ಬಲಿಷ್ಠ ಕಾಂಗ್ರೆಸ್‌ ಪಕ್ಷ ಎದುರಿಸಲಾಗದ ಬಿಜೆಪಿ: ಸಿರಾಜ್‌ ಶೇಖ್‌

KannadaprabhaNewsNetwork | Published : Apr 13, 2024 1:02 AM

ಸಾರಾಂಶ

ಬಿಜೆಪಿಯ ಬಾಂಡ್‌ ಪೇಪರ್‌ ಖರೀದಿ ಮಾಡದಿರುವ ಮಾಲೀಕರಿಗೆ ಐಟಿ, ಇಡಿ, ಸಿಬಿಐನಂತಹ ಕಂಪನಿಗಳಿಂದ ಹೆದರಿಸಿ ಬಾಂಡ್‌ ಖರೀದಿ ಮಾಡುವಂತೆ ಮಾಡುತ್ತಿದ್ದಾರೆ.

ಹೂವಿನಹಡಗಲಿ: ದೇಶದ ಬಲಿಷ್ಠ ಕಾಂಗ್ರೆಸ್‌ ಪಕ್ಷವನ್ನು ಎದುರಿಸಲಾಗದೇ ಕೇಂದ್ರ ಸರ್ಕಾರ ಸಿಬಿಐ, ಇಡಿ, ಐಟಿ ಎಂಬ ಡಕಾಯಿತರ ಕಂಪನಿಗಳ ಮೂಲಕ ದಾಳಿ ಮಾಡಿಸಿ ಜೈಲಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿರಾಜ್‌ ಶೇಖ್‌ ವಾಗ್ದಾಳಿ ನಡೆಸಿದರು.

ಪಟ್ಟಣದ ದಾಕ್ಷಾಯಿಣಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದ ಮೋದಿ ಸರ್ಕಾರ ಸಾವಿರಾರು ಕೋಟಿ ಬಾಂಡ್‌ ಪೇಪರ್‌ ಹಗರಣ ಮಾಡಿದೆ. ಈ ಕುರಿತು ಯಾರು ಧ್ವನಿ ಎತ್ತುತ್ತಿಲ್ಲವೆಂದು ಹೇಳಿದರು.

ಬಿಜೆಪಿಯ ಬಾಂಡ್‌ ಪೇಪರ್‌ ಖರೀದಿ ಮಾಡದಿರುವ ಮಾಲೀಕರಿಗೆ ಐಟಿ, ಇಡಿ, ಸಿಬಿಐನಂತಹ ಕಂಪನಿಗಳಿಂದ ಹೆದರಿಸಿ ಬಾಂಡ್‌ ಖರೀದಿ ಮಾಡುವಂತೆ ಮಾಡುತ್ತಿದ್ದಾರೆ. ಇದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಕೈವಾಡ ಇದೆ. ಆದರೆ ಆ ಪಕ್ಷಗಳ ಬಳಿ ಈ ಡಕಾಯಿತರ ಕಂಪನಿಗಳಿಲ್ಲ ಎಂದರು.

ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ಇ.ತುಕಾರಾಂ ಮಾತನಾಡಿ, ಈ ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಪಕ್ಷದ ಋಣದಲ್ಲಿದ್ದೀರಿ. ಈ ಬಾರಿ ಮತ ಕೊಡಿ ಎಂದರು.

ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಾನು ಸೋತಿಲ್ಲ. ಆದರೆ ನಮ್ಮ ನಿರ್ಲಕ್ಷ್ಯ, ಅತಿಯಾದ ಆತ್ಮವಿಶ್ವಾಸದಿಂದ ಸೋತಿದ್ದೇನೆ. ಸ್ವಾರ್ಥಕ್ಕಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಿಮ್ಮನ್ನು ಹಾದಿ ತಪ್ಪಿಸುವವರ ಮಾತು ಕೇಳಿದರೆ ನೀವು ಖಂಡಿತ ಬೀದಿಗೆ ಬೀಳುತ್ತೀರಿ ಎಂದು ಹೇಳಿದರು.

ಬಳ್ಳಾರಿ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶಿವಯೋಗಿ ಮಾತನಾಡಿದರು. ಗಾದಿ ಲಿಂಗಪ್ಪ, ದೊಡ್ಡ ರಾಮಣ್ಣ, ಶಶಿಧರ ಪೂಜಾರ್‌, ಕೆ.ಎಸ್‌.ಎಲ.ಸ್ವಾಮಿ, ದೂದಾನಾಯ್ಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಕೋಡಿಹಳ್ಳಿ ಭೀಮಣ್ಣ, ಮಾರೆಣ್ಣ ಸೇರಿದಂತೆ ಇತರರಿದ್ದರು.

Share this article