ಕನ್ನಡಪ್ರಭ ವಾರ್ತೆ ಬೆಳಗಾವಿ
ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಯುಪಿಎಸ್ಸಿಯಲ್ಲಿ ಮಗ ಪಾಸ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕೊಡ್ಲಿವಾಡದ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಪ್ಪ ಯಲ್ಲಪ್ಪ, ಅವ್ವ ಕಾಳವ್ವ, ಪತ್ನಿ ಯಶೋಧಾ, ಸಹೋದರ ಆನಂದ ಸೇರಿ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇರಲಿಲ್ಲ. ಅಲ್ಲದೇ ಇಡೀ ಊರಿಗೆ ಊರೇ ಹನುಮಂತನ ಸಾಧನೆಗೆ ಹೆಮ್ಮೆ ಪಡುತ್ತಿದೆ. ಹನುಮಂತ ಅವರ ಅಪ್ಪ ಮತ್ತು ಸಹೋದರ ಕುರಿ ಕಾಯುತ್ತಾ ಕೃಷಿ ಕಾಯಕ ಮಾಡುತ್ತಾರೆ. ಅವ್ವ ಅವರಿಗೆ ಸಹಾಯ ಮಾಡುತ್ತಾರೆ. ಮನೆಯಲ್ಲಿ ಬಡತನ ಹಾಸಿ ಹೊದ್ದಿದೆ. ಎಲ್ಲವನ್ನು ಮೆಟ್ಟಿ ನಿಂತು ಹನುಮಂತ ಯುಪಿಎಸ್ಸಿ ಪಾಸ್ ಆಗುವ ಮೂಲಕ ತಂದೆ-ತಾಯಿ ಹೆಮ್ಮೆ ಪಡುವ ಸಾಧನೆಗೈದಿದ್ದಾರೆ.ಹನುಮಂತ ಅವರು, 1 ರಿಂದ 7ನೇ ತರಗತಿಯವರೆಗೆ ಸ್ವಗ್ರಾಮ ಕೊಡ್ಲಿವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದು, 8-10ನೇ ತರಗತಿ ಸತ್ತಿಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ್ದಾರೆ. ಪಿಯುಸಿ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರೆ, ಬೆಳಗಾವಿ ಗೋಗಟೆ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಪಡೆದಿದ್ದಾರೆ.
8ನೇ ಪ್ರಯತ್ನದಲ್ಲಿ ಪಾಸ್ ಆಗಿದ್ದೇನೆ. ಬಹಳ ಖುಷಿಯಾಗುತ್ತಿದೆ. ಮೂರು ಬಾರಿ ಯುಪಿಎಸ್ಸಿ ಮುಖ್ಯ ಪರೀಕ್ಷೆ ಬರೆದಿದ್ದೆ. ಕೆಪಿಎಸ್ಸಿ ಮುಖ್ಯ ಪರೀಕ್ಷೆಗೂ ಓದುತ್ತಿದ್ದೆ. ನನ್ನ ಈ ಸಾಧನೆ ತಂದೆ-ತಾಯಿಗೆ ಅರ್ಪಿಸುತ್ತೇನೆ. ಚಿಕ್ಕಂದಿನಲ್ಲಿ ಚಿಕ್ಕಂದಿನಲ್ಲಿ ಸತ್ತಿಗೇರಿ ಹಾಸ್ಟೇಲ್ ವಾರ್ಡನ್ ಎಸ್.ಕೆ.ಪಾಟೀಲ ಅವರೇ ನನಗೆ ಯುಪಿಎಸ್ಸಿ ಪರೀಕ್ಷೆ ಬಗ್ಗೆ ಮಾರ್ಗದರ್ಶನ ನೀಡಿದ್ದರು. ನನಗೆ ಸಹಾಯ ಮಾಡಿದ ಎಲ್ಲರಿಗೂ ನಾನು ಚಿರಋಣಿ ಆಗಿದ್ದೇನೆ ಎಂದು ಯುಪಿಎಸ್ಸಿ ಟಾಪರ್ ಹನುಮಂತ ನಂದಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
-ಡಾ.ಎಂ.ಎಸ್.ಪಾಟೀಲ,
ಹನುಮಂತಪ್ಪ ಯಲ್ಲಪ್ಪ ನಂದಿ,