ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಿಎಸ್‌ಐ ಕ್ರೈಸ್ಟ್ ಚರ್ಚಿನ ವತಿಯಿಂದ ಭಾನುವಾರ ಆಯೋಜಿಸಿದ್ದ ಕರ್ಜೂರ ಗರಿಗಳ ಹಬ್ಬ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ಶಾಂತಿಧೂತ ಏಸುಕ್ರಿಸ್ತನು ಯುದ್ಧದ ಸಂಕೇತವಾದ ಕುದುರೆಯನ್ನು ಏರದೆ ಶಾಂತಿಗೆ ಹೆಸರಾದ ಕತ್ತೆಯ ಮರಿಯನ್ನು ಏರಿ ಕುಳಿತು ಜೆರೋಸಲೇಮನ್ನು ಶಾಂತಿ ಧೂತನಾಗಿ ಪ್ರವೇಶ ಮಾಡಿದ್ದನು ಎಂದರು.
ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಡೆದಿರುವ ಈ ಘಟನೆಯನ್ನು ಇಂದಿಗೂ ಸಹ ಪ್ರಪಂಚದ ಎಲ್ಲಾ ದೇಶಗಳಲ್ಲೂ ಕರ್ಜೂರದ ಗರಿಗಳ ಹಬ್ಬ ಅಥವಾ ಫಾಮ್ ಸಂಡೆ ಎಂದು ಆಚರಿಸುತ್ತಾ ಬರಲಾಗುತ್ತಿದೆ, ಈ ಬಾರಿಯ ಪ್ರಾರ್ಥನೆಗಳಲ್ಲಿ ಪ್ರಪಂಚದಲ್ಲಿ ತಲೆದೂರಿರುವ ಅಶಾಂತಿ ತೊಲಗಿ ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು ಎಂದು ಸಭಾಪಾಲಕರಾದ ಘನ ಪ್ರವೀಣ್ ತಿಳಿಸಿದರು.ಕರ್ಜೂರ ಗರಿಗಳ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಭಾನುವಾರ ಆರಂಭಗೊಂಡಿದೆ. ಏಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರೋಸಲೇಮ್ ಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು ‘ಆಲಿವ್’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರ ಮಾಡಿ ಕೊಂಡಿದ್ದರೆಂದು ಬೈಬಲ್ ಉಲ್ಲೇಖಿಸಿದೆ. ಇದರ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಭಾನುವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಭಾನುವಾರ ಬಲಿ ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್ ಆವರಣದಲ್ಲಿ ಆಶೀರ್ವಚಿಸಿ ಬಳಿಕ ಅವುಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ ಕ್ರೈಸ್ತ ಬಾಂಧವರು, ಏಸು ಕ್ರಿಸ್ತರಿಗೆ ಜೈಕಾರ ಕೂಗುತ್ತಾ ಚರ್ಚ್‌ನ ಒಳಗೆ ಪ್ರವೇಶಿಸಿದರು. ನಂತರ ಏಸು ಕ್ರಿಸ್ತರನ್ನು ಶಿಲುಬೆಗೇರಿಸುವ ಶಿಕ್ಷೆ ವಿಧಿಸುವಲ್ಲಿಂದ ಹಿಡಿದು ಅವರು ಶಿಲುಬೆಗೇರಿ ಅಲ್ಲಿ ಮರಣವನ್ನಪ್ಪಿ, ದೇಹವನ್ನು ಸಮಾಧಿ ಮಾಡುವಲ್ಲಿ ತನಕದ ಕಥಾನಕವನ್ನು ಬೈಬಲ್‌ನಿಂದ ವಾಚಿಸಲಾಯಿತು. ಬಳಿಕ ಧರ್ಮಗುರುಗಳಿಂದ ಪ್ರವಚನ ನಡೆಯಿತು.
ಇದೇ ಸಂದರ್ಭದಲ್ಲಿ ಚರ್ಚಿನ ಮಕ್ಕಳು ಏಸು ಸ್ವಾಮಿ ಕತ್ತೆಯನ್ನು ಏರಿಬರುವ, ಏಸು ಕ್ರಿಸ್ತನು ಶಿಲುಬೆಯನ್ನು ಹೊತ್ತು ಸಾಗುವುದು, ಅವರನ್ನು ಹಿಂಬಾಲಿಸುವ ಏಸುವಿನ ಅನುಯಾಯಿ ಪಾತ್ರಗಳ ವೇಷಭೂಷಣಗಳನ್ನು ತೊಟ್ಟು ಸಾಗಿದ ದೃಶ್ಯ ಜನರ ಮನಸೂರೆಗೊಂಡಿತು.