ಚಿತ್ರದೇವರಹಟ್ಟಿ ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆ

KannadaprabhaNewsNetwork |  
Published : Jun 26, 2025, 01:32 AM IST
ಚಿತ್ರ 3 | Kannada Prabha

ಸಾರಾಂಶ

ಮಸ್ಕಲ್‌ನ ಚಿತ್ರದೇವರಹಟ್ಟಿಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಅದು ಸುಮಾರು ನೂರು ಮನೆಗಳಿರುವ ಗ್ರಾಮ. ಅಲ್ಲಿನ ಜನಕ್ಕೆ ಶುದ್ಧ ಕುಡಿಯುವ ನೀರಿಲ್ಲ. ಪಡಿತರ ಪಡೆಯಲು, ಮತ ಕೊಡಲು ಪಕ್ಕದೂರಿಗೆ ಹೋಗಬೇಕು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಆ ಊರಿಗೆ ಬಸ್ ಸಂಪರ್ಕ ಇಲ್ಲ. ಇದು ತಾಲೂಕಿನ ಮಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ರದೇವರಹಟ್ಟಿಯ ಸದ್ಯದ ಪರಿಸ್ಥಿತಿ.

ಹೀಗೆ ಮೂರು ವರ್ಷಗಳ ಹಿಂದೆ ಚಿತ್ರದೇವರಹಟ್ಟಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯುತ್ತಾರೆ. ಆದರೆ ಅದು ಕಾರ್ಯನಿರ್ವಹಿಸಿದ್ದು ಕೆಲವೇ ದಿನಗಳು. ಅಲ್ಲಿಂದ ಇಲ್ಲಿಯವರೆಗೆ ಆ ಗ್ರಾಮದ ಜನರು ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಕೊಡಿ ಎಂದು ಕೇಳಿದ್ದೇ ಆಯ್ತು. ಸಂಬಂಧಪಟ್ಟ ಅಧಿಕಾರಿಗಳು ಅದರ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ. ಬೈಕ್‌ಗಳಲ್ಲಿ ಪಕ್ಕದ ಮಸ್ಕಲ್ ಗ್ರಾಮಕ್ಕೆ ಸುಮಾರು 3 ಕಿಮೀ ಹೋಗಿ ಶುದ್ಧ ಕುಡಿಯುವ ನೀರು ಹಿಡಿದು ತರುವ ಗ್ರಾಮಸ್ಥರು ಊರಲ್ಲಿರುವ ಒಂದು ಬೋರ್‌ವೆಲ್ ನೀರನ್ನು ದೈನಂದಿನ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಬೈಕ್‌ಗಳು ಇರುವವರು ಪಕ್ಕದೂರಿನಿಂದ ನೀರು ತರುತ್ತಾರೆ, ನಮ್ಮ ಪಾಡೇನು ಅಷ್ಟು ದೂರದಿಂದ ತಲೆ ಮೇಲೆ ಹೊತ್ತು ತರುವುದು ಆಗುತ್ತದಾ ಎಂದು ಬೈಕ್‌ಗಳು ಇಲ್ಲದ ಗ್ರಾಮಸ್ಥರು ತಮ್ಮ ಸಂಕಟ ಹೇಳಿಕೊಳ್ಳುತ್ತಾರೆ. ಶುದ್ಧ ಕುಡಿಯುವ ನೀರು ಸಿಗದೇ ಗ್ರಾಮದಲ್ಲಿಯೇ ಸಿಗುವ ನೀರನ್ನು ಕುಡಿದವರು ಟೈಫಾಯಿಡ್, ಮಲೇರಿಯಾದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಒಬ್ಬರಾದ ಮೇಲೊಬ್ಬರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಗ್ರಾಮದ ಹಿರಿಯರು ಆತಂಕ ವ್ಯಕ್ತಪಡಿಸುತ್ತಾರೆ. ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವರ್ಷಗಳೇ ಕಳೆದಿದ್ದು ಅದರ ಮುಂಭಾಗದ ಗ್ಲಾಸ್ ಒಡೆದು ಹೋಗಿದ್ದು ಬಾಗಿಲ ಬೀಗವು ಸಹ ಮುರಿದುಹೋಗಿದೆ. ಘಟಕದ ಸುತ್ತ ಗಿಡಗೆಂಟೆ ಬೆಳೆದು ಪಾಳು ಬಿದ್ದಂತಾಗಿದೆ. ಸಾಲದು ಎಂಬಂತೆ ಘಟಕದ ಬಳಿ ಟ್ಯಾoಕ್ ನಿರ್ಮಿಸದೆ ಘಟಕದ ಕೆಳಗೆ ತೊಟ್ಟಿ ನಿರ್ಮಿಸಿ ಅದರಲ್ಲಿನ ನೀರನ್ನೇ ಶುದ್ಧೀಕರಿಸಲಾಗುತ್ತಿತ್ತು. ತೊಟ್ಟಿಯಲ್ಲಿ ಹಲ್ಲಿ, ಹುಳುಗಳು ಬೀಳುತ್ತಿದ್ದವು ಎಂಬ ಗಂಭೀರ ಆರೋಪ ಗ್ರಾಮಸ್ಥರದ್ದು. ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಸಿಕೊಡಿ ಎಂದು ಕೇಳಿ ಕೇಳಿ ಇದೀಗ ರಿಪೇರಿ ಮಾಡಿಸಿಕೊಡಿ ಎಂದು ಕೇಳುವುದನ್ನೇ ಬಿಟ್ಟು ಬಿಟ್ಟಿದ್ದೇವೆ ಎನ್ನುವ ಗ್ರಾಮಸ್ಥರು ಈಗಲಾದರೂ ಪಾಳು ಬಿದ್ದಂತಿರುವ ಘಟಕ ರಿಪೇರಿ ಆಗುತ್ತದೆನೋ ಎಂಬ ಆಶಾಭಾವನೆಯಲ್ಲಿದ್ದಾರೆ.

