ಹಗರಿಬೊಮ್ಮನಹಳ್ಳಿ; ಪಟ್ಟಣದಲ್ಲಿನ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ₹8 ಲಕ್ಷ ಅಂದಾಜು ಮೊತ್ತದ ಟೆಂಡರ್ ಕರೆಯಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ತಿಳಿಸಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಬೀದಿನಾಯಿಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೂರಪ್ಪ ಮಾತನಾಡಿ, ಪುರಸಭೆಯಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ನಿಯಂತ್ರಣ ಕ್ರಮಕ್ಕೆ ಚಾಲನೆ ನೀಡಲಾಗುವುದು. ಗಂಡುನಾಯಿಗಳಿಗೆ ₹3 ಸಾವಿರ, ಹೆಣ್ಣುನಾಯಿಗಳಿಗೆ ₹2 ಸಾವಿರ ಮೊತ್ತ ಸಂತಾನ ತಡೆ ಶಸ್ತ್ರಚಿಕಿತ್ಸೆಗೆ ತಗುಲುತ್ತದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್ ಮಾತನಾಡಿ, ಬೀದಿನಾಯಿಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಚಿಕನ್ ಅಂಗಡಿ ಮಾಲೀಕರ ಸಭೆ ನಡೆಸಿ ನಿರ್ವಹಣೆ ಕ್ರಮ ಸೂಚಿಸಲಾಗುವುದು. ಬೀದಿನಾಯಿಗಳಿಗೆ ಕೈಗೊಳ್ಳಲಾಗುವ ಎಬಿಸಿ (ಅನಿಮಲ್ ಬರ್ತ್ ಕಂಟ್ರೋಲ್) ಕ್ರಮಕ್ಕೆ ಪ್ರಾಣಿದಯಾ ಸಂಘದಿಂದಲೂ ಸಹಕಾರ ಅಗತ್ಯ ಎಂದರು.ಪರಿಸರ ನಿಯಂತ್ರಣಾಕಾರಿ ಜಗದೀಶ್ ಹಿರೇಮಠ್, ಪುರಸಭೆ ಸದಸ್ಯರಾದ ರಾಜೇಶ್ ಬ್ಯಾಡಿಗಿ, ಬಾಳಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗುಂಡ್ರ ಹನುಮಂತಪ್ಪ, ಮಾಜಿ ಸದಸ್ಯ ಸೆರೆಗಾರ ಹುಚ್ಚಪ್ಪ, ಮುಖಂಡರಾದ ವಿಜಯಕುಮಾರ್, ಸಿಖಂದರ್ ಖಾನ್ ಇತರರಿದ್ದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ಬೀದಿನಾಯಿಗಳ ನಿಯಂತ್ರಣದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಮಾತನಾಡಿದರು.