ಹೊಂಗೆ ಮರದ ಮೆಟ್ಟಿಲುಗಳಲ್ಲಿ ತೂಗು ತೊಟ್ಟಿಲ ಪಾಠಶಾಲೆ....!

KannadaprabhaNewsNetwork |  
Published : Sep 05, 2025, 01:01 AM IST
ಪಾಠಶಾಲೆ....! | Kannada Prabha

ಸಾರಾಂಶ

ಮುಳ್ಳೂರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ಸತೀಶ್‌ ಮಕ್ಕಳಿಗಾಗಿ ವಿಶೇಷ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿಈ ಶಿಕ್ಷಕನಿಗೆ ರಜೆಯೆ ಇಲ್ಲ... ತಿಳಿಯದ ಕೆಲಸ ಇಲ್ಲ.. ಸಮಯದ ಪರಿವೇ ಇಲ್ಲ...ತಮಗೆ ಸಮಯವೇ ಸಿಗುವುದಿಲ್ಲ ಎನ್ನುವ ಶಿಕ್ಷಕರಿಗೆ ಇವರು ಮಾದರಿ...ಬೇಸಿಗೆ ರಜೆಯಲ್ಲಿ ತೂಗು ತೊಟ್ಟಿಲ ಪಾಠಶಾಲೆ... ಮಳೆ ರಜೆಯಲ್ಲಿ ರೋಚಕ ಭಯಾನಕ ಗುಹೆ...!ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಮುಳ್ಳೂರಿನ ಕಿರಿಯ ಪ್ರಾಥಮಿಕ ಶಾಲೆ ಕೆಲಸ ಮಾಡುತ್ತಿರುವ ಶಿಕ್ಷಕ ಸಿ.ಎಸ್. ಸತೀಶ್, ಮಕ್ಕಳಿಗಾಗಿ ವಿಶೇಷ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ.ಈ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ರಸ್ತೆಯೆ ಸರಿಯಿಲ್ಲ. ಹೇಗೋ ಹರಸಾಹಸಪಟ್ಟು ಈ ಶಾಲೆಯ ಆವರಣ ಪ್ರವೇಶಿಸಿದರೆ ಪಟ್ಟ ಆಯಾಸವೆಲ್ಲ ಮರೆತು ಯಾವುದೋ ಅಚ್ಚರಿಯ ಲೋಕಕ್ಕೆ ಪ್ರವೇಶಿಸಿದಂತಾಗುತ್ತದೆ. ಶಿಕ್ಷಣದ ಜೊತೆಗೆ ರೋಚಕ ಅನುಭವಗಳನ್ನು ನೀಡುವ ಈ ಶಾಲೆ ಕಲಿಕೆ ಸಾಹಸ ಸೃಜನಶೀಲತೆ ಪ್ರಕೃತಿ ಪ್ರೇಮವನ್ನು ಮೇಳೈಸಿದ ಹೊಸ ಅನುಭವವನ್ನು ನೀಡುತ್ತದೆ.ಈ ಹಿಂದೆ ಜಿಪ್ ಲೈನ್, ರೋಪ್ ವಾಕ್, ಸ್ವಿಮ್ಮಿಂಗ್ ಪೂಲ್, ಮೃಗಾಲಯ ನಿರ್ಮಿಸಿ ಗಮನ ಸೆಳೆದಿದ್ದ ಮುಳ್ಳೂರಿನ ಈ ಸ್ಥಳೀಯ ಸರ್ಕಾರಿ ಶಾಲೆ ಇದೀಗ ಮತ್ತೆ ಎಲ್ಲರ ಗಮನ ತನ್ನತ್ತ ಸೆಳೆದಿದೆ. ಇದು ಕೇವಲ ಪಾಠ ಕಲಿಸುವ ಸ್ಥಳವಲ್ಲ, ಮಕ್ಕಳ ಸಾಹಸ ಮನೋಭಾವವನ್ನು ಉತ್ತೇಜಿಸುವ ಭಯಾನಕ ಗುಹೆ ಹಾಗೂ ಹೊಂಗೆ ಮರದ ಮೇಲಿರುವ 20 ಅಡಿ ಎತ್ತರದ ತೂಗು ತೊಟ್ಟಿಲ ಪಾಠಶಾಲೆ ಈಗ ವಿದ್ಯಾರ್ಥಿಗಳ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ.ವಿಶಿಷ್ಟ ಆಕರ್ಷಣೆಗಳನ್ನು ನಿರ್ಮಿಸಿದ್ದಾರೆ:ಬೇಸಿಗೆ ಮತ್ತು ಮಳೆ ರಜೆಯ ಸಮಯದಲ್ಲಿ, ಶಾಲೆಯ ಮುಖ್ಯ ಶಿಕ್ಷಕ ಸತೀಶ ಸಿ ಎಸ್, ತಮ್ಮದೇ ಕೈಯಿಂದ ಸುಮಾರು ಎಪ್ಪತ್ತು ಸಾವಿರ ವೆಚ್ಚದಲ್ಲಿ ತಾವೇ ಸ್ವತಃ ಈ ವಿಶಿಷ್ಟ ಆಕರ್ಷಣೆಗಳನ್ನು ನಿರ್ಮಿಸಿದ್ದಾರೆ. ಇಪ್ಪತ್ತು ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ಈ ತೂಗು ತೊಟ್ಟಿಲು ಇಪ್ಪತ್ತು ಅಡಿ ಉದ್ದ ಹತ್ತು ಅಡಿ ಅಗಲವಾಗಿದ್ದು, ಏಕಕಾಲದಲ್ಲಿ ಮೂವತ್ತು ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಹೊಂದಿದೆ.ಶಾಲಾ ಆವರಣ ಪ್ರವೇಶಿಸಿದಂತೆ ನಮಗೆ ಭಯಾನಕ ಗುಹೆಯೊಂದು ಎದುರಾಗುತ್ತದೆ. ಹೆದರಿಕೆಯಿಂದಲೇ ಒಳಗೆ ಹೊಕ್ಕರೆ ಬೆಳಕು–ನೆರಳು, ಬಾವಲಿಗಳು ಜೇಡರ ಬಲೆಗಳು ಅಸ್ಥಿ ಪಂಜರಗಳು ಸ್ಮಾರಕಗಳು ಇತಿಹಾಸದ ಪಳೆಯುಳಿಕೆಗಳು ಮಕ್ಕಳಿಗೆ ಸಾಹಸದ ರೋಮಾಂಚನ ನೀಡುತ್ತವೆ. ಗುಹೆಯು ಕೊನೆಯಾಗುತ್ತಿದಂತೆ ಆಕಾಶಕ್ಕೆರುವಂತೆ ಮೆಟ್ಟಿಲುಗಳು ಗೋಚರಿಸುತ್ತದೆ. ಒಂದೊಂದೇ ಮೆಟ್ಟಿಲೇರುತ್ತಾ ಹೋದಂತೆ ಸುಮಾರು ಇಪ್ಪತ್ತು ಅಡಿ ಎತ್ತರದಲ್ಲಿ, ಮಕ್ಕಳ ಕಣ್ಣು ಮರದ ಮೇಲಿರುವ ತೂಗು ತೊಟ್ಟಿಲ ಪಾಠಶಾಲೆ ಕಡೆ ತಿರುಗುತ್ತದೆ, ಅಲ್ಲಿ ಗಾಳಿ ತಟ್ಟುವ ಶಬ್ದದ ನಡುವೆ ಪ್ರಕೃತಿಯ ಮಡಿಲಲ್ಲೇ ಪುಟ್ಟ ಪುಟ್ಟ ಮಕ್ಕಳು ತಮ್ಮ ನೆಚ್ಚಿನ ಶಿಕ್ಷಕರನ್ನು ಸುತ್ತುವರೆದು ಪ್ರಾಣಿ ಪಕ್ಷಿಗಳ ಇಂಚರದೊಂದಿಗೆ ಪ್ರಕೃತಿಯ ಮಡಿಲಲ್ಲೇ ಪಾಠ ಕಲಿಯುವ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿಯು ವಿವಿಧ ಕೀಟಗಳ ಪಕ್ಷಿಗಳ ಗೂಡುಗಳು ಹೂವುಗಳು ತೂಗು ತೊಟ್ಟಿಲ ರಮ್ಯತೆಯನ್ನು ಹೆಚ್ಚಿಸಿದೆ.