ಕನ್ನಡಪ್ರಭ ವಾರ್ತೆ ಹುಕ್ಕೇರಿ
ಮನುಷ್ಯನ ಬುದ್ಧಿ ವಿಕಾಸಗೊಂಡಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆ ಹೆಚ್ಚು ಬೆಳೆಯುತ್ತಿರುವ ಕಾರಣ ಜೀವನದಲ್ಲಿ ನೆಮ್ಮದಿ ಕಾಣುತ್ತಿಲ್ಲ. ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ ಎನಿಸಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.ಇಲ್ಲಿನ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಹಾವೀರ ನಿಲಜಗಿ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಗುರುವಿನ ನಾಮಬಲದಿಂದ ಜೀವನದಲ್ಲಿ ಯಶಸ್ಸು ಸಾಧ್ಯವಿದೆ. ಧರ್ಮ, ಸಂಸ್ಕೃತಿ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಜನ್ಮ ಕೊಟ್ಟ ತಾಯಿ, ಜೀವನ ಪಾಠ ಕಲಿಸಿದ ತಂದೆ, ಅನ್ನ ನೀಡುವ ರೈತ, ದೇಶ ಕಾಯುವ ಯೋಧ ಮತ್ತು ಅರಿವು ನೀಡುವ ಗುರುವನ್ನು ಸದಾ ಜಪಿಸುವ ಮಹಾವೀರ ನಿಲಜಗಿ ಅವರಿಗೆ ಜೀವನದಲ್ಲಿ ಒಳ್ಳೆಯ ಅವಕಾಶ ಮತ್ತು ಅಧಿಕಾರ ಪ್ರಾಪ್ತಿಯಾಗಿದೆ. ಸಂಪತ್ತು ಉಳ್ಳವ ಶ್ರೀಮಂತನಲ್ಲ. ಸಂತಸ ಉಳ್ಳಾತನೇ ನಿಜವಾದ ಶ್ರೀಮಂತ ಎಂಬ ಸಂಗತಿ ಅರಿತ ಮಹಾವೀರ ನಿಲಜಗಿ ಅವರಿಗೆ ಮಹತ್ವದ ಹುದ್ದೆ ಒಲಿದು ಬಂದಿದ್ದು ನಿಲಜಗಿ ಬದುಕು ಮತ್ತಷ್ಟು ಉಜ್ವಲವಾಗಲಿ ಎಂದು ಅವರು ಹಾರೈಸಿದರು.ಜನರು ನಮ್ಮನ್ನು ನಂಬಿ ಅಧಿಕಾರ ಕೊಟ್ಟಿರುತ್ತಾರೆ. ಅಧಿಕಾರ ಬಂದಾಗ ಜನ ಸೇವೆ ಮಾಡುವುದು ತುಂಬಾ ಮುಖ್ಯ. ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ. ಪಾಟೀಲ, ಶಾಸಕ ನಿಖಿಲ್ ಕತ್ತಿ ನೇತೃತ್ವದಲ್ಲಿ ಮಹಾವೀರ ನಿಲಜಗಿ ಜನಸೇವೆಯ ಕಾಯಕ ಮುಂದುವರೆಸಿ ಜನಪ್ರಿಯರಾಗಬೇಕು ಎಂದು ಕಿವಿಮಾತು ಹೇಳಿದರು.ಮುಖವಾಡದ ಬದುಕು ಮೂರು ದಿನವಾದರೆ, ಬಣ್ಣದ ಬದುಕು ಆರು ದಿನ ಅಷ್ಟೇ. ಆದರೆ, ನಿಯತ್ತಿನ ಬದುಕು ಕಟ್ಟಿಕೊಂಡಿರುವ ಮಹಾವೀರ ನಿಲಜಗಿ ಎಂದಿಗೂ ವ್ಯಕ್ತಿ ನಿಷ್ಠೆ ಬದಲಿಸಲಿಲ್ಲ. ಸದಾ ಆಸಕ್ತಿ, ಉತ್ಸಾಹದ ಚಿಲುಮೆಯಾಗಿರುವ ಮಹಾವೀರ ನಿಲಜಗಿ ಅವರು ಬದ್ಧತೆ ಮತ್ತು ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದು ಅವರಿಗೆ ಇನ್ನಷ್ಟು ಉನ್ನತ ಸ್ಥಾನಮಾನಗಳು ಲಭಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಾವೀರ ನಿಲಜಗಿ ಮನೆತನ ಧರ್ಮಸ್ಥಳದ ಬಗ್ಗೆ ಅಪಾರವಾಗಿರುವ ಶೃದ್ಧೆ ಇಟ್ಟುಕೊಂಡಿದ್ದು ಅವರಿಗೆ ಶ್ರೀಕ್ಷೇತ್ರದಿಂದ ಆಶೀರ್ವಾದ ಲಭಿಸಿರುವುದು ಅತ್ಯಂತ ಸ್ವಾಗತಾರ್ಹ ಕಾರ್ಯ ಎಂದರು.ಸನ್ಮಾನ ಸ್ವೀಕರಿಸಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ತಮ್ಮ ತಂದೆಯ ಕಾಲದಿಂದಲೂ ನಾವು ಧಾರ್ಮಿಕವಾಗಿ ಬೆಳೆಯುತ್ತಾ ಬಂದಿದ್ದೇವೆ. ಇವತ್ತು ಸ್ಥಾನಮಾನ ಲಭಿಸಿರುವುದು ಜನರ ಆಶೀರ್ವಾದ, ಧರ್ಮಕ್ಷೇತ್ರಗಳ ಆಶೀರ್ವಾದ ಎಂದರು.