ದಾವಣಗೆರೆಯ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಘಟಕ 1 ಮತ್ತು 2ರಿಂದ ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಜೂ.8 ರವರೆಗೆ ಒಟ್ಟು 4 ಮಕ್ಕಳನ್ನು ದತ್ತು ನೀಡಲಾಗಿದೆ.
- ಇಟಲಿ ದಂಪತಿಯಲ್ಲಿ ಆನಂದಭಾಷ್ಪ ತಂದ 1 ವರ್ಷದ ಅನಾಥ ಗಂಡುಮಗು
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಘಟಕ 1 ಮತ್ತು 2ರಿಂದ ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಜೂ.8 ರವರೆಗೆ ಒಟ್ಟು 4 ಮಕ್ಕಳನ್ನು ದತ್ತು ನೀಡಲಾಗಿದೆ.
ಸ್ವದೇಶ ಮತ್ತು ವಿದೇಶಕ್ಕೆ ದತ್ತು ನೀಡಲಾದ ಮಕ್ಕಳಲ್ಲಿ ಮುಂಬೈನ 1, ಸ್ಪೇನ್‌ನ 1 ಹಾಗೂ ಇಟಲಿ ಮೂಲಕ ದಂಪತಿಗಳಿಗೆ 2 ಮಕ್ಕಳನ್ನು ದತ್ತು ನೀಡಲಾಗಿದೆ. ಇದೇ ರೀತಿ 2024-25ನೇ ಸಾಲಿನಲ್ಲಿ 7 ಮಕ್ಕಳು, 2025-26ನೇ ಸಾಲಿನಲ್ಲಿ 12 ಸೇರಿದಂತೆ ಒಟ್ಟು 23 ಮಕ್ಕಳನ್ನು ಸ್ವದೇಶ ಮತ್ತು ವಿದೇಶಕ್ಕೆ ದತ್ತು ನೀಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯದರ್ಶಿ ಪೂರ್ಣಿಮಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧ್ಯಕ್ಷರ ಸಮ್ಮುಖದಲ್ಲಿ ನಿಯಮಾನುಸಾರ ದತ್ತು ಸ್ವೀಕಾರ ಪ್ರಕ್ರಿಯೆ ನಡೆಯಲಿದೆ. ದಾವಣಗೆರೆ ದತ್ತು ಸ್ವೀಕಾರ ಕೇಂದ್ರದಿಂದ ದೇಶ, ವಿದೇಶಿಗರಿಂದ ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯು ನಿಯಮಾನುಸಾರ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಅನಾಥ, ಆಶ್ರಯರಹಿತ ಮಕ್ಕಳ ಬದುಕಿಗೆ ಆಸರೆ:
ಅನಾಥ ಹಾಗೂ ಆಶ್ರಯರಹಿತ ಮಕ್ಕಳಿಗೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ಬದುಕು, ಜೀವನ ಸಿಗುವಂತಹ ವಿದೇಶದ ಭಾಗ್ಯ ಹುಡುಕಿಕೊಂಡು ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಕಳೆದೊಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ನಾಲ್ವರು ಅನಾಥ ಮಕ್ಕಳು ವಿವಿಧ ಪ್ರಮುಖ ದೇಶಗಳ ದಂಪತಿಗಳ ಮಡಿಲು ಸೇರಲು ಸಜ್ಜಾಗಿದ್ದಾರೆ. ಅನಾಥ ಮಕ್ಕಳನ್ನು ಅಮೇರಿಕಾ, ಇಂಗ್ಲೆಂಡ್, ಇಟಲಿ ಸೇರಿದಂತೆ ವಿವಿಧ ದೇಶಗಳ ದಂಪತಿಗಳು ನಿಯಮಾನುಸಾರ ದತ್ತು ಪಡೆಯಲು ಮುಂದಾಗಿದ್ದು, ಇದರ ಭಾಗವಾಗಿ ಒಂದು ವರ್ಷದ ಅನಾಥ ಗಂಡುಮಗುವನ್ನು ಇಟಲಿ ದಂಪತಿ ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೇರಿದಂತೆ ಅಧಿಕಾರಿಗಳ ಸಮಕ್ಷಮ ಕಾನೂನುಬದ್ಧವಾಗಿ ದತ್ತು ಪಡೆದಿದ್ದಾರೆ.
ಇಟಲಿ ದೇಶದ ವೈಯರಿ ಹಾಗೂ ಪ್ರಿಯಾ ದಂಪತಿ ದಾವಣಗೆರೆಯ ಅನಾಥ ಮಗುವನ್ನು ದತ್ತು ಪಡೆದ ಅದೃಷ್ಟವಂತರಾಗಿದ್ದಾರೆ. ಪ್ರಿಯಾ ಮೂಲತಃ ತಮಿಳುನಾಡಿನ ಚೆನ್ನೈ ಮೂಲದವರು. ಇಟಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಈ ದಂಪತಿ ಮಗುವಿಗಾಗಿ ಕಳೆದ 3 ವರ್ಷಗಳಿಂದ ಹಂಬಲಿಸುತ್ತಿದ್ದರು. ಕೇಂದ್ರ ಸರ್ಕಾರದ ಕಾರಾ (CARA) ಸಂಸ್ಥೆಯ ನಿಯಮಾವಳಿಗಳ ಪ್ರಕಾರ, ಕಳೆದ 2023ರಲ್ಲೇ ಮಗುವನ್ನು ದತ್ತು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸುಮಾರು ವರ್ಷಗಳ ಕಾಯುವಿಕೆಯ ನಂತರ ಇಂದು ಅವರ ಮಗುವನ್ನು ದತ್ತು ಪಡೆಯುವ ಕನಸು ಸಾಕಾರಗೊಂಡಂತಾಗಿದೆ.
- - -
-8ಕೆಡಿವಿಜಿ6:
ಇಟಲಿಯ ದಂಪತಿ ವೈಯರಿ-ಪ್ರಿಯಾ ದಾವಣಗೆರೆಯಲ್ಲಿ ಒಂದು ವರ್ಷದ ಅನಾಥ ಗಂಡು ಮಗುವನ್ನು ನಿಯಮಾನುಸಾರ ದತ್ತು ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.