8 ತಿಂಗಳಾದರೂ ಉದ್ಘಾಟನೆ ಆಗದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ

KannadaprabhaNewsNetwork |  
Published : May 26, 2024, 01:39 AM IST
ನವಲಗುಂದದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ. | Kannada Prabha

ಸಾರಾಂಶ

ನಾಮಕೆವಾಸ್ತೆ ಎಂಬಂತೆ ನವಲಗುಂದದಲ್ಲೂ 12 ಎಕರೆ ಪ್ರದೇಶದಲ್ಲಿ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ತೆರೆದಿದ್ದಾರೆ. ಆದರೆ, ಇಲ್ಲಿ ಬಂದ ರೈತರಿಗೆ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ನೆರಳಿಲ್ಲ, ಹಳೆ ಕಟ್ಟಡಗಳನ್ನು ತೆರವುಗೊಳಿಸಿಲ್ಲ.

ಈಶ್ವರ ಲಕ್ಕುಂಡಿ

ನವಲಗುಂದ:

ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೂತನ ಕಚೇರಿ ನಿರ್ಮಿಸಿ 8-10 ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಯಾವಾಗ ಈ ನೂತನ ಕಚೇರಿ ಆರಂಭವಾಗುವುದೋ ಎಂದು ರೈತರು ಹಾಗೂ ವರ್ತಕರು ಎದುರು ನೋಡುತ್ತಿದ್ದಾರೆ.

ಅಣ್ಣಿಗೇರಿ ಎಪಿಎಂಸಿಯ ಪ್ರಮುಖ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ನಾಮಕೆವಾಸ್ತೆ ಎಂಬಂತೆ ನವಲಗುಂದದಲ್ಲೂ 12 ಎಕರೆ ಪ್ರದೇಶದಲ್ಲಿ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ತೆರೆದಿದ್ದಾರೆ. ಆದರೆ, ಇಲ್ಲಿ ಬಂದ ರೈತರಿಗೆ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ನೆರಳಿಲ್ಲ, ಹಳೆ ಕಟ್ಟಡಗಳನ್ನು ತೆರವುಗೊಳಿಸಿಲ್ಲ, ಹೊಸ ಕಟ್ಟಡದತ್ತ ಯಾವೊಬ್ಬ ಅಧಿಕಾರಿಯೂ ಸುಳಿಯುತ್ತಿಲ್ಲ. ಈ ನವಲಗುಂದದ ಎಪಿಎಂಸಿ ರಾತ್ರಿ ವೇಳೆ ಪುಂಡ-ಪೋಕರಿಗಳ ವಾಸತಾಣವಾಗಿ ಪರಿವರ್ತನೆಯಾಗುತ್ತಿದ್ದರೆ, ಇನ್ನೊಂದೆಡೆ ಕಾಳು-ಕಡಿ ವ್ಯಾಪಾರಸ್ಥರು ಇಲ್ಲಿಯೇ ಗೋದಾಮ ನಿರ್ಮಿಸಲು ಮುಂದಾಗುತ್ತಿದ್ದಾರೆ. ಹಳೆ ಕಟ್ಟಡದ ಚಾವಣಿ ಸಂಪೂರ್ಣ ಹಾಳಾಗಿದ್ದರಿಂದ ₹ 50 ಲಕ್ಷ ಖರ್ಚು ಮಾಡಿ ಹೊಸ ಕಚೇರಿ ನಿರ್ಮಿಸಿದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಮೂಲಭೂತ ಸೌಲಭ್ಯಗಳನ್ನು ಮಾತ್ರ ಇಲ್ಲಿ ಕಲ್ಪಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣ‍ವಾಗಿದೆ. ವಿದ್ಯುತ್ ಸೌಕರ್ಯ ಕಲ್ಪಿಸಿಲ್ಲ, ಕುಡಿಯಲು ನೀರು, ಚರಂಡಿ ವ್ಯವಸ್ಥೆ ಮಾಡಿಲ್ಲ, ನೂತನ ಕಚೇರಿಗೆ ಈ ವರೆಗೂ ನಾಮಫಲಕವನ್ನೇ ಹಾಕಿಲ್ಲ. ಇಷ್ಟೊಂದು ದೊಡ್ಡದಾಗಿರುವ ನೂತನ ಕಚೇರಿ ನಿರ್ವಹಣೆಗೆ ಓರ್ವ ಸಿಬ್ಬಂದಿ ಮಾತ್ರ ನಿಯೋಜಿಸಲಾಗಿದೆ. ಇದರ ನಿರ್ವಹಣೆಗೆ ಕನಿಷ್ಠ 6 ಸಿಬ್ಬಂದಿಗಳಾದರೂ ಬೇಕು. ಸಿಬ್ಬಂದಿಗಳ ಕೊರತೆ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಎಲ್ಲೆಂದರಲ್ಲಿ ಗಿಡ-ಗಂಟಿಗಳು ಬೆಳೆದು ನಿಂತಿವೆ. ಮಳೆಯಾದಾಗ ನೀರು ನಿಂತು ಮಲೀನಗೊಂಡು ದುರ್ವಾಸನೆ ಬೀರುತ್ತಿದೆ. ಆದಷ್ಟು ಬೇಗನೆ ಅಧಿಕಾರಿಗಳು ಕಟ್ಟಡ ಉದ್ಘಾಟನೆ ಹಾಗೂ ಸುತ್ತಮುತ್ತಲಿನ ತೆಗ್ಗು ಪ್ರದೇಶವನ್ನು ಸಮತಟ್ಟಾಗಿಸಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ಹಾಗೂ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚು ಸಿಬ್ಬಂದಿ ನಿಯೋಜಿಸಬೇಕು. ನವಲಗುಂದದ ಉಪಕೃಷಿ ಉತ್ಪನ್ನ ಮಾರುಕಟ್ಟೆಯನ್ನು ನವಲಗುಂದ ತಾಲೂಕಿನ ಪ್ರಧಾನ ಕೃಷಿ ಉತ್ಪನ್ನ ಮಾರುಕಟ್ಟೆಯನ್ನಾಗಿ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಸಿಬ್ಬಂದಿಗಳ ಹೆಚ್ಚಳಕ್ಕೆ ಕ್ರಮವಾಗಲಿ:

ಈಗಾಗಲೇ ಕಟ್ಟದ ಪೂರ್ಣಗೊಂಡಿದೆ. ಆದರೆ, ವಿದ್ಯುತ್ ಕಾಮಗಾರಿ ನಡೆದಿದ್ದು 3 ತಿಂಗಳೊಳಗಾಗಿ ಉದ್ಘಾಟನೆಯಾಗಲಿದೆ. ನವಲಗುಂದ ಮತ್ತು ಅಣ್ಣಿಗೇರಿ ಕಚೇರಿಗಳಿಗೆ ಒಟ್ಟು 16 ಸಿಬ್ಬಂದಿಗಳು ಬೇಕು. ಕೇವಲ ಇಬ್ಬರು ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸುವಲ್ಲಿ ವಿಳಂಬವಾಗುತ್ತಿದೆ. ಆದಷ್ಟು ಬೇಗ ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕಿದೆ. ಗುರುವಾರ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಮರಿಬಸಪ್ಪ ಸಜ್ಜನ ಕನ್ನಡಪ್ರಭಕ್ಕೆ ತಿಳಿಸಿದರು.ನೀತಿ ಸಂಹಿತೆ ಮುಗಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಕಚೇರಿ ಉದ್ಘಾಟಿಸಲಾಗುವುದು. ಹೊಸ ಕಚೇರಿಯ ಸಣ್ಣಪುಟ್ಟ ಕಾಮಗಾರಿ ಉಳಿದಿದ್ದರೆ ಉದ್ಘಾಟನೆಯ ಪೂರ್ವದಲ್ಲಿಯೆ ಎಲ್ಲ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