ನಾಪೋಕ್ಲು: ಸಂತೆಯ ದಿನ ರಸ್ತೆಯುದ್ದಕ್ಕೂ ಸಮಸ್ಯೆ ಸರಮಾಲೆ

KannadaprabhaNewsNetwork |  
Published : Mar 26, 2024, 01:06 AM IST
ಸ್ತೆ ಬದಿಯಲ್ಲಿ ವ್ಯಾಪಾರಿಗಳು ತಮ್ಮ ವಾಹನಗಳಲ್ಲಿ ತರಕಾರಿ ಹಣ್ಣು ಹಂಪಲುಗಳನ್ನು ಇತರ ವಸ್ತುಗಳನ್ನು ಮಾರಾಟ ಟ್ರಾಫಿಕ್ ಸಮಸ್ಯೆ.. | Kannada Prabha

ಸಾರಾಂಶ

ನಾಪೋಕ್ಲು ಸಂತೆಯ ದಿನವಾದ ಸೋಮವಾರವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲ. ವಾಹನ ಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ತರಕಾರಿ, ಹಣ್ಣಿನ ಅಂಗಡಿ ಇತರ ವಸ್ತುಗಳು ರಸ್ತೆಯಂಚಿಗೆ ಬಂದಿದ್ದು ನಡೆದಾಡಲೂ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರವಂತೂ ಸಾಧ್ಯವೇ ಇಲ್ಲದೆ ಟ್ರಾಫಿಕ್ ಜಾಮ್ ಮಾಮೂಲಾಗಿಬಿಟ್ಟಿದೆ. ನಾಪೋಕ್ಲು ಸಂತೆಯ ದಿನವಾದ ಸೋಮವಾರ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ವಾಹನ ಮಾಲೀಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಂತೆಯ ದಿನ ರಸ್ತೆಯತ್ತ ದೃಷ್ಟಿ ಹರಿಸಿದರೆ ಸಾಕು ಸಮಸ್ಯೆಗಳು ಉದ್ದಕ್ಕೂ ಗೋಚರಿಸುತ್ತವೆ. ರಸ್ತೆ ಬದಿಯಲ್ಲಿ ವ್ಯಾಪಾರಿಗಳು ತಮ್ಮ ವಾಹನಗಳಲ್ಲಿ ತರಕಾರಿ ಹಣ್ಣು ಹಂಪಲುಗಳನ್ನು ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಸಾರ್ವಜನಿಕರು ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳಲು ಪ್ರಾಯಸ ಪಡುವಂತಾಗಿ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶಗಳಿಂದ ಬರುವವರಿಗೆ ವಾಹನ ನಿಲುಗಡೆಗೆ ಸ್ಥಳಾವಕಾಶವೇ ಇಲ್ಲದಾಗಿದೆ. ಪೊಲೀಸ್ ಠಾಣೆಯ ಎದುರು ಭಾಗದಲ್ಲಿಯೂ ಸ್ಥಳಾವಕಾಶದ ಕೊರತೆ ಇದ್ದು ಮಾರುಕಟ್ಟೆ ಆವರಣವಂತೂ ಜನದಟ್ಟಣೆಯಿಂದ ಕೂಡಿದ್ದು ವಾಹನಗಳ ನಿಲುಗಡೆ ಮಾಡಲಾರದೆ ಚಾಲಕರು ಪರಿತಪಿಸುವಂತಾಗಿದೆ. ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ವಾಹನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆಗಳು ತಪ್ಪಿದ್ದಲ್ಲ.

