ಕನ್ನಡಪ್ರಭ ವಾರ್ತೆ ಸಾಗರ ಕೋವಿಡ್ ನಂತರ ಕೇವಲ ಒಂದು ಅತೀತಕ್ಕೆ ಮಾರ್ಪಡುವ, ಗತಿಗೆ ನೂಕುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ನಮ್ಮ ಸಂವೇದನೆಗಳು ಮೊಟಕಾಗುತ್ತಿದ್ದು, ಆಯ್ಕೆಗಳು ಮೇಲ್ನೋಟಕ್ಕೆ ಸುಲಭವೆಂಬಂತೆ ಕಂಡುಬಂದರೂ, ಬೇರೆ ರೀತಿಯ ಆತ್ಮವಂಚನೆಗೆ ಒಡ್ಡಿಕೊಳ್ಳುತ್ತಿದ್ದೇವೆ. ಇಂತಹ ಸಂದಿಗ್ಧ ಕಾಲದಲ್ಲಿಯೇ ನಮಗೆ ಕಲೆಗಳ ಮಹತ್ವ ಅರಿವಾಗುವುದು ಎಂದು ವಿಮರ್ಷಕ ಟಿ.ಪಿ. ಅಶೋಕ ಅಭಿಪ್ರಾಯಪಟ್ಟರು. ತಾಲೂಕಿನ ಹೆಗ್ಗೋಡಿನಲ್ಲಿ ಶನಿವಾರದಿಂದ ಪ್ರಾರಂಭಗೊಂಡ ಕಲೆಗಳ ಸಂಗಡ ಮಾತುಕತೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಯಾವುದೇ ಕಲೆಯಲ್ಲೂ ನಮಗೆ ಸರಳ ಆಯ್ಕೆಗಳನ್ನು ಮಾಡಿಕೊಳ್ಳುವುದಕ್ಕೆ, ಬದುಕಿನ ಬಗ್ಗೆ ಸರಳವಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ಎಲ್ಲವನ್ನೂ ಸಂದಿಗ್ಧತೆಯಲ್ಲಿ, ಸಂಕೀರ್ಣತೆಯಲ್ಲಿ ಹಾಗೂ ಒಂದು ಸಮಗ್ರತೆಯಲ್ಲಿ ಕಾಣುವ ಒತ್ತಾಯವನ್ನು ಹೇರುತ್ತಿದೆ. ಅದು ನಮಗೆ ಎಲ್ಲವನ್ನೂ ಅವುಗಳ ನಿಜತ್ವದಲ್ಲಿ ನಮ್ಮ ನಮ್ಮ ಅನುಭವಗಳ ಹಿನ್ನೆಲೆಯಲ್ಲಿ ನಾವೇ ಪರೀಕ್ಷಿಸಿಕೊಳ್ಳುವ ಅವಕಾಶವನ್ನೂ ಒದಗಿಸಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಕಲೆಗಳ ಸಂಗಡ ಮಾತುಕತೆಯ ಮೂಲಕ ಪಠ್ಯಗಳ ಮೂಲಕ ಸೀಮಿತ ವಿವರಣೆಗಳ ಹೊರತಾಗಿಯೂ, ವಿಭಿನ್ನ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಗಮನಹರಿಸುತ್ತೇವೆ ಎಂದು ಹೇಳಿದರು. ನೀನಾಸಮ್ ಅಧ್ಯಕ್ಷ ಸಿದ್ಧಾರ್ಥ ಭಟ್, ಕಾರ್ಯದರ್ಶಿ ಶರತ್ ಬಾಬು, ರಂಗಕರ್ಮಿ ಅಕ್ಷರ, ನಿವೃತ್ತ ಪ್ರಾಧ್ಯಾಪಕ ಜಶವಂತ ಜಾಧವ್, ನಿರ್ದೇಶಕ ವೆಂಕಟರಮಣ ಐತಾಳ್, ರಂಗಕೇಂದ್ರದ ಪ್ರಾಂಶುಪಾಲ ಎಂ.ಗಣೇಶ, ಸಾಹಿತಿ ಜಯಂತ ಕಾಯ್ಕಿಣಿ, ರಂಗಕರ್ಮಿ ನಟರಾಜ್ ಹೊನ್ನವಳ್ಳಿ, ಕತೆಗಾರ ವಿವೇಕ ಶಾನಭಾಗ, ಸುಂದರ್, ರಂಗ ನಿರ್ದೇಶಕ ಇಕ್ಬಾಲ್ ಅಹಮದ್, ಕೆ.ಜಿ.ಕೃಷ್ಣಮೂರ್ತಿ, ಸಾಹಿತಿ ವಸುಧೇಂದ್ರ ಮೊದಲಾದ ಸಾಹಿತಿ, ಲೇಖಕರು, ವಿಮರ್ಶಕರು, ಕಲಾವಿದರು ಶಿಬಿರದಲ್ಲಿ ಉಪಸ್ಥಿತರಿದ್ದರು. ಶಿಬಿರದ ಮೊದಲ ದಿನ ಕೆ.ಜಿ.ಕೃಷ್ಣಮೂರ್ತಿ ನಿರ್ದೇಶನದ ತಿರುಗಾಟ ನಾಟಕದ ಹುಲಿಯ ನೆರಳು (ರಚನೆ: ಚಂದ್ರಶೇಖರ ಕಂಬಾರ) ಪ್ರಥಮ ಪ್ರದರ್ಶನಗೊಂಡಿತು. ಭಾನುವಾರ ಎಚ್.ಕೆ. ಶ್ವೇತಾರಾಣಿ ನಿರ್ದೇಶನದ ತಿರುಗಾಟ ನಾಟಕ ಆ ಲಯ ಈ ಲಯ (ಕನ್ನಡಕ್ಕೆ ನಟರಾಜ ಹೊನ್ನವಳ್ಳಿ) ಶಿವರಾಮ ಕಾರಂತ ರಂಗಮಂದಿರದಲ್ಲಿ ನಡೆಯಲಿದೆ. - - - -21ಖಶಾಘ1: ಹೆಗ್ಗೋಡಿನ ನೀನಾಸಂನಲ್ಲಿ ಕಲೆಗಳ ಸಂಗಡ ಮಾತುಕತೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸೂ.ರಂ. ಎಕ್ಕುಂಡಿ ಅವರ ಸಾಲುಗಳನ್ನು ನೀನಾಸಂ ವಿದ್ಯಾರ್ಥಿಗಳು ರೂಪಕದಲ್ಲಿ ಪ್ರದರ್ಶಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.