ಬಿ.ರಾಮಪ್ರಸಾದ್ ಗಾಂಧಿ ಹರಪನಹಳ್ಳಿ
ಅಂತಹ ವಿಶೇಷ ಆಚರಣೆ ನಗರದ ಗೌಳೇರ ಬೀದಿಯಲ್ಲಿ ಮಂಗಳವಾರ ಮದ್ಯಾಹ್ನ ಪಾಡ್ಯದ ದಿನ ಅತ್ಯಂತ ವಿಜೃಂಬಣೆಯಿಂದ ಜರುಗಿತು. ಎಲ್ಲ ಹಬ್ಬಗಳಿಗಿಂತಲೂ ದೀಪಾವಳಿ ಹಬ್ಬ ಬಂತೆಂದರೆ ನಗರದ ಗೌಳಿ ಸಮುದಾಯಕ್ಕೂ ಅವರ ಎಮ್ಮೆಗಳಿಗೂ ಎಲ್ಲಿಲ್ಲದ ಸಂಭ್ರಮ. ಎಮ್ಮೆಗಳನ್ನು ಸಾಕುವುದು, ಹಾಲನ್ನು ಮಾರಿ ಜೀವನ ಸಾಗಿಸುವುದು ಗೌಳಿಗರ ಮೂಲ ವೃತ್ತಿ. ಆದರೆ ಪ್ರತಿ ವರ್ಷ ದೀಪಾವಳಿಯ ಮೂರನೇ ದಿನ ಅಂದರೆ ಬಲಿಪ್ರತಿಪದೆಯ ದಿನ ಎಲ್ಲ ಕೆಲಸಗಳಿಗೆ ಬಿಡುವು ಮಾಡಿಕೊಂಡು ಎಮ್ಮೆಗಳಿಗೆ ಸ್ನಾನ ಮಾಡಿಸಿ ಸಂಪ್ರದಾಯ ಆಚರಿಸುತ್ತಾರೆ, ನಗರದಲ್ಲಿ ಅಂದಾಜು 40-50 ಗೌಳಿ ಕುಟುಂಬಗಳು ಇವೆ, ದೀಪಾವಳಿ ಹಬ್ಬದ ಮೂರನೇ ದಿನ ಇಲ್ಲಿಯ ಗೌಳೀರ ಓಣಿಯಲ್ಲಿ ಎಲ್ಲರೂ ಬೆಳಗ್ಗೆ ಹಟ್ಟಿ ಹಾಕಿ, ಪಾಂಡವರ ಪೂಜೆ ನೆರವೇರಿಸಿದರು. ನಂತರ ಎಮ್ಮೆಗಳ ಕೊರಳಿಗೆ ಗೆಜ್ಜೆ ಕಟ್ಟಿ ಕೋಡುಗಳಿಗೆ ಬಣ್ಣ ಹಚ್ಚಿ ಹೂವು ಮೂಡಿಸಿ ಮೈಗೆ ಬಣ್ಣ ಹಚ್ಚಿ, ಎಮ್ಮೆಗಳನ್ನು ಸುಂದರವಾಗಿ ಅಲಂಕರಿಸಿದ್ದರು. ಪ್ರತಿಯೊಂದು ಎಮ್ಮೆಗೂ ಗುಲ್ಲು(ಬರೆ) ಹಾಕಿ ಅವುಗಳನ್ನು ನಗರದ ನಗರಸಭಾ ಕಚೇರಿಯಿಂದ ತಾಯಮ್ಮನ ಹುಣಸೆಮರ ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಿಸುತ್ತಾರೆ. ಈ ವೇಳೆ ಹುಡುಗರು ಪಟಾಕಿ ಸಿಡಿಸುತ್ತಾರೆ. ತಮ್ಮನ್ನು ಸಾಕಿ ಪ್ರತಿ ದಿನ ಬೇಕು ಬೇಡಗಳನ್ನು ನೋಡುವ ಮಾಲಿಕರು ಎತ್ತ ಹೋಗುತ್ತಾರೆ, ಅತ್ತ ಎಮ್ಮೆಗಳು ಓಡುತ್ತವೆ.
ಅದರಲ್ಲೂ ಕಂಬಳಿ ಕಂಡರೆ ಅತ್ತ ಜಾಸ್ತಿ ಹೋಗುತ್ತವೆ, ಈ ದಿನ ಎಮ್ಮೆಗಳು ಅಂಗಡಿ ಮುಂಗ್ಗಟ್ಟು ಎಲ್ಲೆಂದರಲ್ಲಿ ಹೋಗಬಹುದು, ಅವುಗಳನ್ನು ಯಾರೂ ತಡೆಯುವುದಿಲ್ಲ, ಈ ವಿಶಿಷ್ಟತೆ ಕಣ್ತುಂಬಿಕೊಳ್ಳಲು ಬಹಳಷ್ಟು ಜನರು ಗೌಳೀರ ಬೀದಿಯಲ್ಲಿ ಸೇರಿದ್ದರು.ಬನ್ನಿಮರಕ್ಕೆ ಬೈಟೆಕ್ : 1 ರಿಂದ 2 ತಾಸು ಈ ರೀತಿ ಎಮ್ಮೆಗಳನ್ನು ಓಡಿಸಿದ ನಂತರ ಸ್ಥಳೀಯ ಕೋಟೆ ಆಂಜನೇಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಇರುವ ಬನ್ನಿಮರಕ್ಕೆ ನೂರಾರು ಎಮ್ಮೆ ಓಡಿಸಿಕೊಂಡು ಹೋಗುತ್ತಾರೆ, ಎಲ್ಲಿ ಎಮ್ಮೆಗಳು ಬನ್ನಿ ಮರಕ್ಕೆ ಮಂಡಿಯೂರಿ ನಮಸ್ಕಾರ ಮಾಡುತ್ತವೆ, ಇದಕ್ಕೆ ಬೈಟೆಕ್ ಎನ್ನುತ್ತಾರೆ, ಇದಾದ ನಂತರ ತಾವು ಪೂಜೆ ಸಲ್ಲಿಸಿ (ಗೌಳಿ ಸಮುದಾಯ) ಎಮ್ಮೆಗಳನ್ನು ಮೇಯಲು ಬಿಡುತ್ತಾರೆ. ಹಿಂದೆ ಕೌರವರು ವಿರಾಟ ರಾಯನ ಎಲ್ಲ ದನಗಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆ, ಪಾಂಡವರ ಅಜ್ಞಾತವಾಸ ಮುಗಿದ ದಿನ ಇದು. ಅಪಹರಿಸಿಕೊಂಡು ಹೋದ ದನಗಳನ್ನು ಅರ್ಜುನ ಬಿಡಿಸಿಕೊಂಡು ಬರುತ್ತಾನೆ, ಅದರ ನೆನಪಿಗೋಸ್ಕರ ಪ್ರತಿ ವರ್ಷ ಈ ಆಚರಣೆ ಮಾಡುತ್ತಾ ಬರುತ್ತಿದ್ದೇವೆ ಎಂದು ಗೌಳಿ ಸಮುದಾಯದ ಹಿರಿಯರು ಹೇಳುತ್ತಾರೆ.