ರಜೆಗೆ ಬಂದ ಯೋಧ ಪಂಜಾಬ್‌ ಗಡಿಯತ್ತ

KannadaprabhaNewsNetwork | Published : May 11, 2025 1:20 AM
Follow Us

ಸಾರಾಂಶ

20 ದಿನಗಳ ಹಿಂದೆ ತಮ್ಮ ದೊಡ್ಡಪ್ಪ ಮೃತಪಟ್ಟ ಹಿನ್ನೆಲೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಒಂದು ತಿಂಗಳು ರಜೆ ಹಾಕಿ ಬಂದಿದ್ದರು. ಇದೀಗ ಪಾಕಿಸ್ತಾನ-ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಪರಿಣಾಮ ಯೋಧರಿಗೆ ನೀಡಿರುವ ರಜೆಯನ್ನು ರದ್ದುಗೊಳಿಸಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದ್ದರಿಂದ ಶುಕ್ರವಾರ ರಾತ್ರಿ ಪಂಜಾಬ್‌ ಗಡಿಯತ್ತ ಪ್ರಯಾಣ ಬೆಳೆಸಿದರು.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ದೊಡ್ಡಪ್ಪ ತೀರಿಕೊಂಡಿದ್ದರಿಂದ ಒಂದು ತಿಂಗಳು ರಜೆ ಮೇಲೆ ಬಂದಿದ್ದ ಪಟ್ಟಣದ ಬಿಎಸ್ಎಫ್ ಯೋಧ ವೀರೇಶ ಹಿರೇಮನಿ ಆಪರೇಶನ್‌ ಸಿಂದೂರ ಆರಂಭವಾಗುತ್ತಿದ್ದಂತೆ ರಜೆ ರದ್ದುಪಡಿಸಿ ಮರಳಿ ಪಂಜಾಬ್‌ ಗಡಿಯತ್ತ ತೆರಳಿದ್ದಾರೆ.

20 ದಿನಗಳ ಹಿಂದೆ ತಮ್ಮ ದೊಡ್ಡಪ್ಪ ಮೃತಪಟ್ಟ ಹಿನ್ನೆಲೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಒಂದು ತಿಂಗಳು ರಜೆ ಹಾಕಿ ಬಂದಿದ್ದರು. ಇದೀಗ ಪಾಕಿಸ್ತಾನ-ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಪರಿಣಾಮ ಯೋಧರಿಗೆ ನೀಡಿರುವ ರಜೆಯನ್ನು ರದ್ದುಗೊಳಿಸಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದ್ದರಿಂದ ಶುಕ್ರವಾರ ರಾತ್ರಿ ಪಂಜಾಬ್‌ ಗಡಿಯತ್ತ ಪ್ರಯಾಣ ಬೆಳೆಸಿದರು.

ಆತಂಕದ ನಡುವೆ ಸಂತಸ:

ಯೋಧ ವೀರೇಶ ಪತ್ನಿ ಪದ್ಮಾವತಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಮೂವರು ಮಕ್ಕಳನ್ನು ಹೊಂದಿದ್ದಾರೆ. ಯೋಧನಿಗೆ ಇ-ಮೇಲ್ ಮೂಲಕ ಸರ್ಕಾರ ರಜೆ ರದ್ದುಗೊಳಿಸಿರುವ ವಿಷಯವನ್ನು ಮನೆಯಲ್ಲಿ ತಿಳಿಸಿ ಕೆಲಸಕ್ಕೆ ತೆರಳಲು ಹೊರಟು ನಿಂತಾಗ ಮನೆಯಲ್ಲಿ ಒಂದು ರೀತಿಯ ಆತಂಕದ ನಡುವೆ ಸಂತಸವೂ ಏರ್ಪಟ್ಟಿತ್ತು. ಈ ಎರಡರ ನಡುವೆ ಯೋಧನನ್ನು ಮನೆಯಿಂದ ಕುಟುಂಬಸ್ಥರು ಬೀಳ್ಕೋಟ್ಟರು. 13 ವರ್ಷದ ಮಗ ಶ್ರೀನಿವಾಸ ತಂದೆಯ (ಯೋಧ) ಕೆನ್ನೆಗೆ ಮುತ್ತನಿಟ್ಟು ನಗುನಗುತ್ತಲೆ ಹೋಗಿ ಬನ್ನಿ ಅಪ್ಪಾಜಿ ಎಂದು ಹೇಳಿದನು.