ಈ ಹಿಂದೆ ಮಾರುಕಟ್ಟೆ ಬಳಿ ಬಸ್ಸು ನಿಲ್ದಾಣಕ್ಕೆ ಯೋಜನೆ ಕೈಗೊಳ್ಳಲಾಗಿತ್ತು. ಅದು ಮೂಲೆಗುಂಪಾಗಿದೆ. ಮಾರುಕಟ್ಟೆಯನ್ನು ವಿಸ್ತರಿಸಿ ವ್ಯಾಪಾರಿಗಳು ಮಾರುಕಟ್ಟೆಯ ಪ್ರಾಂಗಣದೊಳಗೆ ವ್ಯಾಪಾರ ಮಾಡುವಂತೆಯೂ ಸೂಚಿಸಲಾಗಿತ್ತು. ವ್ಯಾಪಾರಿಗಳು ಇತ್ತೀಚೆಗೆ ರಸ್ತೆ ಬದಿಯನ್ನು ಆಕ್ರಮಿಸಿಕೊಂಡಿದ್ದು ವಾಹನಗಳ ದಟ್ಟಣೆ ಸಮಸ್ಯೆಯಾಗಿ ಕಾಡುತ್ತಿದೆ .ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಪರದಾಡುವಂತೆ ಆಗಿದೆ. ರಸ್ತೆಯ ಎರಡು ಬದಿಯಲ್ಲಿ ಹಣ್ಣು ಹಂಪಲುಗಳು ತರಕಾರಿಗಳು ಮಾರಾಟ ಸೋಮವಾರ ದಿನ ನಡೆಯುವುದರಿಂದ ವಾಹನ ನಿಲುಗಡೆ ಸಾಧ್ಯವೇ ಇಲ್ಲದ ಪರಿಸ್ಥಿತಿ ಆಗಿದ್ದು ಗ್ರಾಮ ಪಂಚಾಯಿತಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಾಪೋಕ್ಳು ಮಾರುಕಟ್ಟೆ ಬಳಿ ರಸ್ತೆ ವಿಸ್ತರಣೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿ ಕೊಡಬೇಕು. ವಾಹನಗಳ ದಟ್ಟಣೆಯನ್ನು ನಿಯಂತ್ರಿಸಬೇಕು ಎಂದು ಚಂಬಾರಂಡ ಶಾದಲಿ ಎಮ್ಮೆಮಾಡು ಹೇಳಿದರು.

ಸಂತೆಯ ದಿನವಾದ ಸೋಮವಾರ ಹಣ್ಣು ತರಕಾರಿ ಅಂಗಡಿಗಳು ರಸ್ತೆ ಬದಿಗೆ ಬರುತ್ತಿವೆ. ವಾಹನಗಳ ಸಂಖ್ಯೆ ಹೆಚ್ಚಿದೆ. ಪಾರ್ಕಿಂಗ್ ಗೆ ಸ್ಥಳಾವಕಾಶ ಇಲ್ಲ. ಹಿರಿಯ ನಾಗರಿಕರು ಏನು ಮಾಡಬೇಕು? ಅಂಗಡಿ ಮಾಲೀಕರು ಸಹ ವಾಹನಗಳನ್ನು ಪಟ್ಟಣದ ರಸ್ತೆಯಲ್ಲಿ ನಿಲ್ಲಿಸದೆ ಹೊರಗಡೆ ನಿಲ್ಲಿಸಿ ನಾಗರಿಕರಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಕೃಷಿಕ ನೂರಂಬಾಡ ರವೀಂದ್ರ ಹೇಳಿದರು.

ನಾಪೋಕ್ಲು ಮಾರುಕಟ್ಟೆಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಮಾರುಕಟ್ಟೆ ಹೊರಗಡೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಕೊಡಬಾರದು. ವ್ಯಾಪಾರ ಎಲ್ಲವೂ ಮಾರುಕಟ್ಟೆ ಆವರಣದೊಳಗೆ ನಡೆಯಬೇಕು ಎಂದು ಬೊಟ್ಟೋಳಂಡ ಜಾನಕಿ ಮಂದಣ್ಣ, ಬಲ್ಲಮಾವಟಿ ತಿಳಿಸಿದರು.

ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ತಕ್ಷಣ ಕೈಗೊಳ್ಳ ಕ್ರಮ ಕೈಗೊಳ್ಳಬೇಕು. ಶಾಲಾ ಮಕ್ಕಳು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು ಎಂದು ಚೇನಂಡ ಜಪ್ಪು ದೇವಯ್ಯ , ಕೊಕೇರಿ ಹೇಳಿದರು.

PREV