ಕೆ.ಆರ್. ನಗರ ಪುರಸಭೆ: 35 ಲಕ್ಷ ಉಳಿತಾಯ ಬಜೆಟ್

KannadaprabhaNewsNetwork | Published : Mar 29, 2025 12:34 AM

ಸಾರಾಂಶ

ಪುರಸಭೆ ಸ್ವಂತ ನಿಧಿಯ ಅಂದಾಜು ಆದಾಯ ಆಸ್ತಿ ತೆರಿಗೆಯಿಂದ 4.21 ಕೋಟಿ ರೂ., ನೀರಿನ ತೆರಿಗೆ 92 ಲಕ್ಷ ರೂ

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಪಟ್ಟಣದ ಪುರಸಭೆಯ 2025-26ನೇ ಸಾಲಿಗೆ 26.16 ಕೋಟಿ ರೂ. ಗಾತ್ರದ ಮತ್ತು 35 ಲಕ್ಷದ ಉಳಿತಾಯ ಬಜೆಟನ್ನು ಅಧ್ಯಕ್ಷ ಡಿ. ಶಿವುನಾಯಕ್ ಮಂಡಿಸಿದರು.

ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ ಸಭೆಯಲ್ಲಿ ಆಯ-ವ್ಯಯ ಮಂಡಿಸಿದ ಅವರು 2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ವಿವಿಧ ಬಾಬ್ತುಗಳಡಿ 18.10 ಕೋಟಿ ರೂ. ಪುರಸಭೆ ಸ್ವಂತ ನಿಧಿಯಿಂದ 8.06 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.

ಪುರಸಭೆ ಸ್ವಂತ ನಿಧಿಯ ಅಂದಾಜು ಆದಾಯ ಆಸ್ತಿ ತೆರಿಗೆಯಿಂದ 4.21 ಕೋಟಿ ರೂ., ನೀರಿನ ತೆರಿಗೆ 92 ಲಕ್ಷ ರೂ., ಪುರಸಭೆ ಮತ್ತು ಐಡಿಎಸ್‌ಎಂಟಿ ಮಳಿಗೆಗಳಿಂದ ಬಾಡಿಗೆ 50 ಲಕ್ಷ ರೂ., ಉದ್ದಿಮೆ ಪರವಾನಗಿ 20 ಲಕ್ಷ ರೂ., ಇತರ ಮೂಲಗಳಾದ ಕಟ್ಟಡ ಪರವಾನಗಿ, ಮೇಲ್ವಿಚಾರಣೆ, ಖಾತೆ ಬದಲಾವಣೆಗಳಿಂದ 2.23 ಕೋಟಿ ರೂ. ಸೇರಿದಂತೆ ಒಟ್ಟು 8.06 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

2025-2026ನೇ ಸಾಲಿನಲ್ಲಿ ಸರ್ಕಾರದಿಂದ ಬರಬಹುದಾದಂತಹ ಅನುದಾನ 15ನೇ ಹಣಕಾಸು ಅನುದಾನ 1.81 ಕೋಟಿ ರೂ., ಎಸ್‌ಎಫ್‌ಸಿ ಅನುದಾನ 28 ಲಕ್ಷ ರೂ., ಎಸ್‌.ಎಫ್‌.ಸಿ ವಿದ್ಯುಚ್ಛಕ್ತಿ ಅನುದಾನ 1.77 ಕೋಟಿ ರೂ., ಎಸ್‌ಎಫ್‌ಸಿ ವೇತನಾನುದಾನ 3.21 ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 10 ಕೋಟಿ ರೂ., ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ 3 ಲಕ್ಷ ರೂ. ಹಾಗೂ ಸ್ವಚ್ಚ ಭಾರತ್ ಮಿಷನ್ ಅನುದಾನ ಒಂದು ಕೋಟಿ ರೂ. ಸೇರಿದಂತೆ ಒಟ್ಟು 18.10 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.

2025-26ನೇ ಸಾಲಿಗೆ ಪುರಸಭೆ ಸ್ವಂತ ನಿಧಿಯಿಂದ ಭರಿಸಬೇಕಾದ ಅಂದಾಜು ವೆಚ್ಚ- ಪುರಸಭೆ ಕಚೇರಿಗೆ ನಿರ್ವಹಣೆಯ ವೆಚ್ಚಗಳು 75 ಲಕ್ಷ ರೂ., ಕಟ್ಟಡ, ರಸ್ತೆ, ಚರಂಡಿ, ಕಲ್ವರ್ಟ್‌ಗಳು, ಮ್ಯಾನ್‌ ಹೋಲ್‌ ಗಳ ದುರಸ್ತಿ ಹಾಗೂ ನಿರ್ವಹಣೆಗೆ 70 ಲಕ್ಷ ರೂ., ಬೀದಿ ದೀಪ ನಿರ್ವಹಣೆಗೆ 36 ಲಕ್ಷ ರೂ., ಪುರಸಭೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ 10 ಲಕ್ಷ ರೂ., ವಾಹನಗಳ ಇಂಧನ ಮತ್ತು ದುರಸ್ತಿ ಹಾಗೂ ನಿರ್ವಹಣೆ 44.50 ಲಕ್ಷ ರೂ., ಹೊರಗುತ್ತಿಗೆ ನೌಕರರು ಹಾಗೂ ನೇರಪಾವತಿ ನೌಕರರ ವೇತನ 60 ಲಕ್ಷ ರೂ., ಪೌರಕಾರ್ಮಿಕರ ಆರೋಗ್ಯ ತಪಾಷಣೆಗೆ 2 ಲಕ್ಷ ರೂ., ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ 10 ಲಕ್ಷ ರೂ., ಪೌರಕಾರ್ಮಿಕರ ವಿಮೆ ಮಾಡಿಸಲು 4 ಲಕ್ಷ ರೂ., ಮಾನ್ಯುಯಲ್ ಸ್ಕ್ಯಾವೆಂಜರ್ ಮತ್ತು ಪೌರಕಾರ್ಮಿಕರ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ನೀರು ಸರಬರಾಜು ವೆಚ್ಚಗಳು-ನೀರು ಸರಬರಾಜು ವಿಭಾಗದ ದುರಸ್ತಿ ಹಾಗೂ ನಿರ್ವಹಣೆಗೆ 30 ಲಕ್ಷ, ನೀರು ಸರಬರಾಜು ವಿಭಾಗಕ್ಕೆ ಬ್ಲೀಚಿಂಗ್ ಪೌಡರ್ ಹಾಗೂ ಅಲಮ್ ಸರಬರಾಜು ಮಾಡಲು 8 ಲಕ್ಷ ರೂ., ನೀರು ಸರಬರಾಜು ವಿಭಾಗಕ್ಕೆ ಪೈಪುಗಳ ಸರಬರಾಜು 10 ಲಕ್ಷ ರೂ., ಹೊರಗುತ್ತಿಗೆ ನೌಕರರ ವೇತನ ಪಾವತಿಗೆ 50 ಲಕ್ಷ ರೂ., ಯುಜಿಡಿ ನಿರ್ವಹಣೆಗೆ 8 ಲಕ್ಷ ರೂ. ಹಾಗೂ ಓವರ್ ಹೆಡ್ ಟ್ಯಾಂಕ್ ಸ್ವಚ್ಚಗೊಳಿಸುವ ಶುಲ್ಕಗಳು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಕಚೇರಿ ಯಂತ್ರೋಪಕರಣ ಹಾಗೂ ಕಂಪ್ಯೂಟರ್ ಖರೀದಿ ಮತ್ತು ನಿರ್ವಹಣೆಗೆ 18 ಲಕ್ಷ, ರಸ್ತೆೆಗಳ ನಿರ್ಮಾಣಕ್ಕೆ 6 ಕೋಟಿ, ಚರಂಡಿಗಳ ನಿರ್ಮಾಣಕ್ಕೆ 4 ಕೋಟಿ, ಮಳೆ ನೀರು ಚರಂಡಿ ನಿರ್ಮಾಣಕ್ಕೆ 18 ಲಕ್ಷ, ಸ್ಮಶಾನ ಅಭಿವೃದ್ಧಿಗೆ 25 ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ ಒಂದು ಕೋಟಿ, ನೀರು ಸರಬರಾಜು ವಿಭಾಗಕ್ಕೆ 50 ಲಕ್ಷ, ಯುಜಿಡಿ ಸಂಪರ್ಕ ಕಲ್ಪಿಸಲು 20 ಲಕ್ಷ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ 1.20 ಕೋಟಿ, ಉದ್ಯಾನವನಗಳ ಅಭಿವೃದ್ಧಿಗೆ ಒಂದು ಕೋಟಿ, ಅಂಗವಿಕಲರ ಕೃತಕ ಅಂಗಾಂಗಗಳ ಜೋಡಣೆಗೆ 3 ಲಕ್ಷ, ಪಟ್ಟಣ ಮತ್ತು ತಾಲೂಕಿನ ವಿದ್ಯಾರ್ಥಿಗಳು ಹಾಗೂ ಯುವಕರ ಸ್ಫರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಹಾಗೂ ಓದುಗರ ಹಿತ ದೃಷ್ಟಿಯಿಂದ ಗ್ರಂಥಾಲಯ ನವೀಕರಣ 10 ಲಕ್ಷ, ಕೇಂದ್ರ ಸರ್ಕಾರದ ಪುರಸ್ಕೃತ ಅಮೃತ್ ಮಿತ್ರ ಯೋಜನೆಯಡಿ ಮಹಿಳಾ ಸ್ವ-ಸಹಾಯ ಗುಂಪಿನಿಂದ ಪಟ್ಟಣದ ಮಹಾತ್ಮಾಗಾಂಧಿ ಉದ್ಯಾನವನ ನಿರ್ವಹಣೆಗೆ 9 ಲಕ್ಷ, ಡೇ- ನಲ್ಮ್ ವತಿಯಿಂದ ರಚಿಸಲಾಗಿರುವ ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಬಾಕಿ ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ ಹಾಗೂ ಇತರೆ ವಸೂಲಾತಿಯಾದ ಮೊತ್ತಕ್ಕೆ ಶೇ. 5ರಂತೆ ಅಂದಾಜು 20 ಲಕ್ಷ ರೂ ಅಂದಾಜಿಸಲಾಗಿದೆ.

ಹೊಸ ಯೋಜನೆಗಳು

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಭಾರತದ ಸಂವಿಧಾನದ ಪೀಠಿಕೆ ಅಳವಡಿಸುವುದು, ಪುರಸಭೆ ವೃತ್ತ ಮತ್ತು ಗರುಡಗಂಭದ ವೃತ್ತಗಳ ಸೌಂದರೀಕರಣ, ಪುರಸಭೆಯ ಡಾ. ರಾಜಕುಮಾರ್ ಸಾಂಸ್ಕೃತಿಕ ಬಾನಂಗಳದ ಮೈದಾನ ಅಭಿವೃದ್ಧಿ, ಪುರಸಭೆ ವ್ಯಾಪ್ತಿಯ ಉದ್ಯಾನವನ ಅಭಿವೃದ್ಧಿ, ಪುರಸಭೆ ವೃತ್ತದ ಬಳಿ ಕಾವೇರಿ ಮಾತೆಯ ಪುತ್ಥಳಿ ನಿರ್ಮಾಣ, ಪಟ್ಟಣದ ಪ್ರಮುಖ ರಸ್ತೆಗಳಿಗೆ ಮಹನೀಯರ ಹೆಸರು ನಾಮಕರಣ ಮಾಡುವುದು, ಪುರಸಭೆ ವ್ಯಾಪ್ತಿಯಲ್ಲಿ ಹಾಲಿ ಇರುವ ವಿದ್ಯುತ್ ಬೀದಿ ದೀಪ ಬದಲಾಯಿಸಿ ಸಿಸಿಎಂಎಸ್ ಯೋಜನೆಯಡಿ ಇಂಧನ ಕ್ಷಮತೆಯ ಎಲ್‌ಇಡಿ ಬೀದಿ ದೀಪ ಅಳವಡಿಸುವುದು. ಅಮೃತ್- 02 ಯೋಜನೆಯಡಿಯಲ್ಲಿ 30 ಕೋಟಿಗಳ ನೀರು ಸರಬರಾಜು ಮೇಲ್ದರ್ಜೆಗೇರಿಸುವ ಕಾಮಗಾರಿ ಹಾಗೂ ಎನ್‌.ಜಿ.ಟಿ ಯೋಜನೆಯಡಿ 20 ಕೋಟಿ ಒಳಚರಂಡಿ ಸಂಪರ್ಕ ಮತ್ತು ಮೇಲ್ದರ್ಜೆಗೇರಿಸುವ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿ ಮತ್ತು ವಿಶೇಷ ಅನುದಾನದ ಯೋಜನೆಗಳು-ಪಟ್ಟಣದ ವಿವಿಧ ವಾರ್ಡುಗಳ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳು, ಪಟ್ಟಣದ ವ್ಯಾಪ್ತಿಯಲ್ಲಿ ಫುಡ್ ಕೋರ್ಟ್ ನಿರ್ಮಾಣ, ಆಟೋ ನಿಲ್ದಾಣಗಳ ಆಧುನೀಕರಣ ಕಾಮಗಾರಿ, ಬೀದಿ ಬದಿ ಮಾರಾಟ ಮಾಡುವ ಹಣ್ಣು, ತರಕಾರಿ, ಸೊಪ್ಪು, ಹೂವು ಮತ್ತು ಇತರೆ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮೇಲ್ಛಾವಣಿ ನಿರ್ಮಾಣ ಹಾಗೂ ಪಟ್ಟಣದ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

