ಯುವಪೀಳಿಗೆಯಲ್ಲಿ ದೇಶಪ್ರೇಮ ಮೂಡಿಸಲು ನೃತ್ಯ ರೂಪಕ

KannadaprabhaNewsNetwork |  
Published : Jul 11, 2024, 01:31 AM IST
10ಡಿಬ್ಲೂಡಿ5ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಪ್ರಾಂಶುಪಾಲರ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಹಾಗೂ ಬಿಇಓಗಳ ಸಭೆ.  | Kannada Prabha

ಸಾರಾಂಶ

ಆ. 15ರ ಸ್ವಾತಂತ್ರೋತ್ಸವವನ್ನು ವಿನೂತನ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಅರಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಐದಾರು ಸ್ವತಂತ್ರ ಹೋರಾಟಗಳ ಸನ್ನಿವೇಶ ಕುರಿತಾದ ನೃತ್ಯ ಹಾಗೂ ದೃಶ್ಯ ರೂಪಕ ಆಯೋಜಿಸಲಾಗುತ್ತಿದೆ.

ಧಾರವಾಡ:

ಯುವಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ದೇಶಭಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಅಖಂಡ ಧಾರವಾಡ ಜಿಲ್ಲೆ ಹಾಗೂ ಸುತ್ತಲಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿಶೇಷ ನೃತ್ಯ ರೂಪಕಗಳನ್ನು ಆ. 15ರಂದು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜರುಗಿದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಪ್ರಾಂಶುಪಾಲರ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಹಾಗೂ ಬಿಇಒಗಳ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಆ. 15ರ ಸ್ವಾತಂತ್ರೋತ್ಸವವನ್ನು ವಿನೂತನ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಅರಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಐದಾರು ಸ್ವತಂತ್ರ ಹೋರಾಟಗಳ ಸನ್ನಿವೇಶ ಕುರಿತಾದ ನೃತ್ಯ ಹಾಗೂ ದೃಶ್ಯ ರೂಪಕ ಆಯೋಜಿಸಲಾಗುವುದು ಎಂದರು.

ಸ್ಥಳೀಯ ಸ್ವತಂತ್ರ ಹೋರಾಟಗಾರರ ಕುರಿತು ಜಾಗೃತಿ ಮೂಡಿಸುವ ಘಟನೆಗಳು, ವ್ಯಕ್ತಿ ಹೋರಾಟ ಕುರಿತು ನೃತ್ಯ ಅಥವಾ ದೃಶ್ಯ ರೂಪಕಗಳನ್ನು ತಾಲೂಕಾವಾರು ಹಮ್ಮಿಕೊಂಡು, ಆಯ್ಕೆಯಾದ ತಂಡಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಗುವುದು. ವಿಜೇತರಿಗೆ ಉಸ್ತುವಾರಿ ಸಚಿವರಿಂದ ಬಹುಮಾನ ವಿತರಿಸಲಾಗುವುದೆಂದರು. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಬಿಇಒಗಳು ಕಾರ್ಯಪ್ರರ್ವತ್ತರಾಗುವಂತೆ ತಿಳಿಸಿದರು.

ಬಾಲಬಳಗ ಶಾಲೆಯ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ಚರಕವು ಅಸ್ತ್ರವಾಗಿದ್ದು ಅಹಿಂಸೆಯ ಸಂಕೇತವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಬಳಗದ ವಿದ್ಯಾರ್ಥಿಗಳಿಂದ ಚರಕ ನೂಲುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದೆಂದು ತಿಳಿಸಿದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಜಿಲ್ಲೆಯಲ್ಲಿ ಅನೇಕ ಜಾನಪದ ಹಾಗೂ ರಂಗಕಲಾವಿದರಿದ್ದು ಚಿಕ್ಕ ಚಿಕ್ಕ ಬರಹ ಬಳಸಿ ಸ್ವಾತಂತ್ರ್ಯ ಚಳವಳಿಯ ಬಗ್ಗೆ ರೂಪಕ ಹಮ್ಮಿಕೊಳ್ಳುವ ಸಲಹೆ ನೀಡಿದರು.

ಹಿರಿಯ ಕಲಾವಿದರಾದ ಡಾ. ವಿಶ್ವೇಶ್ವರಿ ಹಿರೇಮಠ, ದೇಶಭಕ್ತಿ ಗೀತೆಗಳನ್ನು ಬಳಸಿ ವೈವಿಧ್ಯಮಯ ವೇಷಭೂಷಣಗಳ ನೃತ್ಯ ರೂಪಕಗಳನ್ನು ಜಿಲ್ಲೆಯಾದ್ಯಂತ ಆಯೋಜಿಸಬಹುದು ಎಂದು ಅಭಿಪ್ರಾಯಪಟ್ಟರು. ರಂಗಾಯಣ ಕಲಾವಿದ ನದಾಫ್, ನೂರಾರು ವಿದ್ಯಾರ್ಥಿಗಳ 20 ನಿಮಿಷಗಳ ಸ್ವಾತಂತ್ರ್ಯ ಹೋರಾಟದ ನೃತ್ಯ ರೂಪಕ ಏರ್ಪಡಿಸಬಹುದೆಂದು ತಿಳಿಸಿದರು.

ಡಿಡಿಪಿಐ ಎಸ್.ಎಸ್. ಕೆಳದಿಮಠ, ನರಗುಂದ ಬಂಡಾಯ, ಅದರಗುಂಚಿ ಶಂಕರ ಗೌಡ್ರ, ಅಂದಾನಪ್ಪ ದೊಡ್ಡಮೇಟಿ, ಮೈಲಾರ ಮಹಾದೇವ, ಮುಂಡರಗಿ ಭೀಮರಾಯ ಸೇರಿದಂತೆ ಹಲವರು ಹೋರಾಟದ ಚಳವಳಿ ಆಧಾರಿತ ರೂಪಕ ಹಮ್ಮಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಧಾರವಾಡದ ಶಾಲಾ-ಕಾಲೇಜು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಲಾವಿದರ ಸಭೆಯನ್ನು ಜು. 12ರಂದು ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗುವುದೆಂದು ತಿಳಿಸಿದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಿಯು ಉಪನಿರ್ದೇಶಕ ಸುರೇಶ ಕೆ.ಪಿ. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!