ರಾಜ್ಯ ಮುಕ್ತ ವಿವಿ ಜುಲೈ ಆವೃತ್ತಿ ಪ್ರವೇಶಾತಿಗೆ ಸೆ.15 ಕಡೆಯ ದಿನ

KannadaprabhaNewsNetwork |  
Published : Aug 02, 2025, 12:00 AM IST
7 | Kannada Prabha

ಸಾರಾಂಶ

ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ಒಂದು ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ ಮತ್ತೊಂದು ಕೋರ್ಸ್ ಅನ್ನು ಪಡೆಯಲು ಅವಕಾಶ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2025- 26ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಜುಲೈ 1 ರಿಂದ ಪ್ರಾರಂಭವಾಗಿದ್ದು, ಯುಜಿಸಿ ಅನುಮೋದಿತ 70 ಕೋರ್ಸ್‌ ಗಳ ಪ್ರವೇಶಾತಿ ಆರಂಭವಾಗಿದೆ. ಪ್ರವೇಶಾತಿಗೆ ಸೆ.15 ಕಡೆಯ ದಿನವಾಗಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

ನಗರದ ರಾಜ್ಯ ಮುಕ್ತ ವಿವಿ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ಒಂದು ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ ಮತ್ತೊಂದು ಕೋರ್ಸ್ ಅನ್ನು ಪಡೆಯಲು ಅವಕಾಶ ಇದೆ. ಮುಕ್ತ ವಿವಿಯಲ್ಲಿ ಈವರೆಗೂ 69 ಕೋರ್ಸ್‌ ಗಳು ಲಭ್ಯವಿತ್ತು. ಈಗ ಜ್ಯೋತಿಷ್ಯಶಾಸ್ತ್ರ ವಿಜ್ಞಾನ ಸೇರಿ ಒಟ್ಟು 70 ಕೋರ್ಸ್‌ ಗಳಿವೆ ಎಂದರು.

ರಾಜ್ಯದಲ್ಲಿರುವ 38 ಪ್ರಾದೇಶಿಕ ಕೇಂದ್ರಗಳಲ್ಲೂ ಪ್ರವೇಶಾತಿ ಪಡೆಯಬಹುದಾಗಿದೆ. https://www.ksoumysuru.ac.in/ ಅಧಿಕೃತ ವೆಬ್‌ ಸೈಟ್ ಮೂಲಕ ಪದವಿಗಳಿಗೆ ಆನ್‌ ಲೈನ್‌ ನಲ್ಲಿ ಅರ್ಜಿ ಭರ್ತಿ ಮಾಡಿ, ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಂತರ ಆನ್‌ ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ಧಪಾಠಗಳನ್ನು ಪಡೆಯಬಹುದಾಗಿದೆ ಎಂದು ಅವರು ವಿವರಿಸಿದರು.

ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಆಶಯದಲ್ಲಿ 1996ರಲ್ಲಿ ವಿವಿ ಆರಂಭವಾಗಿದ್ದು, ಲಕ್ಷಾಂತರ ಮಂದಿ ತಮ್ಮ ಉನ್ನತ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಿಕೊಂಡಿದ್ದಾರೆ. 2023 ರಿಂದ ಯುಜಿಸಿ ಮಾನ್ಯತೆ ಹೊಂದಿದ ಕಾರ್ಯಕ್ರಮಗಳಿಗೆ ಪ್ರವೇಶಾತಿ ನೀಡುತ್ತಿದೆ. ಶೈಕ್ಷಣಿಕ ಗುಣಮಟ್ಟಕ್ಕೆ ನ್ಯಾಕ್‌ ನಿಂದ ಎ+ ಮ್ಯಾನತೆ ಪಡೆದುಕೊಂಡಿದೆ. ಸಾಂಪ್ರದಾಯಿಕ ವಿವಿಗಳು ನೀಡುವ ಪದವಿಗೆ ಸಮಾನವಾಗಿ ಮುಕ್ತ ವಿವಿ ಪದವಿ ನೀಡುತ್ತಿದೆ ಎಂದು ಅವರು ಹೇಳಿದರು.

