ಹುಬ್ಬಳ್ಳಿ:
ಇಲ್ಲಿನ ತುಳಜಾಭವಾನಿ ದೇವಸ್ಥಾನ ಸರ್ಕಲ್, ಅದರ ಹಿಂಭಾಗ ಹಾಗೂ ಮೂರುಸಾವಿರ ಮಠದ ಎದುರಿನ ರಸ್ತೆಗಳು ಚರಂಡಿ ನೀರಿನಿಂದ ತುಂಬಿ ಅಸಹನೀಯ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ದುರಸ್ತಿಗಾಗಿ ಎರಡು ತಿಂಗಳ ಹಿಂದೆಯೇ ರಸ್ತೆ ಅಗೆದು ತಗ್ಗು ತೆಗೆಯಲಾಗಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಶುಕ್ರವಾರದ ಮಳೆಗೆ ಚರಂಡಿ ನೀರು ರಸ್ತೆಗೆ ಹರಿದ ಪರಿಣಾಮ ಶನಿವಾರವೂ ಜನರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಯಿತು.
ಕಮರಿಪೇಟೆ, ಹಳೇ ಹುಬ್ಬಳ್ಳಿಯ ಹೆಗ್ಗೇರಿ, ಲಿಂಗರಾಜನಗರ ಹಾಗೂ ಉಣಕಲ್ಲ ನಾಲಾಗಳು ತುಂಬಿ ಹರಿದ ಪರಿಣಾಮ ಸುತ್ತಮುತ್ತಲಿನ ನಿವಾಸಿಗಳು ತೊಂದರೆ ಅನುಭವಿಸಿದರು. ನಾಲಾಗಳಲ್ಲಿನ ಕಸ-ತ್ಯಾಜ್ಯ ನೀರಿನೊಂದಿಗೆ ಮನೆಗಳಿಗೆ ನುಗ್ಗಿದೆ. ಗೋಕುಲ್ ರಸ್ತೆ, ವಿದ್ಯಾನಗರ, ಅಕ್ಷಯ ಪಾರ್ಕ್, ಲಿಂಗರಾಜನಗರ, ನವನಗರ ಹಾಗೂ ಹಳೇ ಹುಬ್ಬಳ್ಳಿಯ ಈಶ್ವರ ದೇವಸ್ಥಾನ ರಸ್ತೆ ಸೇರಿದಂತೆ ಹಲವು ಕಡೆ ಮೊಣಕಾಲುದ್ದ ನೀರು ನಿಂತಿರುವುದು ಶನಿವಾರ ಕಂಡುಬಂದಿತು.ಶನಿವಾರ ಬೆಳಗ್ಗೆ ನೀರು ಇಳಿದರೂ ರಸ್ತೆಗಳ ಮೇಲೆ ಹೂಳು, ಪ್ಲಾಸ್ಟಿಕ್ ಹಾಗೂ ಕಸ ಉಳಿದಿತ್ತು. ದುರ್ವಾಸನೆಯ ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಇಲ್ಲಿನ ನವನಗರ, ಶಾಂತಿನಗರ ಹಾಗೂ ಅನ್ನದಾನೇಶ್ವರ ನಗರದ ತಗ್ಗು ಪ್ರದೇಶಗಳ 30ಕ್ಕೂ ಹೆಚ್ಚು ಮನೆಗಳಿಗೆ ಶುಕ್ರವಾರ ಸುರಿದ ಮಳೆ ನೀರು ನುಗ್ಗಿದೆ. ನಿವಾಸಿಗಳು ರಾತ್ರಿಯಿಡೀ ನೀರು ಹೊರಹಾಕುವಲ್ಲಿ ನಿರತರಾಗಿದ್ದರು. ಮನೆಗಳಲ್ಲಿನ ಅಡುಗೆ ಸಾಮಗ್ರಿ, ಬಟ್ಟೆಬರೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ ಎಂದು ಅಳಲು ತೋಡಿಕೊಂಡರು. ಇನ್ನು ಹೊಸೂರು ವೃತ್ತದ ಹತ್ತಿರದ ಕಾಟನ್ ಮಾರ್ಕೆಟ್‌ನಲ್ಲಿರುವ ಸಾಂಸ್ಕೃತಿಕ ಭವನದ ಕೆಳಗೆ ಮಳೆನೀರು, ಕೆಸರು ನುಗ್ಗಿದೆ.
ಶುಕ್ರವಾರದ ಧಾರಾಕಾರ ಮಳೆಗೆ ತಾಲೂಕಿನ ಶಿರಗುಪ್ಪಿ ಗ್ರಾಮದ ತುಳಸವ್ವ ಚನ್ನದಾಸರ ಅವರ ಮನೆ ಶನಿವಾರ ಬೆಳಗ್ಗೆ ಭಾಗಶಃ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು, ಕುಟುಂಬದ ಸದಸ್ಯರಿಗೆ ಬೇರೆಡೆ ವಾಸಿಸುವಂತೆ ಸೂಚಿಸಿ, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.