ಬಾಲ್ಯದಲ್ಲಿಯೇ ಉತ್ತಮ ಜೀವನ ಕಲ್ಪಿಸಿದರೆ ಸುಸ್ಥಿರ ಸಮಾಜ ಸಾಧ್ಯ: ನ್ಯಾ. ಸೋಮನಾಥ್

KannadaprabhaNewsNetwork | Published : Mar 16, 2024 1:46 AM

ಸಾರಾಂಶ

ಉಡುಪಿ ತಾ.ಪಂ. ಸಭಾಂಗಣದಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯ ವೈದ್ಯಾಧಿಕಾರಿ, ಸಂಚಾರಿ ಪೊಲೀಸ್ ಸಿಬ್ಬಂದಿಗೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಾಲನ್ಯಾಯ ಕಾಯ್ದೆ 2015, ತಿದ್ದುಪಡಿ 2021, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ 2012 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ದತ್ತು ಕಾರ್ಯಕ್ರಮದ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಬಾಲ್ಯದಲ್ಲಿ ಬಡತನ ಹಾಗೂ ಇನ್ನಿತರ ಸಮಸ್ಯೆಗಳು ಮಕ್ಕಳು ಅಪರಾಧವನ್ನು ಮಾಡುವಂತೆ ಮಾಡುತ್ತದೆ. ಅಂಥವರನ್ನು ಗುರುತಿಸಿ ಅವರಿಗೆ ಉತ್ತಮ ಜೀವನವನ್ನು ಕಲ್ಪಿಸಿದರೆ, ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಬಾಲನ್ಯಾಯ ಮಂಡಳಿಯ ಪ್ರಧಾನ ನ್ಯಾಯಾಧೀಶ ಸೋಮನಾಥ ಹೇಳಿದರು.ಅವರು ಶುಕ್ರವಾರ ಉಡುಪಿ ತಾ.ಪಂ. ಸಭಾಂಗಣದಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯ ವೈದ್ಯಾಧಿಕಾರಿ, ಸಂಚಾರಿ ಪೊಲೀಸ್ ಸಿಬ್ಬಂದಿಗೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಾಲನ್ಯಾಯ ಕಾಯ್ದೆ 2015, ತಿದ್ದುಪಡಿ 2021, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ 2012 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ದತ್ತು ಕಾರ್ಯಕ್ರಮದ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಬಗೆಗಿನ ಸಮಸ್ಯೆಗಳನ್ನು ಸೂಕ್ತವಾಗಿ ತಡೆಗಟ್ಟಲು, ಮಕ್ಕಳ ಕುರಿತಾದ ಕಾನೂನುಗಳು ಬದಲಾದಂತೆ ಅಧಿಕಾರಿಗಳು ಅವುಗಳ ಮಾಹಿತಿ ಪಡೆಯುವುದು ಅಗತ್ಯ. ಅಧಿಕಾರಿಗಳು ಇಂತಹ ಶಿಬಿರದಲ್ಲಿ ಭಾಗವಹಿಸಿ ಮಾಹಿತಿಯ ಉಪಯೋಗ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ರೊನಾಲ್ಡ್ ಬಿ. ಫುಟಾರ್ಡೊ, ಮಗುವಿಗೆ ಕುಟುಂಬದ ವಾತಾವರಣದಲ್ಲಿ ಪ್ರೀತಿ ಮತ್ತು ಆರೈಕೆ ಸಿಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಪೋಷಕರೊಂದಿಗೆ ಸಮಾಲೋಚನೆ ಕಡಿಮೆಯಾಗಿದ್ದು, ಮಕ್ಕಳು ಮಾಧ್ಯಮಗಳಿಂದಲೂ ತಪ್ಪು ದಾರಿ ಹಿಡಿಯುತ್ತಿವೆ ಎಂದರು.ವಕೀಲ ಪ್ರಶಾಂತ್ ಎಚ್.ಎಂ. ಅವರು ಫೋಕ್ಸೋ ಮತ್ತು ಬಾಲ್ಯವಿವಾಹ, ಬಾಲನ್ಯಾಯ ಮಂಡಳಿ ಸದಸ್ಯ ರಾಜೇಶ್ ಬಾಲನ್ಯಾಯ ಕಾಯ್ದೆ ಬಗ್ಗೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ದ.ಕ. ಜಿಲ್ಲಾ ಅಧ್ಯಕ್ಷ ರೆನ್ನಿ ಡಿಸೋಜ, ದತ್ತು ಅಧಿನಿಯಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಎಎಸ್‌ಪಿ ಡಾ.ಸಿದ್ಧಲಿಂಗಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿದರು. ಸುರಕ್ಷಾ ವಂದಿಸಿದರು. ಜ್ಯೋತಿ ನಿರೂಪಿಸಿದರು.

Share this article