ರಾಮನಗರ: ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದರೆ ಅದಕ್ಕೆ ಕಾರಣ ನಮ್ಮ ಸಶಕ್ತ ಸಂವಿಧಾನ. ಅದು ದೇಶದ ಆಡಳಿತ ಮತ್ತು ಜನರ ಚಿಂತನೆಯ ಚಾಲನ ಶಕ್ತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಭಾರತ ಬಗೆಬಗೆಯ ಭೌಗೋಳಿಕ ಪ್ರದೇಶಗಳ ತಾಣ, ಸರ್ವ ಧರ್ಮಗಳ ಸಂಗಮ, ವಿವಿಧ ಭಾಷೆಗಳ ತವರು, ವೈವಿಧ್ಯತೆಗೆ ಹೆಸರಾದ ಈ ನಾಡಿನಲ್ಲಿ ಅದರ ವಿಭಿನ್ನತೆಗಳೊಂದಿಗೆ ದೇಶದ ಏಕತೆ ಹಾಗೂ ಸಮಗ್ರತೆಗೆ ಹೆಸರಾಗಿದೆ. ಉಳಿಗಮಾನ್ಯ ಪದ್ಧತಿಯನ್ನು ಧಿಕ್ಕರಿಸಿ “ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು” ನೀತಿಯಡಿ ಆರೋಗ್ಯ, ಶಿಕ್ಷಣದ ಜೊತೆಗೆ ಸಮಾನ ಹಕ್ಕನ್ನು ಹಾಗೂ ಪ್ರತಿಯೊಬ್ಬರ ಕರ್ತವ್ಯವನ್ನು ನಮ್ಮ ಸಂವಿಧಾನ ರೂಪಿಸಿದೆ ಎಂದು ತಿಳಿಸಿದರು.
ಬಲಿಷ್ಠ ಸಂವಿಧಾನ ಇಲ್ಲದ ಕಾರಣಕ್ಕೆ ಇಂದಿಗೂ ಭಾರತದ ಜೊತೆಯಲ್ಲಿ ಸ್ವಾತಂತ್ರ್ಯ ಪಡೆದಂತಹ ನೆರೆಯ ರಾಷ್ಟ್ರಗಳಲ್ಲಿ ಅರಾಜಕತೆ ಉಂಟಾಗುತ್ತಿರುವುದು ನಾವು ನಿತ್ಯ ಕಾಣುತ್ತಿದ್ದೇವೆ. ಆದರೆ ಹಲವಾರು ಪ್ರಾಂತ್ಯಗಳು, ವಿವಿಧ ಧರ್ಮಗಳು, ವೈವಿಧ್ಯಮಯ ಸಂಸ್ಕೃತಿ ಒಳಗೊಂಡ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದು 76 ವರ್ಷಗಳಾಗಿದೆ. ದೇಶ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ. ಅದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ ಎಂದರೆ ಅತಿಶಯೋಕ್ತಿ ಎನಿಸಲಾರದು ಎಂದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭು, ಆತನ ಏಳ್ಗೆಯೇ ಸರ್ಕಾರದ ಆದ್ಯ ಕರ್ತವ್ಯ. ಇಂತಹ ವ್ಯವಸ್ಥೆಯಲ್ಲಿ 76 ವರ್ಷಗಳ ಸುಧೀರ್ಘ ಕಾಲ ಸಾಗಿ ಬಂದಿರುವ ನಾವು, ನಮ್ಮ ದೇಶದ ಪ್ರಗತಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ ಕಾಣಿಕೆಯನ್ನು ಮರೆಯಲಾಗದು. ಚುನಾಯಿತ ಪ್ರತಿನಿಧಿ ರಾಷ್ಟ್ರದ ಮುಖ್ಯಸ್ಥನಾಗಿದ್ದರೆ ಅಂತಹ ವ್ಯವಸ್ಥೆಯನ್ನು ಗಣರಾಜ್ಯ ಎನ್ನುತ್ತೇವೆ ಎಂದರು.
ಭಾರತದ ಸಂವಿಧಾನ ಸಾಮಾಜಿಕ ನ್ಯಾಯದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸುಭದ್ರತೆಯನ್ನು ಸಾಧಿಸಲು ಮಹತ್ವ ನೀಡಿದೆ. ವೈವಿದ್ಯತೆಯಲ್ಲಿ ಏಕತೆ (UNITY IN DIVERSITY) ಸಾಧಿಸಿರುವ ದೇಶ ನಮ್ಮದು. ನಮ್ಮ ಸರ್ಕಾರ ಸಂವಿಧಾನಕ್ಕೆ ಬದ್ಧವಾದ ಪ್ರತಿಯೊಬ್ಬರ ಮೂಲಭೂತ ಹಕ್ಕನ್ನು ಕಾಪಾಡುವಲ್ಲಿ ಕಟಿಬದ್ಧವಾಗಿದೆ ಎಂದು ಹೇಳಿದರು.ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ ಭಾವನೆ, ಸಹಬಾಳ್ವೆಯೊಂದಿಗೆ ಮುನ್ನಡೆಯೋಣ. ಇದು ಸರ್ವಜನಾಂಗದ ಶಾಂತಿಯ ತೋಟ. ಎಲ್ಲರೂ ಪರಸ್ಪರ ಪ್ರೀತಿ, ಸಹಬಾಳ್ವೆ, ಕೋಮು ಸೌಹಾರ್ದತೆ ಕಾಪಾಡುವುದರ ಜೊತೆಗೆ, ನವ ಭಾರತ ನಿರ್ಮಿಸೋಣ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ಸಮರ್ಪಕ ಅನುಷ್ಠಾನಗೊಂಡಿದ್ದು, ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು. ವಿಜೇತರಾದವರಿಗೆ ಸಚಿವರು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅಂಗಾಂಗ ದಾನ ಮಾಡಿದ ಕುಟುಂಬದವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎನ್.ನಟರಾಜು ಗಾಣಕಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕೆ. ರಾಜು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಗಂಗಾಧರ್, ನಗರಸಭಾಧ್ಯಕ್ಷ ಕೆ.ಶೇಷಾದ್ರಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್ , ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್ಪಿ ಶ್ರೀನಿವಾಸಗೌಡ, ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಎಸಿ ಬಿನೋಯ್ ಮತ್ತಿತರರು ಉಪಸ್ಥಿತರಿದ್ದರು.
26ಕೆಆರ್ ಎಂಎನ್ 1,2.ಜೆಪಿಜಿ1.ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಚಿವ ರಾಮಲಿಂಗಾರೆಡ್ಡಿ ಧ್ವಜಾರೋಹಣ ನೆರವೇರಿಸಿದರು.
2.ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.