ಒತ್ತಡದ ಕರ್ತವ್ಯದ ನಡುವೆ ಪೊಲೀಸರಿಗೆ ಕ್ರೀಡಾಸಂಭ್ರಮ

KannadaprabhaNewsNetwork |  
Published : Nov 13, 2026, 02:00 AM IST
ಹುಬ್ಬಳ್ಳಿ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ಮೂರು ದಿನಗಳ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಧಾರವಾಡ ಜಿಪಂ ಸಿಇಒ ಭುವನೇಶ ಪಾಟೀಲ ಚಾಲನೆ ನೀಡಿದರು. | Kannada Prabha

ಸಾರಾಂಶ

ನಿರಂತರ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಚಟುವಟಿಕೆ ಅತ್ಯವಶ್ಯಕ. ಕ್ರೀಡೆಯಿಂದ ಒತ್ತಡ ನಿವಾರಣೆಯಾಗುವ ಜತೆಗೆ ತಂಡದ ಮನೋಭಾವ, ಶಿಸ್ತು ಮತ್ತು ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ.

ಹುಬ್ಬಳ್ಳಿ:

ನಿರಂತರ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಚಟುವಟಿಕೆ ಅತ್ಯವಶ್ಯಕ. ಕ್ರೀಡೆಯಿಂದ ಒತ್ತಡ ನಿವಾರಣೆಯಾಗುವ ಜತೆಗೆ ತಂಡದ ಮನೋಭಾವ, ಶಿಸ್ತು ಮತ್ತು ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ಗುರುವಾರ ಹು-ಧಾ ಪೊಲೀಸ್ ಆಯುಕ್ತಾಲಯದಿಂದ ಗುರುವಾರ ಆಯೋಜಿಸಿದ್ದ ಮೂರು ದಿನಗಳ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳಲ್ಲಿ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸಿರುವಂತೆ ತಮಗೂ ಬಾಲ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಆಸೆಯಿತ್ತು. ಪೊಲೀಸರ ಕೆಲಸಕ್ಕೆ ನಿಗದಿತ ಸಮಯದ ಮಿತಿಯಿಲ್ಲ. ಕಾನೂನು ಸುವ್ಯವಸ್ಥೆ, ಅಪರಾಧ ತಡೆ, ಬಂದೋಬಸ್ತ್ ಸೇರಿದಂತೆ ವಿವಿಧ ಕರ್ತವ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಇಂತಹ ಒತ್ತಡದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯ. ಪ್ರತಿದಿನ ಅರ್ಧ ಗಂಟೆಯಿಂದ ಒಂದು ಗಂಟೆ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ ಎಂದರು.

ಕ್ರೀಡೆ ಕೇವಲ ಗೆಲುವಿಗಾಗಿ ಮಾತ್ರವಲ್ಲ. ತಂಡವಾಗಿ ಕೆಲಸ ಮಾಡುವ ಗುಣ, ಶಿಸ್ತು, ನಾಯಕತ್ವ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುತ್ತದೆ. ಪುರುಷ ಸಿಬ್ಬಂದಿಯಂತೆ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕೆಲಸದ ಒತ್ತಡ ಬದಿಗಿಟ್ಟು ಉತ್ಸಾಹದಿಂದ ಭಾಗವಹಿಸಬೇಕು. ಈ ಹಿಂದೆ ಎರಡು ದಿನ ನಡೆಯುತ್ತಿದ್ದ ಕ್ರೀಡಾಕೂಟವನ್ನು ಈ ಬಾರಿ ಮೂರು ದಿನಗಳಿಗೆ ವಿಸ್ತರಿಸಿರುವುದು ಸಂತಸದ ಸಂಗತಿ. ಸೋಲು-ಗೆಲುವು ಲೆಕ್ಕಿಸದೆ ಎಲ್ಲರೂ ಕ್ರೀಡಾಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಪೊಲೀಸರ ಕರ್ತವ್ಯ ಅತ್ಯಂತ ಒತ್ತಡದಿಂದ ಕೂಡಿದ್ದು, ದೈಹಿಕ ಮತ್ತು ಮಾನಸಿಕವಾಗಿ ಸದಾ ಚುರುಕಾಗಿರುವುದು ಅಗತ್ಯ. ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ಯಾವಾಗಲೂ ಗೆಲುವು ಸಾಧ್ಯವಿಲ್ಲ. ಸೋಲು ಎದುರಾದಾಗ ಎದೆಗುಂದದೆ ಮುಂದಿನ ಸ್ಪರ್ಧೆಯಲ್ಲಿ ಮತ್ತೆ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದೇ ಪಾಠವನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.

ಸತತ ಮೂರು ಬಾರಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದ ಸಿಎಆರ್‌ನ ವೆಂಕಟೇಶ ನಾಯಕ ಕ್ರೀಡಾಜ್ಯೋತಿ ಬೆಳಗಿಸಿದರು. ಕ್ರೀಡಾಕೂಟದಲ್ಲಿ ಸಿಎಆರ್ ಹುಬ್ಬಳ್ಳಿ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಮಹಿಳಾ ವಿಭಾಗ, ಧಾರವಾಡ ಉಪವಿಭಾಗ ಹಾಗೂ ಸಂಚಾರ ವಿಭಾಗ ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.

ಸಿಎಆರ್ ಡಿಸಿಪಿ ವಿಜಯಕುಮಾರ ತಳವಾರ, ಎಸಿಪಿಗಳಾದ ಯು.ಬಿ. ಚಿಕ್ಕಮಠ, ಶಿವಪ್ರಕಾಶ ನಾಯಕ, ಯಾದವಾಡ, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶ್ರುತಿ ಎನ್.ಎಸ್. ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ನಿಖಿಲ್ ನಾಯಕ ಮತ್ತು ಪೂರ್ಣಿಮಾ ಕುಂಬಾರ ನಿರೂಪಿಸಿದರು. ಡಿಸಿಪಿ ಶ್ರುತಿ ಎನ್.ಎಸ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