ರಾಜಕೀಯ ನಾಯಕರ ಕೈಗೊಂಬೆಯಾಗಿರುವ ಆಡಳಿತ ವ್ಯವಸ್ಥೆ

KannadaprabhaNewsNetwork | Published : Dec 29, 2024 1:16 AM

ಸಾರಾಂಶ

ತಳಗವಾರದಲ್ಲಿ ರಸ್ತೆ ತಡೆ ನಡೆಸುತ್ತಿದ್ದ ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರು ರಾಜಕೀಯ ಪ್ರಭಾವ ಬಳಸಿಕೊಂಡು ಪ್ರಕರಣ ದಾಖಲಿಸಿ ತೊಂದರೆ ನೀಡುತ್ತಿದ್ದಾರೆ,

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಅಧಿಕಾರವಿದ್ದೂ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಆಡಳಿತ ರಾಜಕೀಯ ನಾಯಕರ ಕೈಗೊಂಬೆಗಳಾಗಿ ಅಸಹಾಯಕರಾಗಿದ್ದಾರೆಂದು ಪ್ರತಿಭಟನಾನಿರತ ದಲಿತ ಮುಖಂಡರು ದೂರಿದರು.

ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಾ. ಬಿ.ಆರ್ ಅಂಬೇಡ್ಕರ್‌ರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಹಾಗೂ ಚಿಂತಾಮಣಿಯಲ್ಲಿ ಕಳೆದ ೪ ತಿಂಗಳುಗಳಿಂದ ಅಂಬೇಡ್ಕರ್‌ರ ಪುತ್ಥಳಿಗೆ ಕೊಳಕು ಬಟ್ಟೆಯನ್ನು ಸುತ್ತಿ ಅವರಿಗೆ ಅವಮಾನ ಮಾಡುತ್ತಿರುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ದಲಿತ, ಹಿಂದುಳಿದ, ಅಲ್ಪಸಂಖ್ಯಾಂತರ ಹಾಗೂ ಪ್ರಗತಿಪರ ಚಿಂತಕರ ಒಕ್ಕೂಟದಿಂದ ನಗರದ ತಾಲೂಕು ಕಚೇರಿ ಬಳಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ೫ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಸಂಘಟನೆಯ ಪದಾಧಿಕಾರಿಗಳು ನಗರದ ಪ್ರಮುಖ ಬೀದಿಗಳಲ್ಲಿ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಪರ ಸಂಘಟನೆಗಳ ಮುಖಂಡರಾದ ಕವಾಲಿ ವೆಂಕಟರಮಣಪ್ಪ, ಜನನಾಗಪ್ಪ, ವಕೀಲ ಗೋಪಿ ಮಾತನಾಡಿ, ರಾಜ್ಯ ಸರ್ಕಾರ, ಸ್ಥಳೀಯ ಶಾಸಕ ಹಾಗೂ ಸಚಿವರಿಗೆ ತಮ್ಮ ತಾಲೂಕಿನಲ್ಲಿರುವ ಅಂಬೇಡ್ಕರ್‌ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆ ಕಣ್ಣಿಗೆ ಕಾಣುವುದಿಲ್ಲವೆ? ಕಳೆದ ೪ ತಿಂಗಳಿನಿಂದಲೂ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಷ್ಠಾಪಿಸಿರುವ ಅಂಬೇಡ್ಕರ್ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆಗೆಯದೆ ಇರುವುದು ಖಂಡನೀಯವಾಗಿದ್ದು, ಈ ಎಲ್ಲಾ ವಿಚಾರಗಳು ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ್ ಮತ್ತು ಬಿಇಒರಿಗೆ ಗೊತ್ತಿದ್ದರೂ ರಾಜಕೀಯ ನಾಯಕರ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆಂದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಳಗವಾರದಲ್ಲಿ ರಸ್ತೆ ತಡೆ ನಡೆಸುತ್ತಿದ್ದ ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರು ರಾಜಕೀಯ ಪ್ರಭಾವ ಬಳಸಿಕೊಂಡು ಪ್ರಕರಣ ದಾಖಲಿಸಿ ತೊಂದರೆ ನೀಡುತ್ತಿದ್ದಾರೆ, ನಮ್ಮ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಎಷ್ಟೇ ಪ್ರಕರಣ ದಾಖಲಿಸಿ , ಜೈಲಿಗೆ ಕಳುಹಿಸಿದರೂ ಜೈಲಿನಲ್ಲಿಯೂ ಕೂಡ ಪ್ರತಿಭಟನೆ ಮಾಡುವುದಾಗಿ ತಿಳಿಸಿದ ಅವರು, ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಂಬೇಡ್ಕರ್‌ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆಗೆದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಈ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಮೆರವಣಿಗೆ ಮುಂಚೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ನಿಧನಕ್ಕೆ ಪ್ರತಿಭಟನಾಕಾರರು ಒಂದು ನಿಮಿಷ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ದಲಿತ ಮುಖಂಡರಾದ ಊಲವಾಡಿ ಎಂ.ವಿ ರಾಮಪ್ಪ, ಎಂ,ಆರ್ ನಾರಾಯಣಸ್ವಾಮಿ, ವೆಂಕಟಗಿರಿಕೋಟೆ ಆನಂದ್, ರೂಪ ಎಲ್, ವೆಂಕಟಮಣಪ್ಪ, ರಾಜು, ಲಿಯೋ ಕ್ಲಬ್ ಆಫ್ ಮಾರ್ಗ ಅಧ್ಯಕ್ಷ ನವೀನ್ ಜಿ ಕೃಷ್ಣ, ವಿನೋಭಾ ಕಾಲೋನಿ ಸಂತೋಷ್, ಆನೂರು ಶ್ರೀನಿವಾಸ್, ಮೂರ್ತಿ, ಚಿನ್ನಸಂದ್ರ ಅಪ್ಪಲ ಮತಿತ್ತರರು ಉಪಸ್ಥಿತರಿದ್ದರು.

Share this article