2025-26ನೇ ಸಾಲಿನ ಆಯ-ವ್ಯಯದ ಅಂದಾಜು ಪಟ್ಟಿಯನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಿದ್ದು, ಸಭೆಯಲ್ಲಿ ಹಾಜರಿರುವ ಸರ್ವ ಸದಸ್ಯರು ಪುರಸಭೆ ವ್ಯಾಪ್ತಿಯ 23 ವಾರ್ಡುಗಳ ಅಭಿವೃದ್ಧಿಗಾಗಿ ಅನುಮೋದನೆ ನೀಡಬೇಕೆಂದು ಅಧ್ಯಕ್ಷರು ಕೋರಿದರು.

ಉಪಾಧ್ಯಕ್ಷೆ ವಸಂತಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ಶಂಕರ್, ಸದಸ್ಯರಾದ ಕೋಳಿಪ್ರಕಾಶ್, ಸೈಯದ್‌ ಸಿದ್ದಿಕ್, ಉಮೇಶ್, ಕೆ.ಎಲ್. ಜಗದೀಶ್, ನಟರಾಜು, ಬಿ.ಎಸ್. ತೋಂಟದಾರ್ಯ, ಕೆ.ಪಿ. ಪ್ರಭುಶಂಕರ್, ವೀಣಾ ವೃಷಭೇಂದ್ರ, ಮಂಜುಳಾ ಚಿಕ್ಕವೀರು, ಜಾವೀದ್‌ ಪಾಷ, ಕೆ.ಎಸ್. ಶಂಕರ್, ಸೌಮ್ಯಾ ಲೋಕೇಶ್, ಶ್ರುತಿ ಪುಟ್ಟರಾಜು, ಪಲ್ಲವಿ ಆನಂದ್, ಸರೋಜ ಮಹದೇವ್, ವಹೀದಾಬಾನು, ಕೆ.ಜಿ. ಸುಬ್ರಹ್ಮಣ್ಯ, ಮುಖ್ಯಾಧಿಕಾರಿ ಬಿ.ವಿ. ವೆಂಕಟೇಶ್, ವ್ಯವಸ್ಥಾಪಕಿ ಸುಧಾರಾಣಿ, ಕಂದಾಯಾಧಿಕಾರಿ ಜಿ.ಎಸ್. ರಮೇಶ್, ಆರೋಗ್ಯ ನಿರೀಕ್ಷಕ ಎಸ್.ಪಿ. ರಾಜೇಂದ್ರಕುಮಾರ್, ಎಚ್.ಎಸ್. ಲೋಕೇಶ್ ಇದ್ದರು.

Share this article