ಮಂಗಳೂರಿನ ಹೋಟೆಲ್‌ಗೂ ಬಂತು ರೋಬೋ ವೈಟರ್!

KannadaprabhaNewsNetwork |  
Published : Apr 21, 2026, 03:00 AM IST
ಮಂಗಳೂರಿನ ಹೋಟೆಲ್‌ನಲ್ಲಿ ಕಾರ್ಯಾಚರಿಸುತ್ತಿರುವ ರೋಬೋ ವೈಟರ್ | Kannada Prabha

ಸಾರಾಂಶ

ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯ ‘ಪಾಕಶಾಲ’ ಹೆಸರಿನ ಹೋಟೆಲ್‌ನಲ್ಲಿ ರೋಬೋ ವೈಟರ್ (ಸಪ್ಲಯರ್) ಸೇವೆ ಪರಿಚಯಿಸಲಾಗಿದೆ. ಇದು ಕರಾವಳಿ ಕರ್ನಾಟಕದ ಮೊದಲ ರೋಬೋ ವೈಟರ್ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಂಗಳೂರು: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ ಬದಲಾವಣೆಗಳ ಅನುಷ್ಠಾನ ಶೀಘ್ರಗತಿಯಲ್ಲಿ ಆಗುತ್ತಿದೆ. ಅದರಂತೆ ಕರಾವಳಿ ಕರ್ನಾಟಕದಲ್ಲೇ ಮೊದಲು ಎಂಬಂತೆ ಮಂಗಳೂರಿನ ಹೊಟೇಲೊಂದರಲ್ಲಿ ರೋಬೋ ವೈಟರ್ ಕಾರ್ಯಾಚರಿಸುತ್ತಿದೆ. ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯ ‘ಪಾಕಶಾಲ’ ಹೆಸರಿನ ಹೋಟೆಲ್‌ನಲ್ಲಿ ರೋಬೋ ವೈಟರ್ (ಸಪ್ಲಯರ್) ಸೇವೆ ಪರಿಚಯಿಸಲಾಗಿದೆ. ಇದು ಕರಾವಳಿ ಕರ್ನಾಟಕದ ಮೊದಲ ರೋಬೋ ವೈಟರ್ ಆಗಿದ್ದು, ಗ್ರಾಹಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.ಮೂರು ಲಕ್ಷ ರು. ವೆಚ್ಚದ ಜಪಾನ್ ಮೂಲದ ರೋಟೋ ವೈಟರ್ ಸೆನ್ಸಾರ್ ಆಧಾರಿತವಾಗಿ ಕಾರ್ಯಾಚರಿಸುತ್ತದೆ. ಇದರಲ್ಲಿ ನಾಲ್ಕುರ್‍ಯಾಕ್‌ ಗಳಿದ್ದು, ಕಿರಿದಾದ ಚಕ್ರಗಳ ಸಹಾಯದಿಂದ ಚಲಿಸುತ್ತದೆ. ರೋಬೋ ಮುಂಭಾಗದಲ್ಲಿ ಸ್ಕ್ರೀನ್ ಇದ್ದು, ಅದರಲ್ಲಿ ಟೇಬಲ್ ವಿವರ ಇರುತ್ತದೆ. ಹೋಟೆಲ್‌ನಲ್ಲಿನ 35 ಟೇಬಲ್‌ಗಳಿಗೆ ರೂಟ್‌ ಮಾರ್ಕ್, ಟೇಬಲ್‌ ಮಾರ್ಕ್ ಮಾಡಲಾಗಿದೆ. ಅದರಂತೆ ಯಾವ ಟೇಬಲ್‌ಗೆ ಆಹಾರ ಪದಾರ್ಥ ರವಾನೆಯಾಗಬೇಕು ಎಂಬುದನ್ನು ರೋಬೋಗೆ ಕ್ಲಿಕ್ಕಿಸಿದಲ್ಲಿ (ಸಂಖ್ಯೆ ಒತ್ತಿದರೆ) ಆ ಟೇಬಲ್‌ಗೆ ರೋಬೋ ತಿನಿಸನ್ನು ತಲುಪಿಸುತ್ತದೆ. ಇದರಲ್ಲಿ 15ರಿಂದ 20 ಊಟ/ತಿನಿಸುಗಳನ್ನು ಏಕ ಕಾಲದಲ್ಲಿ ಸಾಗಿಸಬಹುದು. ಗ್ರಾಹಕರಿಗೆ ಸಪ್ಲೈ ಮಾಡುವ ಆಹಾರವನ್ನು ರೋಬೋದ ರ್‍ಯಾಕ್‌ನಲ್ಲಿ ಇಟ್ಟು, ಫುಡ್ ಮೋಡ್ ಅಥವಾ ಸೂಪ್ ಮೋಡ್‌ನಲ್ಲಿ ಕ್ಲಿಕ್ಕಿಸಿ ರವಾನಿಸಲಾಗುತ್ತದೆ. ಸೂಪ್‌ (ದ್ರವ ಪದಾರ್ಥ) ಮೋಡ್‌ನಲ್ಲಿ ರೋಬೋ ದ್ರವ ಪದಾರ್ಥ (ಜ್ಯೂಸ್) ಚೆಲ್ಲದಂತೆ ನಿಧಾನವಾಗಿ ಚಲಿಸುತ್ತದೆ. ಫುಡ್‌ ಮೋಡ್‌ನಲ್ಲಿ ಸ್ವಲ್ಪ ವೇಗವಾಗಿ ಚಲಿಸುತ್ತದೆ. ಚಾಲನೆ ವೇಳೆ ಯಾರಾದರೂ ಅಡ್ಡ ಬಂದಲ್ಲಿ ಸ್ವಯಂ ಆಗಿ ಅದು ನಿಲ್ಲುತ್ತದೆ. 3 ಅಡಿ ಅಂತರ ಇದ್ದಲ್ಲಿ ಮಾತ್ರ ಚಾಲನಾ ಪ್ರಕ್ರಿಯೆಯಲ್ಲಿರುತ್ತದೆ. ಗ್ರಾಹಕರಿಗೆ ಆಹಾರ ಸಪ್ಲೈ ಮಾಡಿದ ಬಳಿಕ ನಿಗದಿತ ಜಾಗದಲ್ಲಿ ರೋಬೋ ಬಂದು ನಿಲ್ಲುತ್ತದೆ. ಇದರಲ್ಲಿ ಆಹಾರ ಇರಿಸಲು, ತೆಗೆಯಲು ಜನರ ಅಗತ್ಯ ಇರುತ್ತದೆ.

ದಿನಕ್ಕೆ ನಾಲ್ಕು ಗಂಟೆ ಚಾರ್ಜ್ ಮಾಡಿದರೆ. 10ರಿಂದ 12 ಗಂಟೆ ಕೆಲಸ ಮಾಡುತ್ತದೆ. ಇಲ್ಲಿ ಕಳೆದ ಮೂರು ತಿಂಗಳಿನಿಂದ ರೋಬೋ ವೈಟರ್ ಕಾರ್ಯಾಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಕ್ಲಿನಿಂಗ್ ವ್ಯವಸ್ಥೆಗೂ ರೋಬೋ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೋಟೆಲ್‌ನ ಮೆನೇಜರ್‌ ಪ್ರವೀಣ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಶಾದೇವಿ ಗುಡಗುಂಟಿಗೆ ಗೌರವ ಡಾಕ್ಟರೇಟ್‌ ಪ್ರದಾನ ಇಂದು
ವಿಶ್ವ ಶಾಂತಿ, ಒಳಿತಿಗಾಗಿ ಪಂಚ ಕಲ್ಯಾಣ ಮಹೋತ್ಸವ