ವಿವಿಧ ಕಾಡಂಚಿನ ಪ್ರದೇಶದಲ್ಲಿ 15 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಪ್ರಕ್ರಿಯೆಗೆ ಎ.ಎಸ್.ಪೊನ್ನಣ್ಣ ಚಾಲನೆ

KannadaprabhaNewsNetwork |  
Published : Feb 27, 2025, 12:31 AM ISTUpdated : Feb 27, 2025, 01:43 PM IST
ಚಿತ್ರ :  25ಎಂಡಿಕೆ3 : 15 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಪ್ರಕ್ರಿಯೆಗೆ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.  | Kannada Prabha

ಸಾರಾಂಶ

ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ 22 ಕೋಟಿ ರು. ಬಿಡುಗಡೆಗೆ ಮಂಜೂರಾತಿ ನೀಡಿದೆ.

 ಮಡಿಕೇರಿ : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ 22 ಕೋಟಿ ರು. ಬಿಡುಗಡೆಗೆ ಮಂಜೂರಾತಿ ನೀಡಿದ್ದು, ಆ ನಿಟ್ಟಿನಲ್ಲಿ ವಿವಿಧ ಪ್ರದೇಶದ 15 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಂಗಳವಾರ ಚಾಲನೆ ನೀಡಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಕುಟ್ಟಂದಿಯಲ್ಲಿ 3 ಕಿ.ಮೀ.ಉದ್ದ ಹಾಗೂ ನಾಗರಹೊಳೆ ಆಭಯಾರಣ್ಯ ವ್ಯಾಪ್ತಿಯ 11 ಕಿ.ಮೀ.ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಕೊಡಗು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷವು ಹಲವು ವರ್ಷಗಳಿಂದ ಇದೆ. ಇದರಿಂದ ಸ್ಥಳೀಯರು ತುಂಬಾ ತೊಂದರೆಯಾಗಿದೆ. ಶಾಶ್ವತವಾಗಿ ವನ್ಯಪ್ರಾಣಿ ಹಾವಳಿ ನಿಯಂತ್ರಿಸಲು ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ನಿರ್ಮಾಣ ಹಾಗೂ ಆನೆ ಕಂದಕ ನಿರ್ಮಾಣಕ್ಕೆ ಮುಂದಾಗಲಾಗಿದೆ ಎಂದರು.

ವನ್ಯಪ್ರಾಣಿ ಹಾವಳಿ ನಿಯಂತ್ರಿಸುವಲ್ಲಿ ಅಗತ್ಯ ಕ್ರಮಕೈಗೊಂಡು ಮಾನವ ಪ್ರಾಣ ಉಳಿಸುವುದು, ಬೆಳೆ ಹಾನಿಯನ್ನು ತಡೆಯುವುದು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಾಗ, 22 ಕೋಟಿ ರು. ವಿಶೇಷ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ವನ್ಯಪ್ರಾಣಿಗಳ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು ವನ್ಯಪ್ರಾಣಿಗಳ ಹಾವಳಿ ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವನ್ಯಪ್ರಾಣಿಗಳ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರ ವಿಶ್ವಾಸ ಪಡೆದು, ಕೃಷಿಕರು, ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ಮಂಡಳಿಯವರು ಹೀಗೆ ಎಲ್ಲರ ಜೊತೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಎ.ಎಸ್.ಪೊನ್ನಣ್ಣ ವಿವರಿಸಿದರು.

ಈ ಸಂದರ್ಭ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಮಾತನಾಡಿ, ವನ್ಯಜೀವಿ ಹಾಗೂ ಮಾನವ ಸಂಘರ್ಷವನ್ನು ತಡೆದು ಶಾಶ್ವತವಾಗಿ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ ಎಂದರು.

ಶಾಸಕರ ಪ್ರಯತ್ನದಿಂದ 21 ಕೋಟಿ ರು. ವಿಶೇಷ ಅನುದಾನ ಬಿಡುಗಡೆಯಾಗಿದೆ. ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಲು ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸಲಾಗುತ್ತದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಮಾತನಾಡಿ ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ತಪ್ಪಿಸುವಲ್ಲಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಅಗತ್ಯವಿರುವ ಕಡೆ ಸೋಲಾರ್ ಬೇಲಿ ನಿರ್ಮಾಣ ಮಾಡಲಾಗುತ್ತದೆ ಎಂದರು.

