ರಾಷ್ಟ್ರಪ್ರೇಮದ ಶೈಕ್ಷಣಿಕ ವ್ಯವಸ್ಥೆಯಿಂದ ಸದೃಢ ದೇಶ ಕಟ್ಟಲು ಸಾಧ್ಯ: ಬಸವರಾಜ್ ಡೋಣೂರು

KannadaprabhaNewsNetwork | Published : Feb 11, 2025 12:48 AM

ಸಾರಾಂಶ

ರಾಷ್ಟ್ರಪ್ರೇಮ ಮೂಡಿಸುವ ಶೈಕ್ಷಣಿಕ ವ್ಯವಸ್ಥೆಯ ಅನುಷ್ಠಾನದಿಂದ ಮಾತ್ರ ದೇಶವನ್ನು ಸದೃಢವಾಗಿ ಕಟ್ಟಲು ಸಾಧ್ಯ.

ವಿಜಯ ಚಂದ್ರಶೇಖರ ಶಿಕ್ಷಣ ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ರಾಷ್ಟ್ರಪ್ರೇಮ ಮೂಡಿಸುವ ಶೈಕ್ಷಣಿಕ ವ್ಯವಸ್ಥೆಯ ಅನುಷ್ಠಾನದಿಂದ ಮಾತ್ರ ದೇಶವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಅಧ್ಯಯನಾಂಗದ ನಿರ್ದೇಶಕ ಬಸವರಾಜ್ ಡೋಣೂರು ಹೇಳಿದರು.

ಪಟ್ಟಣದ ಶ್ರೀ ವಿಜಯ ಚಂದ್ರಶೇಖರ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಕಟ್ಟುವ ಕೆಲಸ ಮೊದಲು ಮನೆಯಲ್ಲಿ ಆರಂಭವಾಗಬೇಕು. ಅದಕ್ಕಾಗಿ ಸಂಸ್ಕಾರ, ನೈತಿಕ ಪ್ರಜ್ಞೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಪಾಲಕರು ಮಕ್ಕಳಲ್ಲಿ ಮೂಡಿಸಬೇಕು. ಅದನ್ನು ಶಿಕ್ಷಕರು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರಪ್ರೇಮವನ್ನು ಮಕ್ಕಳಲ್ಲಿ ಮೂಡಿಸುವ ಅವಕಾಶ ಇರಬೇಕು. ಆಗ ಮಾತ್ರ ಭಾರತವನ್ನು ವಿಭಜಿಸುವ ದೇಶ ವಿರೋಧಿ ಚಟುವಟಿಕೆ ನಿಂತು ಹೋಗಿ ಬಲಿಷ್ಠ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದರು.

ನೂರಾರು ರಾಷ್ಟ್ರಪ್ರೇಮಿಗಳ ಬಲಿದಾನದ ಮೇಲೆ ದೇಶದ ಸ್ವಾತಂತ್ರ್ಯ ಅರಳಿದೆ. ಅದರ ಮಹತ್ವವನ್ನು ಹಾಗೂ ದೇಶದ ಮಹೋನ್ನತ ಸಂಸ್ಕೃತಿಯ ಕುರಿತು ಮಕ್ಕಳಲ್ಲಿ ಜಾಗೃತಿ ಕಡಿಮೆಯಾಗುತ್ತಿರುವುದು ವಿಷಾದನೀಯ. ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ಪಾಲಕರ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರ ಇಂತಹ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಸಿ.ವಿ. ಚಂದ್ರಶೇಖರ ಮಾತನಾಡಿ, ಅಂಕ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಜ್ಞಾನ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ನಮ್ಮ ಸಂಸ್ಕಾರ ಹಾಗೂ ರಾಷ್ಟ್ರಪ್ರೇಮವನ್ನು ಜಾಗ್ರತಗೊಳಿಸಲು ಜ್ಞಾನಾಧಾರಿತ ಶಿಕ್ಷಣ ಪದ್ಧತಿ ಅನುಷ್ಠಾನಗೊಳ್ಳಬೇಕು ಎಂಬ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಅವಿರತವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಸಿಇಒ ಜಗದೀಶ ಅಂಗಡಿ ಮಾತನಾಡಿ, ಓದುವಿಕೆಯಿಂದ ಮಾತ್ರ ನೈತಿಕ ಪ್ರಜ್ಞೆ ಹಾಗೂ ಸಂಸ್ಕಾರ ಜಾಗ್ರತವಾಗುತ್ತದೆ. ಸಂಸ್ಕೃತಿಯ ಉಳಿಯುವಿಕೆಗಾಗಿ ಪೂರಕ ವಾತಾವರಣ ನಿರ್ಣಾಯಕ. ಮಕ್ಕಳಲ್ಲಿ ಓದುವಿಕೆಯನ್ನು ಪ್ರಚೋದಿಸಲು ಹಾಗೂ ಪೂರಕ ವಾತಾವರಣ ನಿರ್ಮಿಸಲು ಅಭಯೋತ್ಸವ ಸಂಸ್ಕೃತಿ ಹಬ್ಬ ಆಯೋಜಿಸಲಾಗಿದೆ. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಉತ್ತೇಜಿಸಲು ಅಭಯೋಕ್ತಿ ಎಂಬ ವಾರ್ಷಿಕ ಸಂಚಿಕೆ ಪ್ರಕಟಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಗಣ್ಯರನ್ನು ಪೂರ್ಣಕುಂಭದೊಂದಿಗೆ ವೇದಿಕೆಗೆ ಕರೆ ತಂದರು. ಡೊಳ್ಳು ಬಾರಿಸುವ ಮೂಲಕ ಸಂಸ್ಕೃತಿ ಹಬ್ಬ ಉದ್ಘಾಟಿಸಲಾಯಿತು. ಸಿಂಗರಿಸಿದ ಮಣ್ಣಿನ ಮಡಕೆಯ ಒಳಗಿನಿಂದ ಹೊರ ತೆಗೆಯುವ ಮೂಲಕ ಅಭಯೋಕ್ತಿ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಜಾನಪದ, ಯೋಧ, ರೈತ, ತಂದೆ-ತಾಯಿ, ಗುರುಗಳು, ದೇಶ, ಕನ್ನಡ ಭಾಷೆ ಹಾಗೂ ಭಾರತ ತತ್ವಗಳ ಮೇಲೆ ಮಕ್ಕಳು ನಾಟಕ ಹಾಗೂ ನೃತ್ಯಗಳನ್ನು ಪ್ರದರ್ಶಿಸಿದರು.

ಎಸ್‌ವಿಸಿ ಶಾಲೆಗಳ ಶೈಕ್ಷಣಿಕ ನಿರ್ದೇಶಕ ಭೀಮರಾವ್ ಕುಲಕರ್ಣಿ, ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಪ್ರಶಾಂತ ಹಿರೇಮಠ ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ ಎಂ. ಉಪಸ್ಥಿತರಿದ್ದರು.

Share this article