಯಾಯಮೂರ್ತಿ ವೇದ ವ್ಯಾಸಾಚಾರ್ ಶ್ರೀಷಾನಂದ ಧರ್ಮಪತ್ನಿ ರಜನಿ ಉಪಸ್ಥಿತರಿದ್ದರು. ಶಂಕರ ನಾರಾಯಣ್ ಜೋಷಿ ಸ್ವಾಗತಿಸಿ, ಗಜೇಂದ್ರ ಜೋಯಿಸ್ ವಂದಿಸಿದರು, 16 ಕೆಸಿಕೆಎಂ 1ಶ್ರೀ ಕ್ಷೇತ್ರ ಹೊರನಾಡಿನ ಲಲಿತಾ ಕಲಾ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವೇದ ವ್ಯಾಸಾಚಾರ್ ಶ್ರೀಷಾನಂದ ಉದ್ಘಾಟಿಸಿದರು. ಜಿ. ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಬಿ. ಜೋಷಿ, ರಜನಿ, ರಾಮನಾರಾಯಣ್‌ ಜೋಷಿ ಇದ್ದರು.