ಯೋಧನ ಸ್ನೇಹಿತರಾದ ಶ್ರಮಿಕ ವರ್ಗದ ಗೆಳೆಯರ ಬಳಗದಿಂದ ಪ್ರತಿ ಬಾರಿಯು ಅತ್ಯಂತ ಸಂತೋಷದಿಂದ ಕಳುಹಿಸುತ್ತಿದ್ದೆವು. ಆದರೆ, ಈ ಸಲ ಮನಸ್ಸಲ್ಲಿ ಆತಂಕ, ದುಗುಡದಿಂದ ಸ್ನೇಹಿತನನ್ನು ಪಂಜಾಬ್ ಗಡಿಯತ್ತ ಕಳಿಸಿದೆವು ಎಂದು ರವೀಂದ್ರ ಬಾಕಳೆ, ಮಹೇಶ ಹಿರೇಮಠ, ಸುಭಾಷ್ ಅಭಿಪ್ರಾಯ ಹಂಚಿಕೊಂಡರು.

ಬಸವೇಶ್ವರ ವೃತ್ತದಲ್ಲಿ ಸನ್ಮಾನ:

ಪಟ್ಟಣದ ನಿವಾಸಿಗಳು, ದೇಶಾಭಿಮಾನಿಗಳು ಯೋಧನನ್ನು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸನ್ಮಾನಿಸಿ ಹಣೆಗೆ ಸಿಂದೂರ ಹಚ್ಚಿ ಜೈಕಾರ, ಜಯಘೋಷ ಕೂಗಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಕೆ. ಮಹೇಶ, ವಜೀರಲಿ ಗೋನಾಳ, ಬಸನಗೌಡ, ಅನಿಲ ಆಲಮೇಲ, ರವೀಂದ್ರ ಬಾಕಳೆ, ಶರಣಪ್ಪ ಆಡೂರು, ರಾಜು ಜಿಗಜಿನ್ನಿ, ರಮೇಶ ಕೊನಸಾಗರ, ದೊಡ್ಡಪ್ಪ ಗೋನಾಳ, ಪರಶುರಾಮ ನಾಗರಾಳ, ಕಿರಣ ಜ್ಯೋತಿ, ರಾಚಪ್ಪ ಇದ್ದರು.ದೊಡ್ಡಪ್ಪ ಮೃತಪಟ್ಟ ಹಿನ್ನೆಲೆಯಲ್ಲಿ ರಜೆಗೆ ಬಂದಿದ್ದೆ. ಇದೀಗ ರಜೆ ರದ್ದುಗೊಳಿಸಿ ಸೈನ್ಯಕ್ಕೆ ಬರುವಂತೆ ಆದೇಶಿಸಿದ್ದರಿಂದ ಪಂಜಾಬ್‌ ಗಡಿಯತ್ತ ತೆರಳುತ್ತಿದ್ದೇನೆ. ಭಾರತ ಮಾತೆಯ ಸೇವೆ ಸಲ್ಲಿಸಲು ಹೆಮ್ಮೆಯಾಗುತ್ತಿದೆ.

ವೀರೇಶ ಹಿರೇಮನಿ ಬಿಎಸ್ಎಫ್ ಯೋಧ ಕುಷ್ಟಗಿಸುಮಾರು 28 ವರ್ಷಗಳಿಂದ ದೇಶ ಸೇವೆ ಮಾಡುತ್ತಿದ್ದು ಈಗ ಆಪರೇಷನ್ ಸಿಂದೂರ ಆರಂಭವಾಗಿದ್ದು ರಜೆಯ ಮೇಲಿದ್ದ ಎಲ್ಲ ಸೈನಿಕರನ್ನು ವಾಪಸ್‌ ಬರುವಂತೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಮರಳಿ ಕರ್ತವ್ಯಕ್ಕೆ ತೆರಳುತ್ತಿದ್ದಾರೆ.

ಪದ್ಮಾವತಿ ಯೋಧನ ಪತ್ನಿ