ಸಾರಾಂಶ
ಮಹರ್ಷಿ ವಾಲ್ಮೀಕಿ ಶೋಷಿತ ಸಮುದಾಯದಲ್ಲಿ ಹುಟ್ಟಿ ಬದುಕನ್ನು ಬದಲಿಸುವಂತಹ ಮಹಾಕಾವ್ಯವನ್ನು ರೂಪಿಸಿದರು. ಅವರ ಮೌಲ್ಯಗಳು, ಅವರ ರಚನೆಗಳನ್ನು ಜನರಿಗೆ ತಿಳಿಸಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಮೂಲಕ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರ ಸ್ಥಾಪನೆ ಮಾಡಲಾಗುವುದು.
ಬೆಂಗಳೂರು : ಮಹರ್ಷಿ ವಾಲ್ಮೀಕಿ ಶೋಷಿತ ಸಮುದಾಯದಲ್ಲಿ ಹುಟ್ಟಿ ಬದುಕನ್ನು ಬದಲಿಸುವಂತಹ ಮಹಾಕಾವ್ಯವನ್ನು ರೂಪಿಸಿದರು. ಅವರ ಮೌಲ್ಯಗಳು, ಅವರ ರಚನೆಗಳನ್ನು ಜನರಿಗೆ ತಿಳಿಸಲು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಮೂಲಕ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರ ಸ್ಥಾಪನೆ ಮಾಡಲಾಗುವುದು. ಅದಕ್ಕಾಗಿ 40 ಕೋಟಿ ರು. ಮೀಸಲಿಡಲಾಗಿದೆ.
ಇದು ಎಸ್ಸಿ/ಎಸ್ಟಿ ಸಮುದಾಯದ 500 ವಿದ್ಯಾರ್ಥಿಗಳಿಗೆ ಒಮ್ಮೆಗೆ ತರಬೇತಿ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ರಾಜ್ಯದ 10 ಜಿಲ್ಲೆಗಳಲ್ಲಿ ಹೊಸದಾಗಿ ಭೂಮಿ ಖರೀದಿಸಿ ಎಸ್ಸಿ/ಎಸ್ಟಿ ಕಾಲೋನಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಅದಕ್ಕೆ ಮಹರ್ಷಿ ವಾಲ್ಮೀಕಿ ಅಥವಾ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಲಾಗುವುದು. ಉಳಿದಂತೆ ಬೆಂಗಳೂರಿನಲ್ಲಿ ವಾಲ್ಮೀಕಿ ಸೌಧ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಜತೆಗೆ ಮುಂದಿನ ವರ್ಷದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.