ಜಗದೀಶ ವಿರಕ್ತಮಠ
ಕನ್ನಡಪ್ರಭ ವಾರ್ತೆ ಬೆಳಗಾವಿತಾಯಿಯ ಹಾಲು ಕುಡಿದು ಸದೃಢವಾಗಿ ಬೆಳೆಯಬೇಕಿದ್ದ ವಯಸ್ಸಿನಲ್ಲೇ ಮೇಕೆ ಮರಿಯೊಂದು ತಾನೇ ಹಾಲು ಕೊಡುತ್ತಿರುವ ಅತೀ ಅಪರೂಪದ ಪ್ರಕರಣ ಬೆಳಕಿಗೆ ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ.ಹೌದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಈಶ್ವರಪ್ಪ ಯಮನಪ್ಪ ಮಾದಿಗರ ಎಂಬುವರಿಗೆ ಸೇರಿದ ಮೂರು ತಿಂಗಳ ಮೇಕೆಮರಿ ಹಾಲು ಕೊಡುತ್ತಿದೆ. ಈಶ್ವರ ಉಪಜೀವನಕ್ಕಾಗಿ ಮೇಕೆ ಸಾಕಿದ್ದು, ಮೂರು ತಿಂಗಳ ಹಿಂದೆ ಒಂದು ಮರಿಗೆ ಜನ್ಮ ನೀಡಿದೆ. ಎರಡುವರೆ ತಿಂಗಳ ಬಳಿಕ ಮೇಕೆ ಮರಿಯ ಕೆಚ್ಚಲು ಹಾಗೂ ಮೊಲೆ ಸ್ಪಲ್ಪ ದೊಡ್ಡದಾಗಿ ಕಾಣಿಸಿಕೊಂಡಿದೆ. ಇದರಿಂದ ಮೇಕೆ ಮಾಲೀಕ ಈಶ್ವರನಿಗೂ ಅಚ್ಚರಿ ಹಾಗೂ ಕುತೂಹಲವಾಗಿದ್ದರಿಂದ ಹಾಲು ಕರೆದು ನೋಡಿದ್ದಾನೆ. ಈ ವೇಳೆ ಮರಿ ಹಾಲು ಕೊಟ್ಟಿದ್ದರಿಂದ ಮೇಕೆ ಮಾಲೀಕ ಅಷ್ಟೇ ಅಲ್ಲದೆ ಸುತ್ತುಮುತ್ತಲಿನ ಗ್ರಾಮಗಳ ಜನರನ್ನು ಅಚ್ಚರಿಗೊಳಿಸಿದೆ.
ತಾಯಿಯ ಹಾಲು ಕುಡಿದು ಸದೃಢವಾಗಿ ಬೆಳೆಯಬೇಕಿದ್ದ ವಯಸ್ಸಲ್ಲಿ ಹಾಲು ಕೊಡುತ್ತಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೇರಿ ಸುಮಾರು ಅರ್ಧ ಲೀಟರ್‌ನಷ್ಟು ಹಾಲು ಕೊಡುತ್ತಿದೆ. ಮೇಕೆ ಹಾಲಿನೊಂದಿಗೆ ಮರಿಯ ಹಾಲನ್ನು ಪ್ರತಿನಿತ್ಯ ಉಪಯೋಗಿಸುತ್ತಿದ್ದಾರೆ.ಗರ್ಭಧರಿಸದೇ, ಮರಿಹಾಕದೆ ಹಾಲು :
ಸಾಮಾನ್ಯವಾಗಿ ಮೇಕೆ ಮರಿ ಗರ್ಭಧರಿಸಲು ಹುಟ್ಟಿದ ಆರು ತಿಂಗಳ ಸಮಯಾವಕಾಶ ಅತ್ಯವಶ್ಯಕ. ಗರ್ಭಧಾರಣೆ 5 ತಿಂಗಳ ಬಳಿಕ ಮರಿಗಳಿಗೆ ಜನ್ಮ ನೀಡುತ್ತವೆ. ಇದಾದ ಬಳಿಕ ಒಂದುವರೆ ವರ್ಷ ಅಥವಾ ಮತ್ತೆ ಗರ್ಭಧಾರಣೆ ಆಗುವವರೆಗೂ ಪ್ರತಿನಿತ್ಯ ಹಾಲು ಕೊಡುತ್ತವೆ. ಆದರೆ, ಇಲ್ಲಿ ಒಮ್ಮೆಯೂ ಗರ್ಭಧಾರಣೆ ಮತ್ತು ಮರಿ ಹಾಕದ ಮೂರು ತಿಂಗಳ ಮೇಕೆ ಮರಿ ಹಾಲು ಕೊಡುತ್ತಿರುವುದು ವಿರಳಾತಿ ವಿರಳ ಉದಾಹರಣೆ ಜತೆಗೆ ಪಶುವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ.ಅಸಮತೋಲನದಿಂದಾಗಿ ಪ್ರೋಲ್ಯಾಕ್ಟಿನ್ ಹಾರ್ಮೋನ್‌ಗಳು ಅತೀ ಹೆಚ್ಚಾಗಿ ಈ ರೀತಿಯಾಗುತ್ತದೆ. ಇಂತಹ ಪ್ರಕರಣಗಳು ಅತೀ ವಿರಳವಾಗಿದ್ದು, ಲಕ್ಷದಲ್ಲಿ ಒಂದು ಕಂಡು ಬರುತ್ತವೆ. ಹಸುಗಳಲ್ಲಿ ಕ್ರಾಸ್‌ಬ್ರೀಡ್ ಮಾಡಲಾದ ಎಚ್‌ಎಫ್ ಹಾಗೂ ಜರ್ಸಿ ತಳಿಗಳಲ್ಲಿ ಈ ರೀತಿಯ ಗುಣಲಕ್ಷ್ಮಣಗಳು ಹೆಚ್ಚಾಗಿ ಕಂಡುಬರುತ್ತವೆ.* ಡಾ.ಎಚ್.ಬಿ. ಸಣ್ಣಕ್ಕಿ, ಪಶು ಮುಖ್ಯ ವೈದ್ಯಾಧಿಕಾರಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಬೆಳಗಾವಿಎರಡುವರೆ ತಿಂಗಳ ಬಳಿಕ ಮೇಕೆ ಮರಿಯ ಕೆಚ್ಚಲು ಹಾಗೂ ಮೊಲೆ ಸ್ಪಲ್ಪ ದೊಡ್ಡದಾಗಿ ಕಾಣಿಸಿಕೊಂಡಿದ್ದರಿಂದ ಸುಮ್ಮನೆ ನೋಡಿದರಾಯಿತು ಎಂದು ಹಾಲು ಕರೆದ ಸಮಯದಲ್ಲಿ ಮೊಲೆಯಲ್ಲಿ ಹಾಲು ಬಂದಿವೆ. ಪ್ರತಿನಿತ್ಯ ಎರಡು ಸಮಯ ಒಟ್ಟು ಅರ್ಧ ಲೀಟರ್‌ನಷ್ಟು ಹಾಲು ಕೊಡುತ್ತಿದ್ದು, ಈ ಹಾಲನ್ನೇ ಊಟಕ್ಕೆ ಉಪಯೋಗಿಸುತ್ತಿದ್ದೇವೆ.
* ಈಶ್ವರ ಮಾದಿಗರ ಮೇಕೆಮರಿ ಮಾಲೀಕ.