ಭಟ್ಕಳ: ಸೌಹಾರ್ದ ಸಹಕಾರಿ ಸಂಘ ಸೇರಿದಂತೆ ತಾಲೂಕಿನಲ್ಲಿ ಸರಣಿ ಕಳ್ಳತನ ನಡೆದಿದ್ದು, ಕಳ್ಳರು ಲಕ್ಷಾಂತರ ರುಪಾಯಿ ಕದ್ದೊಯ್ದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ನಗರ, ಗ್ರಾಮೀಣ ಹಾಗೂ ಮುರ್ಡೇಶ್ವರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳರು ರಂಗೀಕಟ್ಟೆಯಲ್ಲಿರುವ ವಿನಾಯಕ ಸೌಹಾರ್ದ ಸಹಕಾರಿ ಸಂಘ, ಗ್ರಾಮೀಣ ಠಾಣೆಯ ಸರಹದ್ದಿನಲ್ಲಿರುವ ಒಂದು ಅಂಗಡಿ ಹಾಗೂ ಮುರ್ಡೇಶ್ವರ ಬಸ್ತಿಮಕ್ಕಿಯಲ್ಲಿರುವ ಒಂದು ಸರ್ವಿಸ್ ಸೆಂಟರ್ ಸೇರಿದಂತೆ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ.ಮಂಗಳವಾರ ತಡರಾತ್ರಿ ೩.೩೦ರ ಸುಮಾರಿಗೆ ತಲೆಗೆ ಹೆಲ್ಮೆಟ್, ಮುಖಕ್ಕೆ ಸ್ಕಾರ್ಪ ಧರಿಸಿ ಬಂದಿದ್ದ ಇಬ್ಬರು ಯುವಕರು ವಿನಾಯಕ ಸೌಹಾರ್ದ ಸಹಕಾರಿಯ ಶೆಟರ್‌ನ್ನು ಎತ್ತಿ ಒಳನುಗ್ಗಿದ್ದಾರೆ. ಬ್ಯಾಂಕಿನ ಸೇಫ್ ಲಾಕರ್‌ನ್ನು ಕಿತ್ತು ಮೊದಲ ಮಹಡಿಯಿಂದ ಕೆಳಕ್ಕೆ ಎಸೆದು ಅಲ್ಲಿಂದ ತೆಗೆದುಕೊಂಡು ಪರಾರಿಯಾಗಿದ್ದಾರೆ. ಲಾಕರ್‌ನಲ್ಲಿ ಲಕ್ಷಾಂತರ ರುಪಾಯಿ ನಗದು ಇದ್ದು, ಇನ್ನು ಏನೇನು ಕಳ್ಳತನವಾಗಿದೆ ಎನ್ನುವುದು ತಿಳಿದು ಬರಬೇಕಿದೆ. ಸಂಘದಲ್ಲಿರುವ ಇನ್ನೊಂದು ಲಾಕರ್‌ಅನ್ನು ಹಾಗೆಯೇ ಬಿಟ್ಟು ಹೋಗಿದ್ದು, ಅದರಲ್ಲಿ ಅಡವಿಟ್ಟುಕೊಂಡಿದ್ದ ಚಿನ್ನಾಭರಣಗಳು ಇತ್ತೆನ್ನಲಾಗಿದೆ.
ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿನ ಅಂಗಡಿಯಲ್ಲಿಯೂ ಕಳ್ಳತನವಾಗಿದ್ದು ವಿವರ ತಿಳಿದುಬಂದಿಲ್ಲ. ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿರುವ ಸರ್ವಿಸ್ ಸೆಂಟರೊಂದರ ಶೆಟರ್ ಮುರಿದು ಕಳ್ಳರು ಒಳಹೊಕ್ಕಿದ್ದು, ಅಲ್ಲಿಯೂ ಎಷ್ಟು ಕಳುವಾಗಿದೆ ಎಂದು ವಿವರ ತಿಳಿದು ಬಂದಿಲ್ಲ.ಸಿಸಿ ಕ್ಯಾಮೆರಾದಲ್ಲಿನ ದಾಖಲೆಯನ್ನು ಪರಿಶೀಲಿಸಲಾಗಿದ್ದು, ಕಳ್ಳರ ಸುಳಿವು ದೊರೆತಿದೆ ಎನ್ನಲಾಗಿದೆ. ಮಂಗಳವಾರ ರಾತ್ರಿ ಚೆನ್ನಪಟ್ಟಣ ಹನುಮಂತ ದೇವರ ಪುಷ್ಪರಥೋತ್ಸವ ಇದ್ದಿದ್ದರಿಂದ ಪೊಲೀಸರು ಹೆಚ್ಚಿನ ಆದ್ಯತೆಯನ್ನು ಪಟ್ಟಣದಲ್ಲಿ ಬಂದೋಬಸ್ತಿಗಾಗಿ ನೀಡಿದ್ದನ್ನೇ ಉಪಯೋಗಿಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.
ಎನ್‌ಎಚ್ 66ರ ಇಕ್ಕೆಲದಲ್ಲೇ ವಿನಾಯಕ ಸೌಹಾರ್ದ ಸಂಘ ಇರುವ ಕಟ್ಟಡ ಇದ್ದು, ಕಳ್ಳರ ಕೃತ್ಯ ಯಾರೂ ನೋಡಲಿಲ್ಲವೇ ಎನ್ನುವ ಪ್ರಶ್ನೆ ಕೇಳಿ ಬಂದಿದೆ. ಇಬ್ಬರು ಕಳ್ಳರು ಹೆಲ್ಮೆಟ್ ಧರಿಸಿ ಬಂದಿದ್ದು, ಒಮ್ಮೆ ಮೊದಲ ಮಹಡಿಗೆ ಹೋಗಿ ನೋಡಿಕೊಂಡು ಬಂದು ಅಗತ್ಯದ ರಾಡ್ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ ಶಟರ್ ಎತ್ತಲಾಗಿದೆ.ಈಗಾಗಲೇ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಸುಳಿವು ದೊರೆತಿದ್ದು, ಶೀಘ್ರ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬೀದಿದೀಪ ಇಲ್ಲದೇ ೨- ೩ ವರ್ಷವಾಗಿದ್ದು, ಕಳ್ಳರಿಗೆ ಹೆದ್ದಾರಿಯ ಮೇಲೆ ಕೈಚಳಕ ತೋರಿಸಲು ಸುಲಭವಾದಂತಾಗಿದೆ.ಈ ಹಿಂದೆ ರಂಗೀಕಟ್ಟೆ, ಮಣ್ಕುಳಿ, ಸರ್ಪನಕಟ್ಟೆ, ನವಾಯತ ಕಾಲನಿಗಳಲ್ಲಿ ಕಳ್ಳತನ ಮಾಡಲು ಅನುಕೂಲವಾಗಿದ್ದರೆ ಮಂಗಳವಾರವೂ ಬೀದಿದೀಪ ಇಲ್ಲದಿರುವುದೇ ಕಳ್ಳರ ಕೈಚಳಕ ತೋರಿಸಲು ಅನುಕೂಲವಾಗಿದೆ.