ದಾಬಸ್‍ಪೇಟೆ: ಗ್ರಾಮೀಣರು ದೇವರ ಬಗ್ಗೆ ವಿಶೇಷ ಭಕ್ತಿ ಹೊಂದಿದ್ದು, ಪ್ರತಿ ವರ್ಷವೂ ಜಾತ್ರೆ, ಉತ್ಸವ, ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿರುವುದು ಸಂತೋಷದ ವಿಚಾರ ಎಂದು ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಮಲ್ಲೇಶ್ವರ ಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು,ಜನರ ಸಂತೋಷ, ನೆಮ್ಮದಿಯನ್ನು ಬೇರೆ ಯಾವುದೇ ರೀತಿಯಿಂದಲೂ ನೀಡಲು ಸಾಧ್ಯವಿಲ್ಲ. ಜಾತ್ರೆ, ಉತ್ಸವಗಳು ಗ್ರಾಮಸ್ಥರಲ್ಲಿ ಸ್ನೇಹ, ಸೌಹಾರ್ದತೆ ಬೆಳೆಸುತ್ತವೆ. ಇದೇ ನಿಜವಾದ ದೇವರ ಕಾರ್ಯ. ಈ ರೀತಿಯಲ್ಲಿಯೂ ಶಾಂತಿ ನೆಮ್ಮದಿಯನ್ನೇ ಎಲ್ಲರೂ ಬಯಸುತ್ತಿದ್ದಾರೆ ಎಂದರು.
ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಇಂದು ಮನುಷ್ಯನ ಜೀವನ ಯಾಂತ್ರಿಕವಾಗಿದ್ದು ಬಿಡುವಿಲ್ಲದ ಕಾರ್ಯದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದಾನೆ. ಗ್ರಾಮದ ಜನತೆ ಶಾಂತಿ, ನೆಮ್ಮದಿಯಾಗಿರಲೆಂದು ನಮ್ಮ ಹಿರಿಯರು ಪ್ರತಿ ಗ್ರಾಮದಲ್ಲಿಯೂ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಈ ಕಾರ್ಯ ಇಂದಿಗೂ ನಡೆಯುತ್ತಿದೆ, ಮುಂದೆಯೂ ನಡೆಯುತ್ತದೆ ಎಂದರು.ರಥೋತ್ಸವದಲ್ಲಿ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಗ್ರಾಪಂ ಮಾಜಿ ಅಧ್ಯಕ್ಷ ರಾಮಾಂಜೀನೇಯ, ಮುಖಂಡ ನಯಾಜ್ ಖಾನ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ಪೋಟೋ 8 : ಸೋಂಪುರ ಹೋಬಳಿಯ ವನಕಲ್ಲು ಮತದಲ್ಲಿ ಮಲ್ಲೇಶ್ವರ ಸ್ವಾಮಿಯ ರಥೋತ್ಸವಕ್ಕೆ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ಹಾಗೂ ಭಕ್ತಾಧಿಗಳು ಚಾಲನೆ ನೀಡಿದರು.