ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕಾರ್ಯದಲ್ಲಿ ನಿರಂತರ ಶ್ರಮಿಸುತ್ತಿರುವ ಶಿಕ್ಷಕರು, ಪೋಷಕರುನ್ನು ಅಭಿನಂದಿಸುವುದಲ್ಲದೆ, ವಿದ್ಯಾರ್ಥಿಗಳಿಗೆ ಉನ್ನಯ ಮಟ್ಟಕ್ಕೇರಲು ಅವಕಾಶ ಸಿಗಲಿ ಎಂಬ ಪ್ರಾರ್ಥನೆ ಮಾಡುವೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ಅವರು, ನಗರದ ಸ್ವಾಮಿವಿವೇಕಾನಂದ ಪ್ರೌಢಶಾಲಾ ಆವರಣದಲ್ಲಿ ೨೦೨೩-೨೪ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳ ತಾಲೂ ಮಟ್ಟದ ಪ್ರತಿಭಾಕಾರಂಜಿ, ಕಲೋತ್ಸವವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಕಾರ್ಯ ಶಿಕ್ಷಕ ವೃಂದ ಮಾಡಬೇಕು. ಪೋಷಕರು ಸಹ ಮಕ್ಕಳ ಪ್ರತಿಭೆ ಅನಾವರಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗುತ್ತದೆ. ಚಳ್ಳಕೆರೆ ತಾಲೂಕು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಮೊದಲ ಸ್ಥಾನ ಪಡೆದು, ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಪ್ರತಿವರ್ಷ ಇಲಾಖೆಯಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿರುವ ಕಲೆ ಅನಾವರಣಗೊಳಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ತಾಲೂಕಿನಾದ್ಯಂತ ಸುಮಾರು ೮೦ಕ್ಕೂ ಹೆಚ್ಚು ಶಾಲೆಯ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಹಿಸಿದ್ದಾರೆ. ಎಲ್ಲಾ ಸ್ಪರ್ಧಿಗಳು ಉತ್ತಮ ಆತ್ಮವಿಶ್ವಾಸ ಹೊಂದಿದ್ದಾರೆ. ಅದೇ ರೀತಿ ತೀರ್ಪುಗಾರರೂ ಯಾವುದೇ ಲೋಪವಿಲ್ಲದೆ ನ್ಯಾಯದ ಪರವಾಗಿ ಇರುತ್ತಾರೆಂಬ ಗೌರವ ನನಗಿದೆ. ಈ ಕಾರ್ಯಕ್ರಮಕ್ಕೆ ಶಿಕ್ಷಕರ ಸಮೂಹ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯರಾದ ಸುಜಾತಾ, ಕವಿತಾ, ಬಿ.ಟಿ.ರಮೇಶ್‌ಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಎಲ್.ಲಿಂಗೇಗೌಡ, ಶಿಕ್ಷಕಿ ಡಿ.ಆರ್.ಪ್ರಮೀಳಾ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಕುಮಾರ್, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ಸುನೀಲ್‌ನಾಯ್ಕ, ಎಸ್. ಸಿದ್ದೇಶ್ವರ, ಪಿ.ಮಾರುತಿಭಂಡಾರಿ, ಬಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.