ಕಡೂರು : ನೇರಳೇ ಹಣ್ಣು ಕೀಳಲು ಹೋಗಿ ವಿದ್ಯುತ್ ಶಾಕ್ ನಿಂದ 7ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರಂತ ಘಟನೆ ಶನಿವಾರ ನಡೆದಿದೆ ಬೀರೂರು ಸಮೀಪದ ಹುಲ್ಲೇಹಳ್ಳಿ ಗ್ರಾಮದ ತಿಮ್ಮೇಗೌಡ ಮತ್ತು ಲತಾ ರವರ ಪುತ್ರ ಆಕಾಶ್ (13) ಮೃತ ದುರ್ದೈವಿಯಾಗಿದ್ದಾನೆ.
ಕಡೂರು ತಾಲೂಕಿನ ಕುಪ್ಪಾಳು ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿ ಶಾಲೆ ಆವರಣದಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ನೇರಳೆ ಮರದಲ್ಲಿ ಹಣ್ಣು ಕೀಳಲು ಮರ ಹತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮರದಿಂದ ಜಾರಿ ಬೀಳುವಾಗ ಬಾಲಕ ಆಕಾಶ್ ವಿದ್ಯುತ್ ತಂತಿ ಹಿಡಿದಿದ್ದರಿಂದ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದು, ಶಾಲೆ ಸಿಬ್ಬಂದಿ ಕೂಡಲೇ ಬಾಲಕನನ್ನು ಕಡೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ನೀಡಲಾಯಿತು ಎಂದು ಕಡೂರು ಪಿಎಸ್ ಐ ಪವನ್ ತಿಳಿಸಿದರು. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದರು.
ಬಾಲಕನ ಪೋಷಕರ ರೋಧನ ಮುಗಿಲುಮುಟ್ಟಿತ್ತು. ಈ ನಡುವೆ ಬಾಲಕನ ಪೋಷಕರು ಹಾಗೂ ಹುಲ್ಲೇಹಳ್ಳಿ ಗ್ರಾಮಸ್ಥರು ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದ ವಸತಿ ಶಾಲೆಗೆ ತೆರಳಿ ಸಿಸಿಟಿವಿ ಪುಟೇಜ್ ವೀಕ್ಷಿಸಿ ತೆರಳಿದರು. ಪಿಎಸೈ ಪವನ್ ಕುಮಾರ್, ತಾಪಂ ಇಒ ಸಿ.ಆರ್.ಪ್ರವೀಣ್, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಡೂರು ಪೋಲೀಸ್ ಠಾಣೆ ಬಳಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರಕರಣದ ಮಾಹಿತಿ ನೀಡಿದಾಗ ನಿಯಮಾನುಸಾರ ಮೃತ ಬಾಲಕನಿಗೆ ಸಿಗಬಹುದಾದ ಪರಿಹಾರದ ಭರವಸೆ ನೀಡಿದರು. ಶಾಲೆ ಪ್ರಾಂಶುಪಾಲ ಧನರಾಜ್ ವಸತಿ ಶಿಕ್ಷಣ ಸಂಸ್ಥೆಯಿಂದ 5 ಲಕ್ಷ ರು. ಚೆಕ್ ಅನ್ನು ಮೃತ ಬಾಲಕನ ತಾಯಿ ಲತಾಗೆ ಹಸ್ತಾಂತರಿಸಿದರು.
ಮೆಸ್ಕಾಂ ನಿಂದಲೂ ಬಾಲಕನ ಕುಟುಂಬಕ್ಕೆ ಸಿಗಬಹುದಾದ ಪರಿಹಾರ ದೊರೆಯಲಿದೆ ಎಂದು ಮೆಸ್ಕಾಂ ಎಇಇ ತಿರುಪತಿ ನಾಯ್ಕ ತಿಳಿಸಿದರು. ನೇರಳೆ ಮರದಲ್ಲಿ ಹಣ್ಣು ಕೀಳಲು ಮರ ಹತ್ತಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಸಹಪಾಠಿ ಆಕಾಶ್ ವಿದ್ಯುತ್ ಅವಘಡದಿಂದ ಸಾವನ್ನು ಕಣ್ಣಾರೆ ಕಂಡು ಹೆದರಿದ್ದ ಅವರನ್ನು ಮನೆಗೆ ಕಳಿಸಲಾಯಿತು