ಕಲಿಕೆಗೆ ಸಹಾಯಕವಾಗಿದೆ:ಮತ್ತೊಂದು ವಿಶೇಷವೆಂದರೆ ಇದನ್ನು ನಿರ್ಮಿಸಿದವರು ಯಾರೋ ಗಾರೆಯವರೋ ಮೇಸ್ತ್ರಿಯೋ, ಇಂಜಿನಿಯರೋ ಅಲ್ಲಾ ಮುಖ್ಯ ಶಿಕ್ಷಕ ಸತೀಶರವರು ... ಸ್ವತಃ ವೇಲ್ಡಿಂಗ್, ಗಾರೆ, ಪೇಂಟ್ ಎಲ್ಲವನ್ನೂ ತಾವೇ ಮಾಡಿದ್ದಾರೆ. ಬೇಸಿಗೆ ಮತ್ತು ಮಳೆ ರಜೆಯ ಸಮಯವನ್ನು ಬಳಸಿಕೊಂಡು ತಮ್ಮ ಸ್ವಂತ ಖರ್ಚಿನಿಂದ ಹಗಲು ರಾತ್ರಿ ಎಂಬ ಸಮಯದ ಪರಿವೆ ಇಲ್ಲದೆ ಗುಹೆ ಮತ್ತು ತೂಗು ತೊಟ್ಟಿಲ ಪಾಠಶಾಲೆ ಕಟ್ಟಿದರು. ಈ ಪುಟ್ಟ ಶಾಲೆಯಲ್ಲಿ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಕ್ಲಾಸ್ ಸುಸಜ್ಜಿತ ಪ್ರಯೋಗಾಲಯ ಮಕ್ಕಳ ಮನೋಮಟ್ಟಕ್ಕೆ ನಿಲುಕುವ ಗ್ರಂಥಾಲಯ ಪ್ರತಿ ತರಗತಿ ಕೋಣೆಗಳು ಕಲಿಕೋಪಕರಣಗಳಿಂದ ಸಂಪತ್ ಭರಿತವಾಗಿ ಕಲಿಕೆಗೆ ಸಹಾಯಕವಾಗಿದೆ.ಇಂತಹ ನೂತನ ಪ್ರಯೋಗಗಳು ಮಕ್ಕಳ ಸೃಜನಾತ್ಮಕತೆ, ಧೈರ್ಯ ಮತ್ತು ಪ್ರಕೃತಿ ಪ್ರೇಮವನ್ನು ಬೆಳೆಸುತ್ತವೆ. ಮಕ್ಕಳು ಕಣ್ಣಾಡಿಸುವ ಕಡೆಯಲ್ಲೆಲ್ಲ ಕಲಿಕೆ ಆಗಬೇಕು ಮಕ್ಕಳು ನಿರಂತರವಾಗಿ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎನ್ನುತ್ತಾರೆ ಶಿಕ್ಷಕ ಸತೀಶ್.ಪ್ರಾಣಿ ಪ್ರಪಂಚ ಸೃಷ್ಟಿ:ತಮ್ಮ ಶಾಲೆಯ ಆವರಣದಲ್ಲಿ ವಿವಿಧ ಪ್ರಾಣಿಗಳ ಬೃಹತ್ ಗಾತ್ರದ ಕಲಾಕೃತಿಗಳನ್ನು ನಿರ್ಮಿಸಿ ಶಾಲೆಯಲ್ಲಿ ಪ್ರಾಣಿ ಪ್ರಪಂಚವನ್ನು ಸೃಷ್ಟಿಸಿದ್ದಾರೆ. ತಮಗೆ ಬರುವ ಸಂಬಳದಲ್ಲಿ ಒಂದಷ್ಟು ಹಣವನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣ ಸಾಮಾಗ್ರಿಗಳ ಉಪಯೋಗಕ್ಕೆ ನೀಡುವ ಮೂಲಕ ಹಲವು ಶಿಕ್ಷಕರಿಗೆ ಮಾದರಿಯಾಗಿದ್ದಾರೆ.ಹಣ್ಣಿನ ಮರಗಳನ್ನು ಅದರಲ್ಲೂ ಕಾಡು ಹಣ್ಣಿನ ಮರಗಳನ್ನು ಬೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳು ವರ್ಷಪೂರ್ತಿ ತಮಗೆ ಮನೆಗಳಲ್ಲಿ ಸಿಗುವ ಹಣ್ಣಿನ ಬೀಜಗಳನ್ನು ತಂದು ಶಿಕ್ಷಕ ಸತೀಶ್ ಶಾಲೆಯಲ್ಲಿ ಸ್ಥಾಪಿಸಿರುವ ಬೀಜ ಭಂಡಾರದಲ್ಲಿ ಸಂಗ್ರಹಿಸುತ್ತಾರೆ.ಇವರ ಸೇವೆಗಾಗಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಕೂಡ ದೊರಕಿದೆ. ಇದಲ್ಲದೆ ವಿವಿಧ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