ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಈ ಮೊದಲು ನಾಲ್ಕು ಗಂಟೆಗೆ ಸಚಿವರು ಚಿತ್ರದುರ್ಗಕ್ಕೆ ಆಗಮಿಸುವರು ಎಂದು ತಿಳಿಸಲಾಗಿತ್ತು, ಆದರೂ ಹಿರಿಯೂರು ಬರ ಅಧ್ಯಯನ, ಚಳ್ಳಕೆರೆ ನಗರ ಪ್ರವೇಶ ಮಾಡಿ ನಂತರ ಚಿತ್ರದುರ್ಗಕ್ಕೆ ಆಗಮಿಸಿದಾಗ ಸೂರ್ಯಾಸ್ತವಾಗಿತ್ತು. ಗೋಧೂಳಿ ವೇಳೆ ಮದಕರಿ ನಾಯಕ ಪ್ರತಿಮೆ ಮುಂಭಾಗ ತೆರೆದ ವಾಹನದಲ್ಲಿ ಆಗಮಿಸಿದ ರಘುಮೂರ್ತಿ ಅವರ ನೆತ್ತಿ ಮೇಲೆ ಅಕ್ಷರಶಃ ಹೂಮಳೆಗರೆಯಲಾಯಿತು.
ಐದು ಜೆಸಿಬಿ ಯಂತ್ರದ ಡೋಜರ್ ತುಂಬಾ ಹೂ ತುಂಬಿದ್ದ ಅಭಿಮಾನಿಗಳು ಆಕಾಶದಿಂದ ಸುರಿದರು. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಹೂ ಮಳೆಗರೆಯಲಾಯಿತು. ಹೂ ಮಳೆಯಿಂದಾಗಿ ಮದಕರಿನಾಯಕ ವೃತ್ತದ ಸುತ್ತ ನಡೆವ ಹಾದಿಯಲ್ಲೆಲ್ಲ ನಗೆಯ ಹೂ ಹರಡಿದ್ದವು. ನಂತರ ಮದಕರಿ ನಾಯಕ ಪ್ರತಿಮೆಗೆ ಭಾರೀ ಪ್ರಮಾಣದ ಹಾರ ಸಮರ್ಪಿಸಿದ ಸಚಿವರು ನಂತರ ನೇರವಾಗಿ ವೇದಿಕೆಗೆ ಹೋದರು. ವೇದಿಕೆ ಮೇಲೂ ಹೂಮಳೆ ಗರೆಯಲಾಯಿತು.ನೆರೆದ ಸಮೂಹವನ್ನುದ್ದೇಶಿಸಿ ಮಾತನಾಡಿದ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ರಘುಮೂರ್ತಿಯವರ ಅಭಿವೃದ್ಧಿ ಕಾರ್ಯಗಳ ನೋಡಿ ಸಚಿವ ಸ್ಥಾನ ನೀಡಿದ್ದಾರೆ. ಚಿತ್ರದುರ್ಗ ಕೂಡಾ ಇನ್ನು ಮೇಲೆ ಅಭಿವೃದ್ಧಿ ಕಡೆ ಮುಖ ಮಾಡಲಿದೆ ಎಂದರು.
ಇವತ್ತು ಯಾರೇ ಚಳ್ಳಕೆರೆಗೆ ಹೋದರೆ ಮೈಸೂರು ನೋಡಿದ ಹಾಗೆ ಆಗುತ್ತೆ. ಸ್ವತಃ ಎಂಜಿನಿಯರ್ ಆಗಿದ್ದ ರಘುಮೂರ್ತಿಯವರು ತಮ್ಮ ಶಿಲ್ಪಿತನದ ಗುಣದಿಂದಾಗಿ ಚಳ್ಳಕೆರೆಯ ಕಟ್ಟಿದ್ದಾರೆ. ಇದಲ್ಲದೇ ಚೆಕ್ ಡ್ಯಾಂಗಳ ತುಂಬಿಸಿ ಭಗೀರಥರಾಗಿದ್ದಾರೆ. ಬಿ.ಜಿ.ಗೋವಿಂದಪ್ಪ, ರಘುಮೂರ್ತಿಯವರು ಜೋಡೆತ್ತುಗಳು ಇದ್ದ ಹಾಗೆ. ಅವರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ಮಾಡೋಣವೆಂದರು.
ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣವೇ ನಿಮ್ಮ ಜಿಲ್ಲೆಗಳಿಗೆ ಹೋಗಿ ಬರ ನಿರ್ವಹಣೆ ಮಾಡುವಂತೆ ಸೂಚಿಸಿದರು. ಹಾಗಾಗಿ ತಡ ಮಾಡದೆ ಜಿಲ್ಲೆಗೆ ಆಗಮಿಸಿ ಅಧಿಕಾರಿಗಳ ಸಭೆ ಮಾಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣ ಮಾಡದೆ ಪಕ್ಷಾತೀತವಾಗಿ ನಡೆದುಕೊಳ್ಳುವುದಾಗಿ ರಘುಮೂರ್ತಿ ಹೇಳಿದರು.