ಶುಲ್ಕದಲ್ಲಿ ರಿಯಾಯಿತಿ

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ, ಆಟೋ, ಕ್ಯಾಬ್ ಚಾಲಕರು ಮತ್ತು ಅವರ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಿಯಾಯಿತಿ ನೀಡಲಾಗಿದೆ. ತೃತೀಯ ಲಿಂಗದ, ದೃಷ್ಟಿಹೀನ ವಿದ್ಯಾರ್ಥಿಗಳು (ಬಿ.ಇಡಿ, ಎಂಬಿಎ ಹೊರತುಪಡಿಸಿ), ಕೋವಿಡ್ 19 ರಲ್ಲಿ ಸಾಂಕ್ರಾಮಿಕ ರೋಗದಿಂದ ತಂದೆ, ತಾಯಿ ಮೃತರಾಗಿದ್ದರೆ ಮಕ್ಕಳಿಗೆ ಉಚಿತ ಪ್ರವೇಶಾತಿ ನೀಡಲಾಗುತ್ತಿದೆ ಎಂದರು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಹಿಂದಿನ ಸಾಲಿನಲ್ಲಿ 2 ಸಾವಿರ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆದಿದ್ದಾರೆ. ಇಲಾಖೆಯು 5.05 ಕೋಟಿ ರೂ. ಪಾವತಿಸಿದೆ ಎಂದು ಅವರು ತಿಳಿಸಿದರು.

ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳಲ್ಲಿ ಒದಗಿಸಿದಲ್ಲಿ ಎಸ್ಎಸ್ಪಿ ಮುಖಾಂತರ ವಿದ್ಯಾರ್ಥಿ ವೇತನವಿರುತ್ತದೆ ಅಥವಾ ಪೂರ್ಣ ಶುಲ್ಕ ಮರುಭರಿಕೆಯಾಗುತ್ತದೆ ಎಂದರು.

ವಿವಿ ಕುಲಸಚಿವ ಪ್ರೊ.ಎಸ್.ಕೆ. ನವೀನ್‌ ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ. ಆನಂದಕುಮಾರ್, ಡೀನ್ ಗಳಾದ ಪ್ರೊ. ರಾಮನಾಥಂ ನಾಯ್ಡು, ಡಾ. ಚಂದ್ರೇಗೌಡ, ಹಣಕಾಸು ಅಧಿಕಾರಿ ಡಾ.ಎಸ್. ನಿರಂಜನ ರಾಜ್, ಪ್ರವೇಶಾತಿ ವಿಭಾಗದ ನಿರ್ದೇಶಕ ಎಂ. ನಂದೀಶ್ ಇದ್ದರು.

----

-- ಬಾಕ್ಸ್--

ಪ್ರಾದೇಶಿಕ ಕೇಂದ್ರಕ್ಕೆ ಜಮೀನು ಮಂಜೂರು

ರಾಜ್ಯ ಮುಕ್ತ ವಿವಿ ಪ್ರಾದೇಶಿಕ ಕೇಂದ್ರಗಳ ನಿರ್ಮಾಣಕ್ಕಾಗಿ ಯಾದಗಿರಿಯಲ್ಲಿ 2 ಎಕರೆ, ಬಿಜಾಪುರದಲ್ಲಿ 3 ಎಕರೆ, ಶಿರಾದಲ್ಲಿ 2 ಎಕರೆ, ಮಡಿಕೇರಿಯಲ್ಲಿ 1 ಎಕರೆ, ಉಡುಪಿಯಲ್ಲಿ 1 ಎಕರೆ ಜಮೀನು ಮಂಜೂರಾಗಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಸಿದ್ಧಪಾಠವನ್ನು ವಿತರಿಸಲು 8 ಕೋಟಿ ರೂ. ಅನುದಾನ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಸಂಶೋಧನೆಗೆ ಸಂಬಂಧಪಟ್ಟಂತೆ ಆನ್‌ ಲೈನ್‌ ನಲ್ಲಿ ಸಿದ್ಧಪಾಠಗಳು ಲಭ್ಯವಿವೆ. ಸಂಶೋಧನೆ ಉತ್ತೇಜನ ನೀಡುವಂತೆ ನ್ಯಾಕ್ ಸಲಹೆ ಮೇರೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''