ರಾಯರ ರಥೋತ್ಸವಕ್ಕೆ ಭಕ್ತಸಾಗರ!

KannadaprabhaNewsNetwork |  
Published : Sep 01, 2026, 02:30 AM IST
ಉತ್ತರಾಧನೆ ಹಿನ್ನೆಲೆ ಹುಬ್ಬಳ್ಳಿ ಭವಾನಿ ನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿರುವ ಬೃಂದಾವನವನ್ನು ಹೂವುಗಳಿಂದ ಶೃಂಗರಿಸಿರುವುದು. | Kannada Prabha

ಸಾರಾಂಶ

ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ 3ನೇ ದಿನವಾದ ಸೋಮವಾರ ಉತ್ತರಾರಾಧನೆ ಅಂಗವಾಗಿ ನಗರದ ವಿವಿಧ ರಾಯರ ಮಠಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾರಥೋತ್ಸವ ವೈಭವದಿಂದ ಜರುಗಿದವು.

ಹುಬ್ಬಳ್ಳಿ:

ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ 3ನೇ ದಿನವಾದ ಸೋಮವಾರ ಉತ್ತರಾರಾಧನೆ ಅಂಗವಾಗಿ ನಗರದ ವಿವಿಧ ರಾಯರ ಮಠಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾರಥೋತ್ಸವ ವೈಭವದಿಂದ ಜರುಗಿದವು.

ಉತ್ತರಾರಾಧನೆ ಪ್ರಯುಕ್ತ ವಿವಿಧ ಮಠಗಳಲ್ಲಿ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ಅರ್ಚನೆ, ಕನಕಾಭಿಷೇಕ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಮಹಿಳಾ ಭಜನಾ ತಂಡಗಳ ಸದಸ್ಯೆಯರು ಭಜನೆ ಮೂಲಕ ರಾಯರ ಸ್ಮರಣೆ ಮಾಡಿದರು.

ರಾಯರ ದರ್ಶನ ಪಡೆದು ಕೃತಾರ್ಥರಾದ ಭಕ್ತರು ಉರುಳು ಸೇವೆ, ದೀರ್ಘದಂಡ ಸೇರಿದಂತೆ ವಿವಿಧ ಸೇವೆ ಸಲ್ಲಿಸಿ, ಬಳಿಕ ಫಲಮಂತ್ರಾಕ್ಷತೆ ಸ್ವೀಕರಿಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಮಠಗಳಿಗೆ ಆಗಮಿಸಿ ರಾಘವೇಂದ್ರ ಸ್ವಾಮಿಗಳ ರಥೋತ್ಸವವನ್ನು ಕಣ್ತುಂಬಿಕೊಂಡರು.

ಪಟಾಕಿ, ಗುಲಾಲ್‌ನೊಂದಿಗೆ ಸಂಭ್ರಮ:

ಭವಾನಿನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಹಾರಥೋತ್ಸವ, ಅರ್ಚನೆ, ಕನಕಾಭಿಷೇಕ, ನೈವೇದ್ಯ ಹಾಗೂ ಹಸ್ತೋದಕ ನೆರವೇರಿತು. ರಥೋತ್ಸವ ವೀಕ್ಷಿಸಲು ಮಠದ ಆವರಣದಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದರು. ರಥವು ಮಠದ ಆವರಣ ಪ್ರವೇಶಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಗುಲಾಲ್ ಎರಚಿ ಭಕ್ತರು ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ಭಕ್ತರು ರಾಯರ ಸ್ತುತಿಗಳನ್ನು ಹಾಡಿದರು. ವಿವಿಧ ಭಜನಾ ಮಂಡಳಿಗಳ ಸದಸ್ಯರು ಭಜನೆ ಸಲ್ಲಿಸಿದರೆ, ಯುವಕರು ವಾದ್ಯಮೇಳದ ಸದ್ದಿಗೆ ಹೆಜ್ಜೆ ಹಾಕಿ ಭಕ್ತಿ ಸಮರ್ಪಿಸಿದರು.

ವಿವಿಧ ಮಠಗಳಲ್ಲಿ ವಿಶೇಷ ಪೂಜೆ:

ರಾಮಕೃಷ್ಣ ನಗರದ ರಾಯರ ಮಠದಲ್ಲಿ ಸುಪ್ರಭಾತ ಸೇವೆ, ಅಷ್ಟೋತ್ತರ ಪಾರಾಯಣ, ರಥೋತ್ಸವ, ಪ್ರಸಾದ ಹಾಗೂ ಹಸ್ತೋದಕ ಕಾರ್ಯಕ್ರಮಗಳು ಜರುಗಿದವು. ಕುಸುಗಲ್ಲ ರಸ್ತೆಯ ಕುಬೇರಪುರಂ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಷ್ಟಾಕ್ಷರ ಹೋಮ ಹಾಗೂ ರಥೋತ್ಸವ ನಡೆಯಿತು.

ಶಾಂತಿ ಕಾಲನಿಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ ಬೃಂದಾವನಕ್ಕೆ ವಿಶೇಷ ಪೂಜೆ, ದಾಸವಾಣಿ, ವಿಶೇಷ ಉಪನ್ಯಾಸ ಕಾರ್ಯಕ್ರಮ, ರಥೋತ್ಸವ ಅದ್ಧೂರಿಯಾಗಿ ನಡೆಯಿತು. ನವನಗರದ ಪರಿಮಳ ಮಾರ್ಗದಲ್ಲಿರುವ ರಾಯರ ಮಠದಲ್ಲಿ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಅಭಿಷೇಕ, ಅಲಂಕಾರ, ಹಸ್ತೋದಕ, ಪ್ರಸಾದ, ಪಾಲಕಿ ಸೇವೆ, ಅಷ್ಟಾವಧಾನ ಸೇವೆ, ರಥಾಂಗ ಹೋಮ ಹಾಗೂ ರಥೋತ್ಸವ ನೆರವೇರಿತು.

ವಿದ್ಯಾನಗರದ ಪರಿಮಳ ಮಾರ್ಗದಲ್ಲಿರುವ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಉತ್ತರಾರಾಧನೆ ನಿಮಿತ್ತ ಶ್ರೀರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲೂ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವರ ಭರವಸೆ, ಧರಣಿ ಅಂತ್ಯಗೊಳಿಸಿದ ಗುತ್ತಿಗೆದಾರರು
ಇಸ್ಲಾಂ ಶ್ರೇಷ್ಠ ಧರ್ಮ ಹೇಳಿಕೆ ದುರದೃಷ್ಟಕರ; ಮಾಜಿ ಶಾಸಕ ರೆಡ್ಡಿ ಬೇಸರ