ಸರ್ಕಾರದಿಂದ ಒಂದು ರು. ಅನುದಾನ ಬಂದಿಲ್ಲ

KannadaprabhaNewsNetwork |  
Published : Nov 30, 2023, 01:15 AM IST
 ಕೊಟ್ಟೂರಿನ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಕೆ.ನೇಮರಾಜನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಪ್ರತಿ ಗ್ರಾಪಂನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಜನಜಾಗೃತಿ ಮೂಡಿಸಲು ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಸಭೆ ನಡೆಸಬೇಕು. ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಳ್ಳದ ನರೇಗಾ ಯೋಜನೆಯ ಫಲಾನುಭವಿಗಳ ಜಾಬ್ ಕಾರ್ಡ್‌ ರದ್ದು ಪಡಿಸಲಾಗುವುದು ಎಂದು ಹೇಳಿದರಲ್ಲದೇ ಯಾವುದೇ ಕಾರಣಕ್ಕೂ ಗ್ರಾಮಗಳಲ್ಲಿ ಅಸ್ವಚ್ಛತೆ ಎಲ್ಲೂ ಕಂಡು ಬರದಂತೆ ಸಂಬಂಧಿಸಿದ ಅಧಿಕಾರಿಗಳು ಪೂರಕ ಕೆಲಸಗಳನ್ನು ಕೈಗೊಳ್ಳಬೇಕು ಎಂದು ನೇಮರಾಜ ನಾಯ್ಕ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಸರ್ಕಾರದಿಂದ ಅಭಿವೃದ್ಧಿ ಯೋಜನೆಗಳಿಗೆ ಒಂದು ರುಪಾಯಿಯನ್ನು ಸಹ ಪಡೆಯಲು ಇದುವರೆಗೂ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ತೊಂದರೆ ಕ್ಷೇತ್ರದ ಯಾವುದೇ ಗ್ರಾಮಗಳಲ್ಲಿ ಉಂಟಾಗದಿರಲು ದಾನಿಗಳ ಸಹಕಾರ ಪಡದು ಬೋರ್‌ವೆಲ್ ಕೊರೆಸಿ ಜನರಿಗೆ ನೀರು ಪೂರೈಸಲು ಯೋಜನೆ ರೂಪಿಸಿರುವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜನಾಯ್ಕ ಹೇಳಿದರು.

ಮಂಗಳವಾರ ಸಂಜೆ ಇಲ್ಲಿನ ತಾಲೂಕು ಕಾರ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ನಡೆದ ಕೊಟ್ಟೂರು ತಾಲೂಕು ಟಾಸ್ಕ್‌ಫೋರ್ಸ್ ಸಭೆಯ ನೇತೃತ್ವ ವಹಿಸಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಅನುದಾನ ಬಂದಿಲ್ಲ ಎಂಬ ಕಾರಣಕ್ಕೆ ಕುಡಿಯುವ ನೀರು ಯೋಜನೆ ಜಾರಿಗೊಳಿಸಲು ಅಧಿಕಾರಿಗಳು ವಿಳಂಬ ಮಾಡಿದರೆ ಸಹಿಸುವುದಿಲ್ಲ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಎದುರಾದರೂ ಕೂಡಲೇ ಅದರ ವಿವರ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರಲ್ಲದೇ, ದಾನಿಗಳ ಸಹಾಯದಿಂದ ತೊಂದರೆಗೀಡಾದ ಗ್ರಾಮಗಳ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಜೆಜೆಎಂ ಯೋಜನೆಗೆಂದು ಪ್ರತಿ ಗ್ರಾಪಂಗೆ ಅನುದಾನ ಬಿಡುಗಡೆಗೊಂಡಿದ್ದು, ಯಾವುದೇ ಕಾರಣಕ್ಕೂ ಈ ಅನುದಾನ ಅನ್ಯ ಕಾರ್ಯಕ್ಕೆ ಬಳಕೆಯಾಗಬಾರದು ಅಥವಾ ದುರುಪಯೋಗವಾಗದಂತೆ ಪಿಡಿಒ ಗಮನ ಹರಿಸಬೇಕು. ತುರ್ತು ನೀರಿನ ಸಮಸ್ಯೆ ನೀಗಿಸಲು ಗಮನ ಹರಿಸಬೇಕು ಎಂದು ಹೇಳಿದರು.

ಪ್ರತಿ ಗ್ರಾಪಂನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಜನಜಾಗೃತಿ ಮೂಡಿಸಲು ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಸಭೆ ನಡೆಸಬೇಕು. ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಳ್ಳದ ನರೇಗಾ ಯೋಜನೆಯ ಫಲಾನುಭವಿಗಳ ಜಾಬ್ ಕಾರ್ಡ್‌ ರದ್ದು ಪಡಿಸಲಾಗುವುದು ಎಂದು ಹೇಳಿದರಲ್ಲದೇ ಯಾವುದೇ ಕಾರಣಕ್ಕೂ ಗ್ರಾಮಗಳಲ್ಲಿ ಅಸ್ವಚ್ಛತೆ ಎಲ್ಲೂ ಕಂಡು ಬರದಂತೆ ಸಂಬಂಧಿಸಿದ ಅಧಿಕಾರಿಗಳು ಪೂರಕ ಕೆಲಸಗಳನ್ನು ಕೈಗೊಳ್ಳಬೇಕು ಎಂದು ನೇಮರಾಜ ನಾಯ್ಕ ಹೇಳಿದರು.

ಕೊಟ್ಟೂರು ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ೩೨ ಸಾವಿರ ಹೆಕ್ಟೇರ್ ಪ್ರದೇಶದ ರೈತರ ಬೆಳೆಗಳು ನಷ್ಟಕ್ಕೆ ಒಳಗಾಗಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನೀಲ್ ಕುಮಾರ್ ಮಾಹಿತಿ ನೀಡಿದರು. ರೈತರಿಗೆ ಬೆಳೆ ವಿಮೆ ಮಾಡಿಸಲು ಸತತವಾಗಿ ಜಾಗೃತಿ ಮೂಡಿಸುತ್ತಿದ್ದೇವೆ. ಈ ಸಲ ತಾಲೂಕಿನ ಬೆಳೆ ವಿಮೆಗೆಂದು ₹೨ ಕೋಟಿ ಬಂದಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ ಎಂದು ಅವರು ವಿವರಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಮೇಶ, ಈರುಳ್ಳಿ, ಟೊಮೆಟೋ ಮತ್ತಿತರ ಬೆಳೆಗಳು ಬಹಳಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಎಂದರು.

ತಹಸೀಲ್ದಾರ್‌ ಜಿ.ಕೆ. ಅಮರೇಶ, ತಾಪಂ ಇಒ ರವಿಕುಮಾರ ಇತರ ಇಲಾಖೆ ಅಧಿಕಾರಿಗಳು, ಪಿಡಿಒಗಳು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