ಮತ್ತೊಬ್ಬ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಕಾಡಂಚಿನ ಸುಮಾರು 182 ಗ್ರಾಮಗಳು ಬರಲಿದ್ದು, ವನ್ಯಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿದೆ. ವನ್ಯಪ್ರಾಣಿಗಳ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದ್ದು, ಆ ನಿಟ್ಟಿನಲ್ಲಿ ಸ್ಥಳೀಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಬಿ.ಶೆಟ್ಟಿಗೇರಿ ಗ್ರಾ.ಪಂ.ಅಧ್ಯಕ್ಷರಾದ ಬೋಪಣ್ಣ ಮಾತನಾಡಿ ಕಾಡಾನೆಗಳಿಗೆ ಕಾಲರ್ ಅಳವಡಿಸುವಂತಾಗಬೇಕು ಎಂದು ಕೋರಿದರು. ವಲಯ ಅರಣ್ಯ ಅಧಿಕಾರಿಗಳಾದ ಕಾರ್ಯಪ್ಪ, ಗೋಪಾಲ, ಶಿವರಾಮ್ ಇತರರು ಇದ್ದರು.

ಬಳಿಕ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕುಂದ ಗ್ರಾಮಕ್ಕೆ ತೆರಳಿ ವನ್ಯಪ್ರಾಣಿಗಳ ನಿಯಂತ್ರಣ ಸಂಬಂಧ ಸ್ಥಳೀಯರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಅದರ ಕಾರ್ಯನಿರ್ವಹಣೆ ಸಂಬಂಧ ಪ್ರಾತ್ಯಕ್ಷಿಕೆಯನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ವನ್ಯಪ್ರಾಣಿಗಳ ಹಾವಳಿ ಹೆಚ್ಚು ಇರುವ ಪ್ರದೇಶಗಳಲ್ಲಿ ಸ್ಥಳೀಯರ ಜೊತೆ ಚರ್ಚಿಸಿ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಕಾಡಂಚಿನ ಗ್ರಾಮಗಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಅವರ ಅಭಿಪ್ರಾಯ ಪಡೆದು ವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಲಾಗಿದೆ ಎಂದರು.

ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣ ಹೀಗೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಹುಲಿ ಹಾವಳಿಯನ್ನು ಸಹ ನಿಯಂತ್ರಿಸಲು ವೈಜ್ಞಾನಿಕ ಕ್ರಮ ಅನುಸರಿಸಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿಯೂ ಸಹ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.

ಈ ಸಂದರ್ಭ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ಸಾರ್ವಜನಿಕರ ಅಭಿಪ್ರಾಯ ಪಡೆದು ವನ್ಯಪ್ರಾಣಿ ನಿಯಂತ್ರಿಸಲು ಪ್ರಯತ್ನಿಸಲಾಗಿದೆ ಎಂದರು.

ವನ್ಯಪ್ರಾಣಿಗಳ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆಯಿಂದ 17 ತಂಡಗಳನ್ನು ರಚಿಸಲಾಗಿದೆ. ವಿವಿಧ ಕಡೆಗಳಲ್ಲಿ ಈ ತಂಡಗಳು ಸಂಚರಿಸಿ ಸ್ಥಳೀಯರಿಗೆ ಮಾಹಿತಿ ನೀಡಲಿದ್ದಾರೆ. ಹಾಗೆಯೇ ವನ್ಯಪ್ರಾಣಿಗಳ ಚಲನವಲನ ಸಂಬಂಧಿಸಿದಂತೆ ಸುಮಾರು 16,800 ಮಂದಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಸುಗುಣ ಸೋಮಯ್ಯ ಅವರು ಒತ್ತುವರಿ ಜಾಗವನ್ನು ತೆರವುಗೊಳಿಸಿದ್ದಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ಭೂಮಿ ಒತ್ತುವರಿ ಮಾಡಿರುವವರು ದೊಡ್ಡ ಮನಸ್ಸು ಮಾಡಬೇಕು ಎಂದು ಪ್ರತಿಪಾದಿಸಿದರು.

ಬಳಿಕ ತಿತಿಮತಿಯಲ್ಲಿ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಗನ್ನಾಥ್, ಭಾಸ್ಕರ ಹಾಗೂ ಆರ್‌ಎಫ್‌ಒಗಳೊಂದಿಗೆ ಚರ್ಚಿಸಿದರು.

ಹಾಗೆಯೇ ಮಡಿಕೇರಿ ವಿಭಾಗದ ದುಬಾರೆ ಮೀಸಲು ಅರಣ್ಯದ ಸರಹದ್ದಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಪ್ರಕ್ರಿಯೆಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

PREV

Recommended Stories

ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು
ತೊಗರಿ ರೈತನಿಗೆ ಗದರಿದ ಖರ್ಗೆ ವಿರುದ್ಧ ವಿಪಕ್ಷ ಗರಂ