ಈ ಬಗ್ಗೆ ಮಸ್ಕಲ್ ಗ್ರಾಮ ಪಂಚಾಯಿತಿ ಪಿಡಿಒ ಶಬಿಂತಿಯಾಜ್ ಬೇಗಂ ಮಾತನಾಡಿ, ಚಿತ್ರದೇವರಹಟ್ಟಿಯ ಘಟಕ ಹುಲಿಗೆಪ್ಪ ಎನ್ನುವವರ ಏಜೆನ್ಸಿಯವರ ಅಧೀನದಲ್ಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಆ ಘಟಕವನ್ನು ಹಸ್ತಾಂತರ ಮಾಡಿಲ್ಲ. ಮೂರು ವರ್ಷ ಆಗುತ್ತಾ ಬಂದಿದೆ. ಘಟಕದ ಕೆಲಸ ಇನ್ನೂ ಸಂಪೂರ್ಣ ಆಗಿಲ್ಲ. ಮೀಟರ್ ಬೋರ್ಡ್ ಇಲ್ಲ. ಗ್ಲಾಸ್‌ಗಳು ಒಡೆದಿವೆ. ಚಾಲ್ತಿಯಲ್ಲಿರುವ ಘಟಕಗಳನ್ನು ಮಾತ್ರ ಪಂಚಾಯಿತಿ ವ್ಯಾಪ್ತಿಗೆ ತೆಗೆದುಕೊಳ್ಳುತ್ತೇವೆ. ಹಾಗಾಗಿ ಆ ಘಟಕದ ಜವಾಬ್ದಾರಿ ಏಜೆನ್ಸಿಯವರದೇ ಆಗಿದೆ ಎಂದರು.

ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಸಿಕೊಡಿ: ಗೋವಿಂದಪ್ಪ

ಗ್ರಾಮದ ಹಿರಿಯ ಗೋವಿಂದಪ್ಪ ಮಾತನಾಡಿ, ಮೂರು ವರ್ಷ ಆಯ್ತು ಸ್ವಾಮಿ. ಈ ಕುಡಿಯುವ ನೀರಿನ ಘಟಕ ಮಾಡಿ. ಒಂದು 15 ದಿನ ಸರಿ ಇತ್ತೇನೋ ಅಷ್ಟೇ. ಆಮೇಲೆ ಅದರ ಬಗ್ಗೆ ಯಾರೂ ಗಮನ ಹರಿಸಲಿಲ್ಲ. ಶುದ್ಧ ಕುಡಿಯುವ ನೀರಿಗಾಗಿ 5 ಕಿಮೀ ದೂರವಿರುವ ಮಸ್ಕಲ್ ಗ್ರಾಮಕ್ಕೆ ಹೋಗುವ ಪರಿಸ್ಥಿತಿ ಇದೆ. ಗ್ರಾಮದಲ್ಲೇ ಇರುವ ಉಪ್ಪು ನೀರನ್ನು ಕುಡಿದು ಮನೆಗೊಬ್ಬರಂತೆ ಕಾಯಿಲೆ ಬೀಳುತ್ತಿದ್ದೇವೆ. ಜ್ವರ, ಮೊಣಕಾಲು ನೋವು, ತಲೆಭಾರದಂತಹ ಕಾಯಿಲೆಗಳು ಬರುತ್ತಿವೆ. ಇನ್ನಾದರೂ ನಮ್ಮ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿಸಿಕೊಡಬೇಕು. ಹಾಗಂತ ಸುಧಾಕರ್ ಸಾಹೇಬರಲ್ಲಿ ಮನವಿ ಮಾಡುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