ಭಟ್ಕಳ:
ಸಮುದ್ರದ 5 ನಾಟಿಕಲ್ ಮೈಲು ದೂರದ ಒಳಗೆ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಂಗಳೂರು ಮತ್ತು ಮಲ್ಪೆ ಮೂಲದ ಆಳಸಮುದ್ರ ಯಾಂತ್ರೀಕೃತ ದೊಣಿಯನ್ನು ಭಟ್ಕಳದ ಮೀನುಗಾರರು ಹಿಡಿದು ದಡಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು ಇಲ್ಲಿನ ಬಂದರಿನಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.ಮಲ್ಪೆಯ ಕೃಷ್ಣಪ್ರಸಾದ ದೋಣಿ ಮಾಲೀಕ ಕೊಡವೂರು ಗ್ರಾಮದ ಚೇತನ ನೀಡಿದ ದೂರಿನ ಮೇಲೆ ದರೋಡೆ ಕೇಸ್ ದಾಖಲಿಸಿಕೊಂಡ ಉಡುಪಿ ಪೊಲೀಸರು ಭಟ್ಕಳ ಬಂದರಿಗೆ ಆಗಮಿಸಿ ದೋಣಿ ವಶಕ್ಕೆ ಪಡೆಯಲು ಯತ್ನಿಸಿದಾಗ ಸ್ಥಳೀಯ ಮೀನುಗಾರರು ಅದಕ್ಕೆ ಅಡ್ಡಿಪಡಿಸಿದರು. ಸಮುದ್ರದಲ್ಲಿ ಕಾನೂನು ಬಾಹಿರವಾಗಿ ಆಳಸಮುದ್ರ ಯಾಂತ್ರೀಕೃತ ದೋಣಿಗಳು ಮೀನುಗಾರಿಕೆ ನಡೆಸುತ್ತಿವೆ. 40 ನಾಟಿಕಲ್ ಮೈಲು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಬೇಕಾದ ದೋಣಿಗಳು ಸ್ಥಳೀಯ 5 ಕಿಮೀ ವ್ಯಾಪ್ತಿಯಲ್ಲಿ ಬಂದು ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ನಮ್ಮ ಬದುಕು ನೀರಿಗೆ ಬಿದ್ದಿದ್ದು ಸಂಕಷ್ಟ ಅನುಭವಿಸುತ್ತಿದ್ದೇವೆ ಎಂದು ಸ್ಥಳೀಯ ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.ನಿಷೇಧಿತ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾನೂನು ಉಲ್ಲಂಘಿಸಿ ಮೀನುಗಾರಿಕೆ ಮಾಡುತ್ತಿದ್ದವರನ್ನು ಪ್ರಶ್ನಿಸಿದಕ್ಕೆ ನಮ್ಮ ಮೇಲೆ ದರೋಡೆ ಪ್ರಕರಣ ದಾಖಲಿಸಲಾಗಿದೆ ಎಂದು ಮೀನುಗಾರರು ನೋವು ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರದೇಶದಲ್ಲಿ ಕಾನೂನು ಬಾಹಿರ ಮೀನುಗಾರಿಕೆ ಚಟುವಟಿಕೆ ನಡೆಸುವುದಿಲ್ಲ ಎಂದು ಹೇಳುವ ತನಕ ವಶಕ್ಕೆ ಪಡೆದ ದೋಣಿ ಬಿಡುವುದಿಲ್ಲ ಎಂದು ಮೀನುಗಾರರು ಪಟ್ಟು ಹಿಡಿದರು. ಸ್ಥಳೀಯ ಮೀನುಗಾರರ ಹಾಗೂ ಪೊಲೀಸರ ನಡುವೆ ಮಾತಿನ ವಾಗ್ವಾದವೂ ನಡೆಯಿತು.ಡಿವೈಎಸ್ಪಿ ಮಹೇಶ, ಇನ್‌ಸ್ಪೆಕ್ಟರ್ ಗೋಪಿಚಂದನ ಸ್ಥಳದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. ಮಂಗಳೂರಿನ ಖಿಲ್ರಿಯಾ ದೋಣಿ ಮಾಲಿಕರೊಂದಿಗೆ ಮಾತುಕತೆ ನಡೆಸಿ ನಮ್ಮ ಸ್ಥಳದಲ್ಲಿ ಮೀನುಗಾರಿಕೆ ನಡೆಸದಂತೆ ತಾಕೀತು ಮಾಡಿ ದೋಣಿ ಬಿಟ್ಟುಕೊಟ್ಟರು. ಮಲ್ಪೆಯ ಕೃಷ್ಣಪ್ರಸಾದ ದೋಣಿ ಮಾಲೀಕ ಚೇತನ ಅವರು ದರೋಡೆ ಪ್ರಕರಣ ದಾಖಲಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸ್ಥಳೀಯ ಮೀನುಗಾರರು, ಅವರ ದೋಣಿ ಬಿಟ್ಟುಕೊಟ್ಟಿಲ್ಲ. ಗುರುವಾರ ಕಾನೂನು ಬಾಹಿರ ಮೀನುಗಾರಿಕೆ ನಡೆಸುವ ದೋಣಿ ಮಾಲಿಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ಕೊಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.