ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಯಾವೊಂದು ಪಕ್ಷಗಳು ಕೂಡ ದೇಶದಲ್ಲಿ ಭಾಷಾ ನೀತಿ ಅಳವಡಿಸದ ಕಾರಣ ಇಲ್ಲಿರುವ ಭಾಷೆಗಳನ್ನು ಉಳಿಸಿ ಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊನೆಯ ದಿನ ನುಡಿ-ಗಡಿ-ಬರಹ: ಸಮಸ್ಯೆ-ಸವಾಲು-ಪರಿಹಾರದ ಕುರಿತು ಮಾತನಾಡಿದರು.ಹಿಂದಿ ಭಾಷೆಗೆ ಸಂವಿಧಾನದ ಬೆಂಬಲವಿದೆ. ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ 30 ಜನರ ಬಲಿಷ್ಠ ಸಮಿತಿ ಇದೆ. ವರ್ಷಕ್ಕೊಮ್ಮೆ ನಡೆಯುವ ಸಭೆಯಲ್ಲಿ ಈ ಸಮಿತಿ ಕೈಗೊಂಡ ತೀರ್ಮಾನ ನೇರವಾಗಿ ರಾಷ್ಟ್ರಪತಿಗಳ ಕೈಸೇರಿ ಅವರ ಹಸ್ತಾಕ್ಷರದೊಂದಿಗೆ ನೇರವಾಗಿ ಅನುಷ್ಠಾನವಾಗುತ್ತದೆ. ಆದರೆ ಕನ್ನಡ ಸಹಿತ ಬೇರೆ ಭಾಷೆಗಳಿಗೆ ಇಂತಹ ಸಮಿತಿ ಇಲ್ಲ. ಈ ಕಾರಣದಿಂದ ಹಿಂದಿ ಬೆಳೆಯುತ್ತಲೇ ಹೋದರೆ, ಬೇರೆ ಭಾಷೆಗಳು ನಶಿಸಿ ಹೋಗುವ ಭೀತಿ ಎದುರಾಗಿದೆ. ಈ ಕಾರಣದಿಂದ ಬಲಿಷ್ಠ ಭಾಷಾ ನೀತಿ ದೇಶದಲ್ಲಿ ಜಾರಿ ಆಗಲೇಬೇಕಾಗಿದೆ, ಆಗಮಾತ್ರ ಕನ್ನಡ ಸಹಿತ ಇತರ ಭಾಷೆಗಳು ಬೆಳೆಯ ಬಲ್ಲವು ಉಳಿಯ ಬಲ್ಲವು. ಇಲ್ಲದಿದ್ದರೆ ಪ್ರತಿ ಸಭೆಯಲ್ಲಿ, ಸಮ್ಮೇಳನಗಳಲ್ಲಿ ನಾವುಗಳು ಭಾಷೆಗಳ ಉಳಿವಿಗೆ ಗೊಗೆರೆಯುತ್ತಲೆ ಇರಬೇಕಾಗುತ್ತದೆ ಎಂದರು.ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಎಲ್.ಎನ್. ಮುಕುಂದರಾಜ ಮಾತನಾಡಿ, ಗಡಿ ಭಾಗಗಳಲ್ಲಿ ಸಾಹಿತ್ಯ ಭವನ ನಿರ್ಮಿಸುವ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಹಲುವು ಜಿಲ್ಲೆಗಳಲ್ಲಿ ಸಾಹಿತ್ಯ ಭವನ ನಿರ್ಮಾಣ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಪಟ್ಟಣದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೆ ಅಲ್ಲಿಯೂ ಸಾಹಿತ್ಯ ಭವನ ನಿರ್ಮಾಣ ಮಾಡಿ ಸಾಹಿತ್ಯ ಚಟುವಟಕೆ ನಡೆಸಲು ಸಾಧ್ಯವಾಗುತ್ತದೆ ಎಂದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ರಾಜ್ಯದ ಆರು ಗಡಿ ರಾಜ್ಯದ ಪ್ರದೇಶದ ಕನ್ನಡ ಶಾಲೆಗಳಲ್ಲಿ ಕನ್ನಡ ದಿನಪತ್ರಿಕೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಶಿಕ್ಷಕರಿಲ್ಲದ ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
ಶಿರಸಿಯ ಡಾ. ವೆಂಕಟೇಶ ನಾಯ್ಕ, ಅಂಕೋಲಾದ ವಿಠಲದಾಸ ಕಾಮತ್, ಕುಮಟಾದ ಡಾ. ಶ್ರೀಧರ ಗೌಡ ಉಪ್ಪಿನಗಣಪತಿ, ಕಾರವಾರದ ಜಿ.ಡಿ. ಮನೋಜೆ, ಕುಮಟಾದ ಚಿದಾನಂದ ಭಂಡಾರಿ, ಹಲಿಯಾಳದ ಮೇರಿ ಬಾವತೀಸ, ಜೋಯಿಡಾದ ಶುಭಾಶ ಗಾವಡಾ ವಿವಿಧ ಸಮಸ್ಯೆಗಳ ಕುರಿತು ವಿವರಿಸಿದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ರೋಹಿದಾಸ ನಾಯ್ಕ ಉಪಸ್ಥಿತರಿದ್ದರು.ರಾಜ್ಯ ಶಿಕ್ಷಣ ನೀತಿ ಜಾರಿ ಆಗಲಿ
1550 ಪುಟಗಳ ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿ 9 ತಿಂಗಳು ಕಳೆದಿವೆ, ಇದರ ಅವಧಿ ಮುಗಿಯುವ ಮುನ್ನ ಯಥಾವತ್ತಾಗಿ ಈ ಶಿಕ್ಷಣ ನೀತಿಯನ್ನು ಸರ್ಕಾರ ಅಳವಡಿಸಿದರೆ ಶೇ. 90ರಷ್ಟು ಕನ್ನಡ ಭಾಷೆಯ ಸಮಸ್ಯೆ ನಿವಾರಣೆ ಆಗಲಿದೆ ಎಂದು ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.